Advertisement

ನಿಷ್ಕಲ್ಮಶ ಭಕ್ತಿಗೆ ಜಾತಿಭೇದಗಳಿಲ್ಲ: ಪೇಜಾವರ ಶ್ರೀ

09:15 AM Mar 27, 2018 | Team Udayavani |

ಬೆಳ್ತಂಗಡಿ: ನಿಷ್ಕಲ್ಮಶ ಭಕ್ತಿಗೆ ಜಾತಿ ಭೇದವಿಲ್ಲ, ಯಾರು ಬೇಕಾದರೂ ಭಗವಂತನ ಆರಾಧನೆ ಮಾಡಬಹುದು. ಧ್ಯಾನ, ದೇವರ ಪ್ರಾರ್ಥನೆಯ ಮೂಲಕ ದೇವಸ್ಮರಣೆ ಮಾಡುವುದು ಮುಖ್ಯ ಎಂದು ಎಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ನುಡಿದರು. ಅವರು ರವಿವಾರ ಕಣಿಯೂರು ಮಹಾವಿಷ್ಣು ದೇವಸ್ಥಾನದಲ್ಲಿ ಶ್ರೀರಾಮ ಸೇವಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಶ್ರೀರಾಮ ನವಮಿ ಉತ್ಸವ, ದುರ್ಗಾಹೋಮ ಮತ್ತು ಕಟೀಲು ಮೇಳದ ಸೇವಾ ಬಯಲಾಟದ ರಜತ ಮಹೋತ್ಸವದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು.

Advertisement

ಶ್ರೀರಾಮ ಮನುಕುಲಕ್ಕೆ ಆದರ್ಶ ಪ್ರಾಯನಾಗಿದ್ದು, ಕಷ್ಟದಲ್ಲೂ ಹೇಗೆ ಜೀವ ಸಾಗಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾನೆ. ಆತನಿಗೆ ಸರಿ ಸಾಟಿ ಯಾರೂ ಇಲ್ಲ. ಅಧಿಕಾರ ವಿರುವಾಗಲೂ ಇಲ್ಲದಾಗಲೂ ಕಾಡಿಗೆ ತೆರಳುವಾಗಲೂ ಹಸನ್ಮುಖೀಯಾಗಿದ್ದು ಮಾದರಿಯಾಗಿದ್ದಾನೆ ಎಂದರು.

ಪೇಜಾವರ ಕಿರಿಯ ಯತಿ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ದೇವತಾರಾಧನೆ ಯಿಂದ ಮನುಷ್ಯರು ಲೋಕೋಪಕಾರಿಗಳಾಗಿ ಬಾಳುವುದು ಅಗತ್ಯ. ಶ್ರೀರಾಮ ನನ್ನು ಆದರ್ಶವಾಗಿ ಸ್ವೀಕರಿಸಿ ಜೀವನ ನಡೆಸಬೇಕು ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅರ್ಚಕ ವಿ| ದೇವಿ ಕುಮಾರ ಆಸ್ರಣ್ಣ ವಹಿಸಿದ್ದರು. ಕಟೀಲು ಮೇಳದ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್‌ ಶೆಟ್ಟಿ ಅವರನ್ನು ಪೇಜಾವರ ಶ್ರೀಗಳು ಸಮ್ಮಾನಿಸಿದರು. ಇದೇ ಸಂದರ್ಭದಲ್ಲಿ ಸಮಿತಿಯ ವತಿಯಿಂದ ಕಟೀಲು ಆರು ಮೇಳಗಳ ಒಟ್ಟು 350 ಕಲಾವಿದರನ್ನು ಹಾಗೂ ನೌಕರ ವೃಂದದವರನ್ನು ಗೌರವಿಸಲಾಯಿತು. ಮೇಳಗಳ ಮ್ಯಾನೇಜರುಗಳು ಕಲಾವಿದರ ಹಾಗೂ ನೌಕರರ ಪರವಾಗಿ ಗೌರವ ಸ್ವೀಕರಿಸಿದರು.

ಕಟೀಲು ಮೇಳದ ಕಲಾವಿದರ ಮತ್ತು ಕೆಲಸಗಾರರ ಶ್ರೇಯೋಭಿವೃದ್ಧಿ ಸಾಧಕ ಸಮಿತಿಗೆ ಶ್ರೀರಾಮ ಸೇವಾ
ಸಮಿತಿಯಿಂದ ರಜತ ಮಹೋತ್ಸವದ ಅಂಗವಾಗಿ ರೂ. 2 ಲಕ್ಷ ಕ್ಷೇಮನಿಧಿಯನ್ನು ಸಂಚಾಲಕ ದೇವಿಪ್ರಸಾದ್‌ ಶೆಟ್ಟಿಯವರಿಗೆ ಹಸ್ತಾಂತರಿಸಲಾಯಿತು.

Advertisement

ಪೇಜಾವರ ಮಠದ ಹಿರಿಯ ಹಾಗೂ ಕಿರಿಯ ಶ್ರೀಗಳನ್ನು ಸುಬ್ರಹ್ಮಣ್ಯ ಮುಚ್ಚಿನ್ನಾಯ ದಂಪತಿ, ದೇವಸ್ಥಾನದ ಆಡಳಿತದ ವತಿಯಿಂದ ಕೆ. ಸುರೇಂದ್ರ ಹೆಗ್ಡೆ ಹಾಗೂ ಕೆ. ಸುದರ್ಶನ ಹೆಗ್ಡೆ ಕಣಿಯೂರುಗುತ್ತು ಗೌರವಿಸಿದರು.
ಕಣಿಯೂರು ವೇ|ಮೂ| ಕೆ.ಎಂ. ಸುಬ್ರಹ್ಮಣ್ಯ ಮುಚ್ಚಿನ್ನಾಯರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಬೆಳಗ್ಗೆ ಶ್ರೀ ಮಹಾವಿಷ್ಣು ದೇವರಿಗೆ ವಿಶೇಷ ಸೇವೆಗಳು, ಕಟೀಲು ಮೇಳದ ಶ್ರೀದೇವಿಯ ಭವ್ಯ ಮೆರವಣಿಗೆ, ದುರ್ಗಾಹೋಮದ ಪೂರ್ಣಾಹುತಿ ನಡೆಯಿತು. ರಾತ್ರಿ 25ನೇ ವರ್ಷದ ಸೇವಾ ಬಯಲಾಟ ಪ್ರದರ್ಶನಗೊಂಡಿತು. ಪ್ರೇಮನಾಥ್‌ ಸ್ವಾಗತಿಸಿ, ನಾರಾಯಣ ಗೌಡ ನಿರ್ವಹಿಸಿದರು. ಆನಂದ ಶೆಟ್ಟಿ ಐಸಿರಿ ಸಮ್ಮಾನಪತ್ರ ವಾಚಿಸಿದರು. ವಿಠಲ ಶೆಟ್ಟಿ ಕೊಲ್ಲೊಟ್ಟು ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next