Advertisement

ರಾಮನು ನಾಡಿಗೆ ಬಂದನು…ನಾಳೆ ಇಲ್ಲೆಲ್ಲ ರಾಮನದ್ದೇ ಧ್ಯಾನ

03:53 PM Mar 24, 2018 | |

 ಈ ಬಾರಿ ರಾಮನವಮಿ ರಜಾದಿನವೇ ಬಂದಿರುವುದು ಮನೆಮಂದಿಯೊಂದಿಗೆ ಒಟ್ಟಾಗಿ ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಒಂದೊಳ್ಳೆ ನೆಪ. ರಾಮನಾಮ ಜಪಿಸಿದರೆ ಕಷ್ಟಗಳೆಲ್ಲವೂ ಕಳೆದುಹೋಗಿ ಮನಸ್ಸಿನಲ್ಲಿ ಶಾಂತಿ ನೆಲೆಸುತ್ತದೆ ಎಂಬ ನಂಬಿಕೆಯಿದೆ. ಶ್ರೀರಾಮನನ್ನು ಸ್ತುತಿಸಲು ಅಯೋಧ್ಯೆಗೇ ಹೋಗಬೇಕೆಂದೇನೂ ಇಲ್ಲ. ನಮ್ಮ ನಗರದಲ್ಲೇ ಇರುವ ಶ್ರೀರಾಮನ ದೇವಸ್ಥಾನಗಳಿಗೆ ಭೇಟಿ ನೀಡಬಹುದು. ಆಂಜನೇಯನ ದೇಗುಲಗಳಲ್ಲೂ ರಾಮನವಮಿಯ ಸಡಗರ ಕಾಣಬಹುದು. ಅವುಗಳಲ್ಲಿ ಕೆಲವನ್ನು ಪಟ್ಟಿ ಮಾಡಿ ನೀಡಿದ್ದೇವೆ…

Advertisement

 ರಾಮಾಂಜನೇಯ
ಹನುಮಂತನಗರದ ಹೆಸರುವಾಸಿ ಜಾಗಗಳಲ್ಲೊಂದು ರಾಮಾಂಜನೇಯ ಗುಡ್ಡ. ರಾಮಾಂಜನೇಯ ದೇಗುಲ ಇರುವ ಕಾರಣಕ್ಕೆ ಆ ಗುಡ್ಡಕ್ಕೆ ಆ ಹೆಸರು ಬಂದಿರುವುದು. ಈ ದೇವಸ್ಥಾನವನ್ನು ಕಟ್ಟಿಸಿದ್ದು ಕೆಂಗಲ್‌ ಹನುಮಂತಯ್ಯನವರು. ಶ್ರೀರಾಮ ಮತ್ತು ಆಂಜನೇಯನ ನಡುವಿನ ಸ್ನೇಹದ ದ್ಯೋತಕವಾಗಿ ಈ ದೇವಸ್ಥಾನ ತಲೆಯೆತ್ತಿದೆ. ದೇವಾಲಯದ ಮೇಲೆ ಪ್ರತಿಷ್ಠಾಪಿಸಿರುವ ಆಕಾಶದೆತ್ತರದ ವಿಗ್ರಹದಲ್ಲಿ ರಾಮ ಮತ್ತು ಆಂಜನೇಯ ಇಬ್ಬರೂ ಒಬ್ಬರನ್ನೊಬ್ಬರು ಆಲಂಗಿಸಿಕೊಂಡು ಸೋದರತ್ವವನ್ನು ಜಗತ್ತಿಗೇ ಸಾರುತ್ತಿದ್ದಾರೆ. ದೇವಸ್ಥಾನದ ಸುತ್ತ ಪಾರ್ಕ್‌ ಇರುವುದರಿಂದ ವಿಶ್ರಮಿಸಿಕೊಳ್ಳಲೂ ಇಲ್ಲಿ ಅವಕಾಶವಿದೆ. ಆವರಣದಲ್ಲಿ ಹಿಂಡು ಹಿಂಡು ಪಾರಿವಾಳಗಳು ಮನಸ್ಸಿಗೆ ಮುದ ನೀಡುತ್ತವೆ.
ಎಲ್ಲಿ?: ಹನುಮಂತನಗರ, ಬನಶಂಕರಿ 1ನೇ ಹಂತ

