ಹೊಸದಿಲ್ಲಿ : ‘ರಾಮ ಜನ್ಮಭೂಮಿಯಾಗಿರುವ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುವ ವಿಚಾರದಲ್ಲಿ ಬಿಜೆಪಿ ಸಂಸದರು ಸಹನೆ, ತಾಳ್ಮೆಯಿಂದಿರಬೇಕು’ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಅವರು ಇಂದಿಲ್ಲಿ ನಡೆದ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಸಭೆಯಲ್ಲಿ ಗೈರಾಗಿದ್ದುದು ಎದ್ದು ಕಾಣುತ್ತಿತ್ತು.
ಉತ್ತರ ಪ್ರದೇಶದ ಲೋಕಸಭಾ ಸದಸ್ಯರಾಗಿರುವ ರವೀಂದ್ರ ಕುಶ್‌ವಾಹಾ ಮತ್ತು ಹರಿ ನಾರಾಯಣ ರಾಜಭಾರ್ ಅವರು ‘ರಾಮ ಮಂದಿರ ನಿರ್ಮಾಣ ವಿಷಯದಲ್ಲಿ ಸರಕಾರದ ನಿಲುವೇನು’ ಎಂದು ಪ್ರಶ್ನಿಸಿದರು.
‘ರಾಮ ಜನ್ಮಭೂಮಿ ಎನಿಸಿಕೊಂಡಿರುವ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕೆಂದು ಎಲ್ಲರೂ ಬಯಸುತ್ತಾರೆ; ಆದರೆ ಈ ವಿಷಯದಲ್ಲಿ ಕಾನೂನಿಗೆ ಅನುಗುಣವಾಗಿ ಶಾಂತಿ, ಸಹನೆ, ತಾಳ್ಮೆಯಿಂದ ನಡೆದುಕೊಳ್ಳಬೇಕಾದ ಅಗತ್ಯವಿದೆ’ ಎಂದು ರಾಜನಾಥ್ ಸಿಂಗ್ ಹೇಳಿದರು.
‘ಆರ್‌ಎಸ್‌ಎಸ್ ಸೇರಿದಂತೆ ಹಲವಾರು ಹಿಂದು ಸಂಘಟನೆಗಳು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸೂಕ್ತ ಕಾನೂನು ಜಾರಿಗೆ ತರಬೇಕೆಂದು ಆಗ್ರಹಿಸುತ್ತಿವೆ. ಆದರೆ ರಾಮ ಜನ್ಮಭೂಮಿ ಸ್ಥಳದ ವಿವಾದವು ಸುಪ್ರೀಂ ಕೋರ್ಟಿನಲ್ಲಿ ಇತ್ಯರ್ಥಕ್ಕೆ ಬಾಕಿ ಇದೆ’ ಎಂದು ಸಭೆಗೆ ಮನವರಿಕೆ ಮಾಡಲಾಯಿತು.
‘ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆಯನ್ನುಸರಿಗಟ್ಟುವ ಯಾವುದೇ ನಾಯಕ ವಿರೋಧ ಪಕ್ಷಗಳಲ್ಲಿ ಇಲ್ಲ’ ಎಂದು ಹೇಳಿದ ರಾಜನಾಥ್ ಸಿಂಗ್, ‘2019ರ ಲೋಕಸಭಾ ಚುನಾವಣೆಗಳನ್ನು ಪಕ್ಷವು ಗೆಲ್ಲುವ ನಿಟ್ಟಿನಲ್ಲಿ ಎಲ್ಲ ಸಂಸದರು ಶ್ರಮಿಸಬೇಕು’ ಎಂದು ಕರೆ ನೀಡಿದರು.