Advertisement

ಕನ್ನಡದ ಅಸ್ಮಿತೆ ಬಿತ್ತಿದವರು ರಾಮಮೂರ್ತಿ

12:23 PM Mar 12, 2018 | |

ಬೆಂಗಳೂರು: ಕನ್ನಡದ‌ ಅಸ್ಮಿತೆಯನ್ನು ಬಿತ್ತಿದವರು ಕನ್ನಡದ ವೀರ ಸೇನಾನಿ ಮ.ರಾಮಮೂರ್ತಿ ಎಂದು ಖ್ಯಾತ ಸಂಶೋಧಕ ಡಾ.ಎಂ.ಚಿದಾನಂದ ಮೂರ್ತಿ ಬಣ್ಣಿಸಿದರು.

Advertisement

ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಟನೆಗಳ ಒಕ್ಕೂಟ ಭಾನುವಾರ ಕನ್ನಡ ಸಾಹಿತ್ಯ ಪರಿಷತ್‌ನ ಅಕ್ಕಮಹಾದೇವಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮ.ರಾಮಮೂರ್ತಿ ಜನ್ಮಶತಮಾನೋತ್ಸವ ಸಮಾರಂಭದಲ್ಲಿ “ಮರೆಯಲಾಗದ ಕನ್ನಡ ವೀರಸೇನಾನಿ ಮ.ರಾಮಮೂರ್ತಿ’ ಮತ್ತು “ಕನ್ನಡ ಹಿರಿಮೆ ಗರಿಮೆ’ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಪತ್ತೇದಾರಿ ಕಾದಂಬರಿಗಳಿಂದಲೇ ಖ್ಯಾತರಾಗಿದ್ದ ರಾಮಮೂರ್ತಿ ಅವರಲ್ಲಿ ಕನ್ನಡದ ಬಗ್ಗೆ ತುಡಿತವಿತ್ತು. ಬೆಂಗಳೂರಿನಲ್ಲಿ ಕನ್ನಡತನಕ್ಕೆ ಧಕ್ಕೆ ಬಂದಾಗ ಬೀದಿಗಿಳಿದು ಹೋರಾಟ ಮಾಡುತ್ತಿದ್ದರು. ತಮಿಳಿನ ಚಿತ್ರವೊಂದು ವೀರಪುಲಕೇಶಿಗೆ ಅವಮಾನ ಮಾಡಿದಾಗ ಆ ಚಿತ್ರದ ಪ್ರದರ್ಶನವನ್ನು ಸ್ಥಗಿತಗೊಳಿಸಿದ್ದರು. ನಾವೀಗ ಹಿಡಿಯುತ್ತಿರುವ ಹಳದಿ ಮತ್ತು ಕೆಂಪು ಬಣ್ಣದ ಬಾವುಟದ ರೂವಾರಿ ಕೂಡ ಅವರೇ ಆಗಿದ್ದಾರೆ ಎಂದರು.

ಒಂದು ಕಾಲದಲ್ಲಿ ಬೆಂಗಳೂರು ಅನ್ಯಭಾಷಿಗರ ಪಾಲಾಗಿತ್ತು. ಇದನ್ನು ಗಮನಸಿದ ರಾಮಮೂರ್ತಿ ಅವರು ಕನ್ನಡದ ಬಗ್ಗೆ ಸೇನೆ ಕಟ್ಟಿ ಜಾಗೃತಿ ಮೂಡಿಸಿದರು. ದಂಡು ಪ್ರದೇಶದಲ್ಲಿ ಕನ್ನಡವನ್ನು ಕಟ್ಟಿ ಬೆಳೆಸಿದರು ಎಂದು ಮ.ರಾಮಮೂರ್ತಿ ಅವರ ಹೋರಾಟದ ಹಾದಿಯನ್ನು ಮೆಲುಕು ಹಾಕಿದರು. ಇಂಗ್ಲೀಷ್‌ ಮಾತನಾಡಿದವರಿಗೆ ದಂಡಹಾಕುತ್ತಿದ್ದ ಪ್ರವೃತ್ತಿ ಕೂಡ ಬೆಂಗಳೂರಿನಲ್ಲಿತ್ತು ಎಂದು ಚಿಮು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮನು ಬಳಿಗಾರ್‌ ಮಾತನಾಡಿ, ಮಹಾನ್‌ ಹೋರಾಟಗಾರರಾಗಿದ್ದ ಮ.ರಾಮಮೂರ್ತಿ ಅವರು ಕನ್ನಡ ಚಿಂತಕರಷ್ಟೇ ಅಲ್ಲ ಪತ್ರಕರ್ತರು ಕೂಡ ಆಗಿದ್ದರು. ಕನ್ನಡದ ಗಂಧಗಾಳಿ ಇಲ್ಲದ ಪ್ರದೇಶಗಳಲ್ಲಿ ಕನ್ನಡವನ್ನು ಪಸರಿಸಿದರು. ಕನ್ನಡ ಪರ‌ ಹೋರಾಟದಲ್ಲಿ ಮುಂಚೂಣಿಯಲ್ಲಿರುತ್ತಿದ್ದ ಅವರು ಕಿರಿಯರನ್ನು ಹೋರಾಟದಲ್ಲಿ ಬೆಳೆಸುತ್ತಿದ್ದರು ಎಂದರು.