 ಶ್ರೀರಾಮ ಮಂದಿರ
ಎನ್‌.ಆರ್‌. ಕಾಲೊನಿಯಲ್ಲಿರುವ ಈ ದೇವಸ್ಥಾನ ಪ್ರಶಾಂತ ವಾತಾವರಣ ಮತ್ತು ದೇವರಿಗೆ ಹೂವಿನ ಅಲಂಕಾರಕ್ಕೆ ಖ್ಯಾತಿ ಪಡೆದಿದೆ. ಇಲ್ಲಿ ಶ್ರದ್ಧೆಯಿಂದ ಕೈಗೊಳ್ಳುವ ಪೂಜೆಯಿಂದಾಗಿ ಮನಸ್ಸು ಪ್ರಸನ್ನಗೊಳ್ಳುತ್ತದೆ ಎನ್ನುವುದು ಇಲ್ಲಿನ ಭಕ್ತರ ಅಭಿಮತ. ದೇವಾಲಯದ ಆಸುಪಾಸಿನಲ್ಲಿ ರಾಘವೇಂದ್ರ ಮಠವಿದೆ. 
ಎಲ್ಲಿ?: 1ನೇ ಮುಖ್ಯರಸ್ತೆ, ಎನ್‌.ಆರ್‌. ಕಾಲೊನಿ

ಗಾಳಿ ಆಂಜನೇಯ
ಬೆಂಗಳೂರಿನ ಪ್ರಖ್ಯಾತ ಆಂಜನೇಯ ದೇವಾಲಯ ಗಾಳಿ ಆಂಜನೇಯ ದೇವಸ್ಥಾನ. ಮೈಸೂರು ರಸ್ತೆಯಲ್ಲಿ ಸ್ಯಾಟಲೈಟ್‌ ಬಸ್‌ಸ್ಟಾಂಡ್‌ ದಾಟಿ ಮುಂದೆ ಸಾಗುತ್ತಿದ್ದಂತೆ ಎಡಗಡೆ ಸಿಗುತ್ತೆ ಈ ಆಂಜನೇಯನ ದೇವಸ್ಥಾನ. ಹನುಮಂತ ವಾಯುಪುತ್ರನಾಗಿರುವುದರಿಂದಲೇ ಗಾಳಿ ಎಂಬ ಹೆಸರು ಸೇರಿ, ಗಾಳಿ ಆಂಜನೇಯನೆಂದೇ ಪ್ರಖ್ಯಾತಿಯನ್ನು ಪಡೆದ ದೇವಸ್ಥಾನವಿದು. ಸುಮಾರು 600 ವರ್ಷಗಳಷ್ಟು ಇತಿಹಾಸವಿರುವ ಈ ದೇವಸ್ಥಾನವನ್ನು ಸ್ಥಾಪಿಸಿದವರು ವ್ಯಾಸರಾಜ ಮುನಿಗಳು. ಅವರು ವಿವಿಧೆಡೆ ಪ್ರತಿಷ್ಠಾಪಿಸಿದ 732 ಆಂಜನೇಯ ಮೂರ್ತಿಗಳಲ್ಲಿ ಗಾಳಿ ಆಂಜನೇಯ ಮೂರ್ತಿಯೂ ಒಂದು. ಇಲ್ಲಿರುವ ಆಂಜನೇಯ ಮೂರ್ತಿಯ ವೈಶಿಷ್ಟéವೆಂದರೆ ಬಾಲದಲ್ಲಿ ಗಂಟೆ ಕಟ್ಟಿರುವುದು! ಭಕ್ತರು ತುಂಬಾ ನಂಬುವ ದೇವರಿದು!
ಎಲ್ಲಿ?: ಮೈಸೂರು ರಸ್ತೆ, ಕೆನರಾ ಬ್ಯಾಂಕ್‌ ಪಕ್ಕ, ಬಾಪೂಜಿನಗರ

ಗಾಯತ್ರಿನಗರ ಕೋದಂಡರಾಮ
ಈ ದೇವಸ್ಥಾನದಲ್ಲಿ ರಾಮನವಮಿಯನ್ನು ಅದ್ಧೂರಿಯಾಗಿ ಆಚರಿಸುವರು. ಇಲ್ಲಿ ಶ್ರೀರಾಮ ದೇವರಿಗೆ ಮಾತ್ರವಲ್ಲದೆ ಶಿವ, ಗಣೇಶ, ಬನಶಂಕರಿ ದೇವರಿಗೂ ಪೂಜೆ ಸಲ್ಲಿಸಲಾಗುತ್ತದೆ. ರಾಮನವಮಿ ಸಂದರ್ಭದಲ್ಲಿ ರಾಮನಿಗೆ ಬೆಳ್ಳಿಯ ಕವಚ ಮತ್ತಿತರ ಆಭರಣಗಳಿಂದ ಅಲಂಕಾರ ಮಾಡಲಾಗುತ್ತದೆ. ಅದನ್ನು ನೋಡಲೆಂದೇ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಅಲ್ಲದೆ ಭಕ್ತಾದಿಗಳು ತೇರನ್ನೂ ಎಳೆದು ದೇವರ ಕೃಪೆಗೆ ಪಾತ್ರರಾಗುತ್ತಾರೆ.
ಎಲ್ಲಿ?: 1ನೇ ಮುಖ್ಯರಸ್ತೆ, ಗಾಯತ್ರಿನಗರ, 2ನೇ ಹಂತ ರಾಜಾಜಿನಗರ

