Advertisement

ಹೊನ್ನಾವರ : ಮೀನುಗಾರರನ್ನು ಬಂಧಿಸಿ ಸರಕಾರ ಗದಾಪ್ರಹಾರ ಮಾಡುತ್ತಿದೆ : ರಾಮಾ ಮೊಗೇರ ಆರೋಪ

05:11 PM Jan 26, 2022 | Team Udayavani |

ಭಟ್ಕಳ : ಹೊನ್ನಾವರದಲ್ಲಿ ಖಾಸಗೀ ಬಂದರು ನಿರ್ಮಾಣಕ್ಕಾಗಿ ನಿಷೇಧಾಜ್ಞೆ ಜಾರಿಗೊಳಿಸಿ, ಮೀನುಗಾರರನ್ನು ಬಂಧಿಸಿ ಸರಕಾರ ಗದಾಪ್ರಹಾರ ಮಾಡುತ್ತಿದೆ ಎಂದು ರಾಷ್ಟ್ರೀಯ ಮೀನುಗಾರರ ಸಂಘಟನೆ ರಾಜ್ಯ ಅಧ್ಯಕ್ಷ ರಾಮಾ ಮೊಗೇರ ಅಳ್ವೇಕೋಡಿ ಅವರು ಗಂಭೀರ ಆರೋಪ ಮಾಡಿದ್ದಾರೆ.

Advertisement

ಈ ಕುರಿತು ಪತ್ರಿಕಾ ಹೇಳಿಕೆಯನ್ನು ನೀಡಿರುವ ಅವರು ಹೊನ್ನಾವರದ ಕಾಸರಕೋಡ ವಾಣಿಜ್ಯ ಬಂದರು ನಿರ್ಮಾಣ ಮಾಡುತ್ತಿರುವ ಸುತ್ತಮುತ್ತಲ ಪ್ರದೇಶದಲ್ಲಿ ನಿಷೇದಾಜ್ಞೆಯನ್ನು ಜಾರಿಗೊಳಿಸಿ, ಪ್ರತಿಭಟನೆಯನ್ನು ಮಾಡಲು ಬಂದ ಮೀನುಗಾರರ ಮುಖಂಡರನ್ನು ಬಂಧಿಸಿರುವುದು ಖಂಡನೀಯವಾಗಿದೆ. ಕಳೆದ ಎರಡು ದಿನಗಳಿಂದ ಮೀನುಗಾರಿಕೆಯನ್ನು ಸ್ಥಗಿತಗೊಳಿಸಿ ಮೀನುಗಾರರು ಪ್ರತಿಭಟನೆಯನ್ನು ಮಾಡುತ್ತಿದ್ದರೆ ಇದಕ್ಕೆ ಸರಕಾರ ಯಾವುದೇ ಬೆಲೆ ಕೊಡದೇ ನಿರ್ಲಕ್ಷ ಮಾಡಿದೆ. ಇದು ಮೀನುಗಾರರಿಗೆ ಸರಕಾರ ಮಾಡಿದ ಅನ್ಯಾಯವಾಗಿದ್ದು ನಮಗೆ ವಾಣಿಜ್ಯ ಬಂದರು ನಿರ್ಮಾಣ ಅಗತ್ಯವಿಲ್ಲ ಎಂದು ಈಗಾಗಲೇ ಮೀನುಗಾರರು ಹಕ್ಕೊತ್ತಾಯ ಮಾಡುತ್ತಿದ್ದರೂ ನಮ್ಮ ಧ್ವನಿಯನ್ನು ಅಡಗಿಸಲಾಗುತ್ತಿದೆ ಎಂದೂ ಅವರು ದೂರಿದರು.

ಕಳೆದ ಹಲವಾರು ದಿನಗಳಿಂದ ಪೊಲೀಸ್ ಬಲವನ್ನು ಬಳಸಿ ಮೀನುಗಾರರ ಬಾಯಿ ಮುಚ್ಚಿಸಲು ಜಿಲ್ಲಾಡಳಿತ, ಸರಕಾರ ಹವಣಿಸುತ್ತಿದ್ದು ಇದು ಎಂದಿಗೂ ಸಾಧ್ಯವಿಲ್ಲ. ಕರಾವಳಿಯಲ್ಲಿ ಮೀನುಗಾರರ ಧ್ವನಿಯನ್ನು ಅಡಗಿಸಲು ಹೊರಟರೆ ಸರಕಾರಕ್ಕೆ ಮುಂದೆ ತಕ್ಕ ಉತ್ತರ ಕೊಡಬೇಕಾಗುತ್ತದೆ ಎಂದ ಅವರು ಮೀನುಗಾರರ ಬದುಕನ್ನು ಹಾಳು ಮಾಡುವ ಇಂತಹ ಯೋಜನೆ ನಮ್ಮ ಜಿಲ್ಲೆಗೆ ಬೇಡವೇ ಬೇಡ ಎಂದು ಮೀನುಗಾರರೆಲ್ಲರೂ ಒಕ್ಕೊರಲಿನಿಂದ ಆಗ್ರಹಿಸಿದರೂ ಕೂಡಾ ಸರಕಾರಕ್ಕೆ ಕಿವಿ ಕೇಳುತ್ತಿಲ್ಲ. ಮುಂದೆ ಭಾರೀ ಯೋನೆಯ ಕಲ್ಪನೆಯನ್ನು ಕಟ್ಟುವ ನೀವು ಸಧ್ಯ ನಮಗೆ ಬದುಕು ಕಟ್ಟಿಕೊಳ್ಳಲು ಬಿಡಿ ಎನ್ನುವುದು ನಮ್ಮ ಆಗ್ರಹವಾಗಿದೆ ಎಂದರು.

