Advertisement

ರಾಮ ಮಂದಿರ: ಧಾರ್ಮಿಕ ಅನುಷ್ಠಾನ ಅಭಿಯಾನ

10:20 AM Dec 21, 2018 | Team Udayavani |

ಉಡುಪಿ: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ಅತಿ ಶೀಘ್ರ ಮಂದಿರ ನಿರ್ಮಾಣ ಕಾರ್ಯ ಆರಂಭಗೊಳ್ಳಲು ದೈವಾನುಗ್ರಹ ಪ್ರಾಪ್ತಿಗಾಗಿ ಸಂಕಲ್ಪ ಮಾಡಿ ಡಿ. 18ರ ಗೀತಾ ಜಯಂತಿಯಿಂದ 9 ದಿನಗಳ ಕಾಲ ದೇಶಾದ್ಯಂತ ಧಾರ್ಮಿಕ ಅನುಷ್ಠಾನ ನಡೆಸಲು ಸಾಧುಸಂತರು ಕರೆ ನೀಡಿದ್ದು ಅದರಂತೆ ಮಂಗಳೂರು ವಿಭಾಗದ ಎಲ್ಲ ಗ್ರಾಮ, ತಾಲೂಕು, ಜಿಲ್ಲೆಗಳಲ್ಲಿ ಧಾರ್ಮಿಕ ಅನುಷ್ಠಾನ ಸಂಕಲ್ಪ ಅಭಿಯಾನ ಜರಗಲಿದೆ ಎಂದು ವಿಶ್ವಹಿಂದೂ ಪರಿಷತ್‌ ವಿಭಾಗ ಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌ ತಿಳಿಸಿದ್ದಾರೆ.

Advertisement

ಪ್ರತಿಯೋರ್ವ ಹಿಂದೂ ವೈಯಕ್ತಿಕವಾಗಿ 9 ದಿನಗಳ ಕಾಲ ಒಂದು ಮಾಲೆ (108) “ಶ್ರೀರಾಮ ಜಯ ರಾಮ ಜಯ ಜಯ ರಾಮ’ ರಾಮತಾರಕ ಮಂತ್ರ ಜಪ ಮಾಡಬೇಕು, ಪ್ರತಿ ನಗರ, ಗ್ರಾಮ, ಬಡಾವಣೆಗಳ ದೇವಸ್ಥಾನ, ಭಜನ ಮಂದಿರ ಮತ್ತು ಇತರ ಎಲ್ಲ ಧಾರ್ಮಿಕ ಸ್ಥಳಗಳಲ್ಲಿ ಹಿಂದೂಗಳು ಒಟ್ಟು ಸೇರಿ ಒಂದು ಗಂಟೆ  ಕಾಲ ಸಾಮೂಹಿಕ ಭಜನೆ, ಹನುಮಾನ್‌ ಚಾಲೀಸಾ, ಗೀತಾ ಪಾರಾಯಣ, ಲಲಿತಾ ಸಹಸ್ರನಾಮ, ವಿಷ್ಣು ಸಹಸ್ರನಾಮ ಇತ್ಯಾದಿ ಇಷ್ಟದೇವತಾ ಜಪ ಮಾಡಬೇಕು. ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ದೊಡ್ಡ ಮಟ್ಟದಲ್ಲಿ ಸಾಮೂಹಿಕ ಹೋಮ, ಹವನ, ಅಭಿಷೇಕ ಹಾಗೂ ಪಠಣ ಮಾಡಬೇಕೆಂಬ ಸಾಧುಸಂತರ ಕರೆಯಂತೆ ಎಲ್ಲರೂ ಅನುಷ್ಠಾನಗೊಳಿಸಬೇಕು ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು. 