Advertisement

ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟದ ಅಧ್ಯಕ್ಷ ಎಂ.ತಿಮ್ಮಯ್ಯ, , ಮ.ರಾಮಮೂರ್ತಿ ಅವರ ಪತ್ನಿ ಕಮಲಮ್ಮ, ಲೇಖಕ ಎನ್‌.ಆನಂದರಾಮರಾವ್‌, ರು.ಬಸಪ್ಪ, ಯ.ಮೃತ್ಯುಂಜಯ, ಪ್ರೊ.ಶಾಂತರಾಜು ಹಾಗೂ ಇತರರು ಉಪಸ್ಥಿತರಿದ್ದರು. ಇದೇ ವೇಳೆ “ಕನ್ನಡ ಚಳುವಳಿ ಒಂದು ಮರುಚಿಂತನೆ’ ಕುರಿತ ವಿಚಾರಗೋಷ್ಠಿ ಕೂಡ ನಡೆಯಿತು.

ಎಂದೆಂದಿಗೂ ಬೆಳಗಾವಿ ಕರ್ನಾಟಕದ್ದೇ: ಬೆಳಗಾವಿಯಲ್ಲಿ ಮರಾಠಿಗರು ತಮ್ಮ ಹಠವನ್ನು ಮುಂದುವರಿಸಿದ್ದಾರೆ. ಬೆಳಗಾವಿ ಎಂದೆಂದಿಗೂ ಕರ್ನಾಟಕದ ಅವಿಭಾಜ್ಯ ಅಂಗ. ಬೆಳಗಾವಿ ವಿಷಯ ಸುಪ್ರೀಂ ಕೋರ್ಟ್‌ ಅಂಗಳದಲ್ಲಿದ್ದು, ಒಂದು ವೇಳೆ ವ್ಯತಿರಿಕ್ತ ತೀರ್ಪು ಬಂದರೆ ಕನ್ನಡಿಗರು ಎಂತಹ ಹೋರಾಟಕ್ಕೂ ಸಿದ್ಧರಾಗಿರುತ್ತಾರೆ ಎಂದು ಡಾ.ಚಿದಾನಂದ ಮೂರ್ತಿ ಹೇಳಿದರು. ಮಹಾರಾಷ್ಟ್ರ ಏಕೀಕರಣ ಸಮಿತಿಯ ಕಾರ್ಯ ವೈಖರಿ ವಿರುದ್ಧ ಹರಿಹಾಯ್ದ ಅವರು, ಬೆಳಗಾವಿಯಲ್ಲಿ ಮತ್ತೆ ಕನ್ನಡಿಗರೊಬ್ಬರು ಮೇಯರ್‌ ಆಗಿದ್ದಾರೆ. ಮರಾಠಿಗರೂ ಸೇರಿ ಎಲ್ಲರೂ ಅವರನ್ನು ಒಪ್ಪಿಕೊಂಡಿದ್ದಾರೆ ಇದೊಂದು ಒಳ್ಳೆಯ ಬೆಳವಣಿಗೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next