ಬಂದರು ಮಾಡಬೇಕಾದರೆ ಜಿಲ್ಲಾಧಿಕಾರಿಗಳಿಂದ ಪಬ್ಲಿಕ್ ಹಿಯರಿಂಗ್ ಮಾಡಬೇಕಾಗುತ್ತದೆ. ಕಾಸರಕೋಡ ಬಂದರ ಮಾಡುವಾಗ ಪಬ್ಲಿಕ್ ಹಿಯರಿಂಗ್‌ನಲ್ಲಿ ಬಂದರು ಬೇಡವೇ ಬೇಡಾ ಎಂದು ಕಟ್ಟುನಿಟ್ಟಾಗಿ ಹೇಳಿದ್ದರೂ ಸಹ ಮಾಲಿನ್ಯ ನಿಯಂತ್ರಣ ಮಂಡಳಿ ಹೇಗೆ ಪರವಾನಿಗೆ ನೀಡಿದೆ ಎನ್ನುವುದು ಆಶ್ಚರ್ಯದ ಸಂಗತಿ ಎಂದ ಅವರು ಎಲ್ಲರನ್ನು ಕತ್ತಲೆಯಲ್ಲಿಟ್ಟು ಬಂದರು ಕಾಮಗಾರಿ ಮಾಡಲು ಸರಕಾರ ಹೊರಟಿರುವುದು ಖಂಡನೀಯ ಎಂದರು. ಗಣರಾಜ್ಯೋತ್ಸವದ ದಿನದಂದು ಸಮುದ್ರದಂಚಿಗೆ ಹೋಗಿರುವ ಮಹಿಳೆಯರೂ ಸೇರಿದಂತೆ ಮೀನುಗಾರರ ಮೇಲೆ ಪೊಲಿಸರು ಲಾಠಿ ಪ್ರಹಾರ ಮಾಡಿರುವುದು ತೀರಾ ಖಂಡನೀಯವಾಗಿದ್ದು ಇದು ತಕ್ಷಣ ನಿಲ್ಲಬೇಕು ಎಂದೂ ಅವರು ಆಗ್ರಹಿಸಿದ್ದಾರೆ.

ಸರಕಾರದ ಈ ಯೋಜನೆಯಿಂದ ಸ್ಥಳೀಯವಾಗಿ ಮೀನುಗಾರರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ, ಬದಲಿಗೆ ಮೀನುಗಾರಿಕೆಗೆ ತೊಂದರೆಯಾಗುವುದಲ್ಲದೇ ಮೀನು ಸಂತತಿ ನಾಶವಾಗುತ್ತದೆ. ಕರಾವಳಿಯ ತೀರವು ಅಪರೂಪದ ಕಡಲಾಮೆಗಳ ತಾಣವಾಗಿದ್ದು ದೂರ ದೂರಗಳಿಂದ ಮೊಟ್ಟೆ ಇಡಲು ಕಡಲಾಮೆಗಳು ಇಲ್ಲಿನ ಕಡಲ ತಡಿಗೆ ಬರುತ್ತವೆ. ಬಂದರು ನಿರ್ಮಾಣದಿಂದ ಈಗಾಗಲೇ ನಶಿಸುವ ಅಂಚಿನಲ್ಲಿರುವ ಕಡಲಾಮೆಯ ತಳಿಯು ನಶಿಸುವ ಅಪಾಯವಿದೆ. ಜಲಚರಗಳಿಗೆ ತೀವ್ರ ತೊಂದರೆಯಾಗುವುದಲ್ಲದೇ ಪ್ರಕೃತಿ ವಿಕೋಪಕ್ಕೂ ಇದು ಕಾರಣವಾಗುತ್ತದೆ. ಯಾವುದೇ ಕಾರಣಕ್ಕೂ ಮೀನುಗಾರರು ಬಂದರು ನಿರ್ಮಾಣಕ್ಕೆ ಬಿಡುವುದಿಲ್ಲ ಎಂದ ಅವರು ಸರಕಾರ ಮೀನುಗಾರರ ವಿರುದ್ಧ ಇದೇ ಧೋರಣೆಯನ್ನು ಮುಂದುವರಿಸಿದಲ್ಲಿ ಜಿಲ್ಲೆಯಾದ್ಯಂತ ಮೀನುಗಾರರು ಬೃಹತ್ ಪ್ರತಿಭಟನೆಯನ್ನು ನಡೆಸುವುದು ಅನಿವಾರ್ಯವಾಗುವುದು. ಸರಕಾರ ಇನ್ನಾದರೂ ಎಚ್ಚೆತ್ತುಕೊಂಡು ಬಂದರು ನಿರ್ಮಾಣದ ಕಾಮಗಾರಿಯನ್ನು ಕೈಬಿಡಬೇಕು ಎಂದೂ ಅವರು ಆಗ್ರಹಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next