Advertisement

ಬೆಂಗಳೂರಲ್ಲಿ ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ಕೋವಿಂದ್‌ ಮತಯಾಚನೆ

03:45 AM Jul 06, 2017 | Team Udayavani |

ಬೆಂಗಳೂರು: ಕೇಂದ್ರದ ಎನ್‌ಡಿಎ ಮೈತ್ರಿಕೂಟದ ರಾಷ್ಟ್ರಪತಿ ಅಭ್ಯರ್ಥಿ ರಾಮ್‌ನಾಥ್‌ ಕೋವಿಂದ್‌ ಅವರು ಬುಧವಾರ ಬೆಂಗಳೂರಿಗೆ ಆಗಮಿಸಿ ಮತಯಾಚನೆ ಮಾಡಿದ್ದಾರೆ.

Advertisement

ರಾಷ್ಟ್ರಪತಿ ಚುನಾವಣಾ ಪ್ರಚಾರಕ್ಕಾಗಿ ದೇಶದ ಎಲ್ಲಾ ರಾಜ್ಯಗಳಿಗೂ ಭೇಟಿ ನೀಡುತ್ತಿರುವ ರಾಮನಾಥ ಕೋವಿಂದ್‌ ಅವರು ನಗರಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ವತಿಯಿಂದ ನಗರದ ಖಾಸಗಿ ಹೋಟೆಲ್‌ನಲ್ಲಿ ಸಂಸದರು, ಶಾಸಕರ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ಪಾಲ್ಗೊಂಡ ಕೋವಿಂದ್‌ ಅವರು ರಾಷ್ಟ್ರಪತಿ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಆರಂಭದಲ್ಲಿ ಮಾತನಾಡಿದ ಶಾಸಕ ಅರವಿಂದ ಲಿಂಬಾವಳಿ, ಕೋವಿಂದ್‌ ಅವರು ಸಾಗಿಬಂದ ದಾರಿಯನ್ನು ಪರಿಚಯಿಸಿದರು. ರಾಷ್ಟ್ರಪತಿ ಸ್ಥಾನಕ್ಕೆ ಅವರು ಹೇಗೆ ಸೂಕ್ತ ಎಂಬ ಬಗ್ಗೆ ವಿವರಿಸಿದರು.

ನಂತರ ಚುಟುಕಾಗಿ ಮಾತನಾಡಿದ ರಾಮ್‌ನಾಥ್‌ ಕೋವಿಂದ್‌, ತಮ್ಮ ರಾಷ್ಟ್ರವಾದಿ ಧೋರಣೆ, ಸ್ವಾವಲಂಬಿ ಬದುಕು, ಸಾಮಾಜಿಕ ನ್ಯಾಯದ ಕುರಿತಂತೆ ಪ್ರಸ್ತಾಪಿಸಿದರು. ಪಕ್ಷದ ಶಿಸ್ತಿನ ಸಿಪಾಯಿಯಾಗಿ ಕೆಲಸ ಮಾಡುತ್ತಿದ್ದೆ. ನನ್ನನ್ನು ಇಷ್ಟು ಎತ್ತರಕ್ಕೆ ಬೆಳೆಸುವಲ್ಲಿ ಪಕ್ಷದ ನಾಯಕರ ಶ್ರಮವಿದೆ. ಇದೀಗ ಅವರ ಸೂಚನೆಯಂತೆ ಮುನ್ನಡೆದಿದ್ದೇನೆ. ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿರುವುದು ಮತ್ತಷ್ಟು ಸಂತಸ ಮೂಡಿಸಿದೆ. ಜುಲೈ 17 ರಂದು ನಡೆಯುವ ಚುನಾವಣೆಯಲ್ಲಿ ತಮಗೆ ಮತ ನೀಡುವಂತೆ ಮನವಿ ಮಾಡಿದರು.

ಇದಕ್ಕೂ ಮುನ್ನ ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ಬಂದಿಳಿದ ರಾಮ್‌ನಾಥ್‌ ಕೋವಿಂದ್‌ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಕೇಂದ್ರ ಸಚಿವ ಅನಂತಕುಮಾರ್‌, ಜಗದೀಶ್‌ ಶೆಟ್ಟರ್‌ ಮತ್ತಿತರರು ಸ್ವಾಗತಿಸಿ ರಾಜಭವನ ರಸ್ತೆಯ ಖಾಸಗಿ ಹೋಟೆಲ್‌ಗೆ ಕರೆತಂದರು. ಅಲ್ಲಿ ಸಭೆ ಆರಂಭಕ್ಕೆ ಮುನ್ನ ಕೋವಿಂದ್‌ ಅವರಿಗೆ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ ಸನ್ಮಾನಿಸಲಾಯಿತು. ಜತೆಗೆ ಶ್ರೀಗಂಧದಲ್ಲಿ ಕೆತ್ತಿರುವ ಮೈಸೂರು ಅರಮನೆಯ ಪ್ರತಿಕೃತಿ ನೀಡಿ ಗೌರವಿಸಲಾಯಿತು.

