Advertisement

Ram navami: ಬೆಲೆ ಏರಿಕೆಯ ಮಧ್ಯೆ ಹೂ, ಹಣ್ಣು ಭರ್ಜರಿ ಖರೀದಿ

10:13 AM Apr 17, 2024 | Team Udayavani |

ಬೆಂಗಳೂರು: ನಗರದಲ್ಲಿ ಬುಧವಾರ ಅದ್ಧೂರಿಯಿಂದ ರಾಮನವಮಿ ಆಚರಿಸಲು ಜನ ಮುಂದಾಗಿದ್ದು, ಎಲ್ಲೆಡೆ ರಾಮನಾಮ ಸ್ಮರಣೆ ಮನೆ ಮಾಡಿದೆ.

Advertisement

ಮಂಗಳವಾರ ಮುಂಜಾನೆ ನಗರದ ಪ್ರಮುಖ ಮಾರುಕಟ್ಟೆಗಳಾದ ಕೆ.ಆರ್‌. ಮಾರುಕಟ್ಟೆ, ಗಾಂಧಿ ಬಜಾರ್‌, ಯಶವಂತ ಪುರ, ಮಲ್ಲೇಶ್ವರಂ, ಕೆ.ಆರ್‌. ಪುರಂ ಸೇರಿದಂತೆ ನಗರದ ಪ್ರಮುಖ ಮಾರು ಕಟ್ಟೆಗಳಲ್ಲಿ ಜನರು ಲಗ್ಗೆಯಿಟ್ಟು ಅಗತ್ಯ ವಸ್ತುಗಳನ್ನು ಖರೀದಿಸುವ ದೃಶ್ಯಗಳು ನಗರದೆಲ್ಲಡೆ ಕಂಡು ಬಂದವು. ಮಾರುಕಟ್ಟೆ ಯಲ್ಲಿ ರಾಮನ ಹಬ್ಬಕ್ಕೂ ಮಾವಿನ ತೋರಣ ಕಟ್ಟುವ ಹಿನ್ನೆಲೆಯಲ್ಲಿ ಮಾವು -ಬೇವು ಎಲೆ ಹಾಗೂ ಪಾನಕ ಮಾಡಲು ಬೇಕಾದ ಕರಬೂಜ, ನಿಂಬೆಹಣ್ಣು ಹಾಗೂ ಕೋಸಂಬರಿಗೆ ಬೇಕಾದ ಸೌತೆಕಾಯಿಗೆ ಹೆಚ್ಚು ಬೇಡಿಕೆ ಇತ್ತು.

ಹಣ್ಣಿನ ಬೆಲೆ ಏರಿಕೆ ಬಿಸಿ: ಮಳೆ ಹಾಗೂ ನೀರಿನ ಕೊರತೆಯಿಂದ ಹೂವು ಹಾಗೂ ತರಕಾರಿ, ಹಣ್ಣುಹಂಪಲುಗಳ ಬೆಲೆ ಏರಿಕೆ ಯಾಗಿದ್ದು, ಮಂಗಳವಾರ ಹಬ್ಬದಅಂಗವಾಗಿ ಕೆ.ಜಿ.ಹಣ್ಣಿನ ದರ ಕನಿಷ್ಠ 10 ರೂ.ನಿಂದ 30 ರೂ.ವರೆಗೆ ಏರಿಕೆಯಾಗಿದೆ. ಒಂದು ಕೆ.ಜಿ.ಕರಬೂಜ ಹಣ್ಣು 60 ರೂ. ನಿಂದ 70 ರೂ., ನಿಂಬೆಹಣ್ಣು 20 ರೂ.ಗೆ 3 ಹಣ್ಣು, ಸೌತೆಕಾಯಿ ಒಂದಕ್ಕೆ 10 ರಿಂದ 20 ರೂ., ದ್ರಾಕ್ಷಿ ಕೆ.ಜಿ.ಗೆ 100 ರೂ., ಬಾಳೆ ಹಣ್ಣು 50ರಿಂದ 60 ರೂ. ನಂತೆ ಮಾರಾಟ ವಾಗುತ್ತಿತ್ತು. ಒಂದು ಕಂತೆ ಮಾವಿನ ಎಲೆಗೆ 20 ರೂ. ದರವಿದೆ.

ಹೂವಿನ ಬೆಲೆ ದುಬಾರಿ: ಯುಗಾದಿ ಯಿಂದ ಹೂವಿನ ಬೆಲೆಯಲ್ಲಿ ಭಾರೀ ಏರಿಕೆ ಕಂಡು ಬಂದಿದೆ. ಚಿಲ್ಲರೆ ಮಾರಾಟಗಾರರು ಕೆ.ಜಿ. ಸೇವಂತಿಗೆ ಹೂವಿಗೆ 300-350 ರೂ., ಗುಲಾಬಿ 250-300ರೂ., ಒಂದು ಮೊಳ ಮಲ್ಲಿಗೆ ಹೂವು 30 ರೂ.ಗೆ ಮಾರಾಟ ವಾಗುತ್ತಿತ್ತು. ಕೆ.ಆರ್‌. ಮಾರುಕಟ್ಟೆಯಲ್ಲಿ ಮಲ್ಲಿಗೆ 300 ರೂ., ಸುಗಂಧ ರಾಜ್‌ 180 ರೂ., ಸೇವಂತಿ 250-300 ರೂ., ಗುಲಾಬಿ 160 ರೂ., ಕನಕಾಂಬರ 600 ರೂ.ಗೆ ಮಾರಾಟವಾಗಿದೆ.

ಎಲ್ಲೆಲ್ಲಿ ವಿಶೇಷ ಪೂಜೆ?: ಶಂಕರ್‌ ಮಠದಲ್ಲಿ ಬೆಳಗ್ಗೆ 9ಕ್ಕೆ ರಾಮತಾರಕ ಹೋಮ, ಶಾರದಾ ಭಜನಾ ಮಂಡಳಿಯಿಂದ ಭಜನೆ, ಶ್ರೀರಾಮ ಸೇವಾ ಮಂಡಳಿಯಿಂದ ವಿಶೇಷ ಪಂಚಾಮೃತ ಅಭಿಷೇಕ, ಜಯನಗರದ ಜಯರಾಮ ಸೇವಾ ಮಂಡಳಿಯಿಂದ ವಿಶೇಷ ಪೂಜೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮ: ರಾಘವೇಂದ್ರ ಸೇವಾ ಸಮಿತಿಯಿಂದ ಶ್ರೀರಾಮನವಮಿ ಪ್ರಯುಕ್ತ ಬುಧವಾರ ಸಂಜೆ 6.30ಕ್ಕೆ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ದಿವ್ಯಾ ಗಿರಿಧರ್‌ ಅವರಿಂದ “ರಾಮ ರಾಮ ಎನ್ನಿರೋ’ ಶೀರ್ಷೀಕೆಯಡಿ ವಿಶೇಷ ದಾಸವಾಣಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಜಯರಾಮ ಸೇವಾ ಮಂಡಳಿಯಿಂದ ಜಯನಗರ ಸಂಜೆ 5.30ಕ್ಕೆ ವಿ. ಎಸ್‌.ಪಿ. ಪಳನಿವೇಲು ಅವರಿಂದ ನಾಗಸ್ವರ ವಾದನ ಕಾರ್ಯಕ್ರಮ ನಡೆಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next