ದತ್ತಜಯಂತಿ: ಸಿಎಂಗೆ ಆಹ್ವಾನ
ಬಜರಂಗ ದಳ ಪ್ರಾಂತ ಸಂಚಾಲಕ ಸುನಿಲ್‌ ಕೆ.ಆರ್‌. ಮಾತನಾಡಿ, ಮುಖ್ಯಮಂತ್ರಿ ಕುಮಾರಸ್ವಾಮಿ ದೈವಭಕ್ತರು. ಈಗ ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿ ಮಠಮಂದಿರಗಳಿಗೆ ಭೇಟಿ ನೀಡುತ್ತಿದ್ದಾರೆ. ಅವರು ದತ್ತ ಜಯಂತಿ ಸಂದರ್ಭ ದತ್ತಪೀಠಕ್ಕೆ ಬಂದು ದತ್ತ ಪಾದುಕೆ ದರ್ಶನ ಮಾಡಬೇಕು. ಅವರಿಗೆ ನಮ್ಮ ವತಿಯಿಂದ ಆಹ್ವಾನ ನೀಡುತ್ತಿದ್ದೇವೆ ಎಂದರು.

ಈ ಬಾರಿ ರಾಜ್ಯದಿಂದ ಸುಮಾರು 50,000 ಮಂದಿ ದತ್ತ ಮಾಲಾಧಾರಿಗಳು ದತ್ತಜಯಂತಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬೃಹತ್‌ ಶೋಭಾ ಯಾತ್ರೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ದತ್ತ ಪೀಠದಲ್ಲಿ ತ್ರಿಕಾಲ ಪೂಜೆಗೆ ಅವಕಾಶ ನೀಡಬೇಕು. ಅರ್ಚಕರ ನೇಮಕ ವಾಗಬೇಕು. ದತ್ತಪೀಠವನ್ನು ಹಿಂದೂಗಳಿಗೆ ಬಿಟ್ಟುಕೊಡಬೇಕು ಎಂದು ಅವರು ಹೇಳಿದರು. ವಿಹಿಂಪ ಜಿಲ್ಲಾ ಕಾರ್ಯದರ್ಶಿ ಪ್ರಮೋದ್‌ ಮಂದಾರ್ತಿ, ಜಿಲ್ಲಾ  ಸಂಚಾಲಕ ದಿನೇಶ್‌ ಮೆಂಡನ್‌, ವಿಹಿಂಪ ಸಂಘಟನ ಕಾರ್ಯದರ್ಶಿ ಕುಮಾರ್‌ ಸಿಂಧೂವಾಲಾ ಪತ್ರಿಕಾಗೋಷ್ಠಿಯಲ್ಲಿದ್ದರು.

ಉಡುಪಿ, ಮಂಗಳೂರಿನಲ್ಲಿ
ಉಡುಪಿ ಜಿಲ್ಲಾ ಮಟ್ಟದ ಸಾಮೂಹಿಕ ರಾಮತಾರಕ ಮಂತ್ರ ಪಠಣ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ 
ಡಿ. 25ರಂದು ಬೆಳಗ್ಗೆ 10ರಿಂದ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ  ಜರಗಲಿದೆ. ಡಿ. 26ರಂದು ಮಂಗಳೂರಿನ ಕದ್ರಿ ಶ್ರೀಕೃಷ್ಣ ಮಂದಿರ ದಲ್ಲಿ ಶ್ರೀ ಸೀತಾರಾಮ ದೇವರ ಪ್ರತಿಷ್ಠೆ, ರಾಮತಾರಕ ಹೋಮ ಹಾಗೂ ನಿರಂತರ ರಾಮನಾಮ ಸಂಕೀರ್ತನೆ ನಡೆಯಲಿದೆ. ಡಿ. 26ರಂದು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಸಾಮೂಹಿಕ ವಿಜಯ ಮಹಾಮಂತ್ರ, ಜಪ ಹೋಮ ತರ್ಪಣ ಹಾಗೂ  ಧಾರ್ಮಿಕ ಸಭಾ ಕಾರ್ಯಕ್ರಮ ಜರಗಲಿದೆ ಎಂದು ಶರಣ್‌ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next