Advertisement

ಮತಯಾಚನೆಯ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಕೇಂದ್ರ ಸಚಿವರಾದ ಥಾವರ್‌ಚಂದ್‌ ಗೆಹೊÉàಟ್‌, ಅನಂತಕುಮಾರ್‌, ಡಿ.ವಿ.ಸದಾನಂದಗೌಡ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸರೋಜ್‌ ಪಾಂಡೆ, ಸಂಸದ ವಿನೋದ್‌ ಸೋನ್ಕರ್‌, ರಾಜ್ಯಸಭೆ ಸದಸ್ಯ ಶಂಸೇದ್‌ ಸಿಂಗ್‌, ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್‌ ಶೆಟ್ಟರ್‌, ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ, ಬಿಜೆಪಿಯ ಸಂಸದರು, ಶಾಸಕರು, ಬಿಆರ್‌ಎಸ್‌ ಕಾಂಗ್ರೆಸ್‌ನ ಶಾಸಕರು, ರಾಜ್ಯಸಭೆ ಸದಸ್ಯ ರಾಜೀವ್‌ ಚಂದ್ರಶೇಖರ್‌ ಮತ್ತಿತರರು ಹಾಜರಿದ್ದರು.

ಕೋವಿಂದ್‌ ಬೆಂಬಲಕ್ಕಿರುವವರು
ರಾಮ್‌ನಾಥ್‌ ಕೋವಿಂದ್‌ ಅವರಿಗೆ ಬಿಜೆಪಿಯ 17 ಸಂಸದರು, ರಾಜ್ಯಸಭೆಯ ಇಬ್ಬರು ಸದಸ್ಯರು, 44 ಶಾಸಕರ ಬೆಂಬಲವಿದೆ. ಜತೆಗೆ ರಾಜ್ಯಸಭೆ ಪಕ್ಷೇತರ ಸದಸ್ಯ ರಾಜೀವ್‌ ಚಂದ್ರಶೇಖರ್‌, ಬಿಆರ್‌ಎಸ್‌ ಕಾಂಗ್ರೆಸ್‌ ಶಾಸಕರಾದ ಪಿ.ರಾಜೀವ್‌, ತಿಪ್ಪೇಸ್ವಾಮಿ, ಸುರೇಶ್‌ಬಾಬು ಹಾಗೂ ಪಕ್ಷೇತರ ಶಾಸಕ ಬಿ.ನಾಗೇಂದ್ರ ಅವರು ಬುಧವಾರದ ಸಭೆಯಲ್ಲಿ ಹಾಜರಿದ್ದು, ಬೆಂಬಲ ಸೂಚಿಸಿದ್ದಾರೆ. ಈ ಮಧ್ಯೆ ಕರ್ನಾಟಕ ಮಕ್ಕಳ ಪಕ್ಷದ ಅಶೋಕ್‌ ಖೇಣಿ ಕೂಡ ರಾಮ್‌ನಾಥ್‌ ಕೋವಿಂದ್‌ ಅವರಿಗೆ ಬೆಂಬಲ ನೀಡುವ ಸಾಧ್ಯತೆ ಇದೆ.

ಬುಧವಾರದ ಸಭೆಗೆ ರಾಜ್ಯ ವಿಧಾನಸಭೆಯ ಎಲ್ಲಾ ಎಂಟು ಪಕ್ಷೇತರ ಶಾಸಕರಿಗೆ ಆಹ್ವಾನ ನೀಡಲಾಗಿತ್ತಾದರೂ ಬಿ.ನಾಗೇಂದ್ರ ಹೊರತುಪಡಿಸಿ ಬೇರೆ ಯಾರೂ ಬಂದಿರಲಿಲ್ಲ. ಆದರೆ, ಇನ್ನೂ 3 ಅಥವಾ ನಾಲ್ಕು ಶಾಸಕರು ಕೋವಿಂದ್‌ ಅವರನ್ನು ಬೆಂಬಲಿಸುವ ನಿರೀಕ್ಷೆಯನ್ನು ಬಿಜೆಪಿ ಇಟ್ಟುಕೊಂಡಿದೆ.

ಶಿಷ್ಠಾಚಾರಕ್ಕೆ ಆದ್ಯತೆ
ರಾಮ್‌ನಾಥ್‌ ಕೋವಿಂದ್‌ ಅವರು ರಾಷ್ಟ್ರಪತಿ ಅಭ್ಯರ್ಥಿಯಾಗಿರುವುದರಿಂದ ಅವರ ಬೆಂಗಳೂರು ಆಗಮನದ ವೇಳೆ ಶಿಷ್ಠಾಚಾರ ಪಾಲಿಸಲು ಆದ್ಯತೆ ನೀಡಲಾಯಿತು. ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ಅವರನ್ನು ಸ್ವಾಗತಿಸಿದ ಬಿಜೆಪಿಯ ಹಿರಿಯ ನಾಯಕರು ನೇರವಾಗಿ ಖಾಸಗಿ ಹೋಟೆಲ್‌ಗೆ ಕರೆತಂದರು. 

Advertisement

Udayavani is now on Telegram. Click here to join our channel and stay updated with the latest news.

Next