Advertisement

ಮಾರುತಿ ಮಂದಿರ
ವಿಜಯನಗರದ ಹಳೆಯ ದೇವಾಲಯಗಳಲ್ಲಿ ಮಾರುತಿ ಮಂದಿರವೂ ಒಂದು. ಇಲ್ಲಿನ ಆಂಜನೇಯನ ಏಕಶಿಲಾ ವಿಗ್ರಹವನ್ನು ನೋಡಲು ಬೃಹತ್‌ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ವಾರದ ಎಲ್ಲಾ ದಿನಗಳಲ್ಲೂ ಭಕ್ತರು ಬರುತ್ತಾರಾದರೂ ಶನಿವಾರದಂದು ದೇವರ ದರ್ಶನ ಪಡೆಯಲು ಭಕ್ತರು ಕಿಕ್ಕಿರಿದು ನೆರೆದಿರುತ್ತಾರೆ.
ಎಲ್ಲಿ?: ವಿಜಯನಗರ ಮುಖ್ಯರಸ್ತೆ, ಪಿ.ಎಫ್ ಲೇಔಟ್‌, ವಿಜಯನಗರ

ಮಲ್ಲೇಶ್ವರಂ ರಾಮ ಮಂದಿರ
ಮಳಿಗೆಗಳು, ರಸ್ತೆ ಬದಿಯ ಅಂಗಡಿಗಳು ಮತ್ತು ಶಾಪಿಂಗ್‌ಪ್ರಿಯರಿಂದ ಸದಾ ಗಿಜಿಗುಡುವ ಮಲ್ಲೇಶ್ವರಂನಲ್ಲಿ ಒಂದು ರಾಮಮಂದಿರವಿದೆ. ಇದೂ ಕೂಡಾ ಹಳೆಯ ದೇವಸ್ಥಾನ. ಇಲ್ಲಿ ರಾಮನವಮಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಸುಮಾರು ಎರಡು ವಾರಗಳ ಕಾಲ ಅದ್ಧೂರಿಯಾಗಿ ಧಾರ್ಮಿಕ ಕಾರ್ಯಕ್ರಮಗಳು ನಡೆಸಲ್ಪಡುತ್ತವೆ. ಆ ಸಮಯದಲ್ಲಿ ಪ್ರತಿನಿತ್ಯ ಸ್ತೋತ ಪಠಣ, ಸೂರ್ಯನಮಸ್ಕಾರ, ನವಗ್ರಹ ಜಪ, ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ ಮತ್ತು ಪ್ರಸಾದ ಇರುತ್ತದೆ.
ಎಲ್ಲಿ?: ಈಸ್ಟ್‌ ಪಾರ್ಕ್‌ ರೋಡ್‌, 9ನೇ ಕ್ರಾಸ್‌, ಮಲ್ಲೇಶ್ವರಂ

ಕೋದಂಡರಾಮ ಈಜಿಪುರ
1950ರಲ್ಲಿ ಕಟ್ಟಲಾದ ಈ ದೇವಸ್ಥಾನ ಶೈವ ಮತ್ತು ವೈಷ್ಣವರಿಗೂ ಅಚ್ಚುಮೆಚ್ಚು. ಇಲ್ಲಿ ಶ್ರೀರಾಮ ಮಾತ್ರವಲ್ಲದೆ ಸೀತೆ, ಆಂಜನೇಯ, ವೆಂಕಟೇಶ ಕೂಡಾ ನೆಲೆಸಿದ್ದಾರೆ. ಅದರಲ್ಲೂ ವಿಶ್ವರೂಪ ತೋರಿಸುತ್ತಿರುವಂತೆ ಮೂಡಿಸಲಾಗಿರುವ ಕೋದಂಡರಾಮಸ್ವಾಮಿಯ ವಿಗ್ರಹವನ್ನು ನೋಡುತ್ತಿದ್ದರೆ ಮನಸ್ಸಿಗೆ ಶಾಂತಿ ದೊರಕುತ್ತದೆ ಎನ್ನುತ್ತಾರೆ ಇಲ್ಲಿಗೆ ಭೇಟಿ ನೀಡಿದ ಭಕ್ತರು.
ಎಲ್ಲಿ?: ಶ್ರೀರಾಮ ದೇವಸ್ಥಾನ ರಸ್ತೆ, ಗೌಡ ಮುನಿಸ್ವಾಮಿ ಪಾರ್ಕ್‌, ಈಜಿಪುರ

Advertisement

Udayavani is now on Telegram. Click here to join our channel and stay updated with the latest news.

Next