ಚಿಕಾಗೋ: ಐತಿಹಾಸಿಕ ರಾಮಮಂದಿರ ರಥಯಾತ್ರೆಗೆ ಚಿಕಾಗೋದಿಂದ ಮಾರ್ಚ್ 25 ರಂದು (ಸೋಮವಾರ) ಚಾಲನೆ ನೀಡಲಾಗುತ್ತಿದ್ದು, ಅಮೆರಿಕದ 48 ರಾಜ್ಯಗಳ 851 ದೇವಾಲಯಗಳಿಗೆ ತೆರಳಲಿದ್ದು, ಮುಂದಿನ 60 ದಿನಗಳಲ್ಲಿ 8,000 ಮೈಲುಗಳಿಗಿಂತ ಹೆಚ್ಚು ದೂರವನ್ನು ಕ್ರಮಿಸಲಿದೆ.
ಟೊಯೊಟಾ ಸಿಯೆನ್ನಾ ವ್ಯಾನ್‌ನ ಮೇಲೆ ನಿರ್ಮಿಸಲಾದ ಆಕರ್ಷಕ ರಥದಲ್ಲಿ ಯೋಧ್ಯೆಯ ರಾಮಮಂದಿರದಿಂದ ವಿಶೇಷ ಪ್ರಸಾದ ಮತ್ತು ಪ್ರಾಣ ಪ್ರತಿಷ್ಠಾ ಪೂಜಿತ ಅಕ್ಷತೆ ಮತ್ತು ಕಲಶದೊಂದಿಗೆ ರಾಮ, ಸೀತೆ, ಲಕ್ಷ್ಮಣ ಮತ್ತು ಹನುಮಂತನ ಪ್ರತಿಮೆಗಳನ್ನು ಒಳಗೊಂಡಿದೆ.
ರಥಯಾತ್ರೆಯನ್ನು ಆಯೋಜಿಸುತ್ತಿರುವ ವಿಶ್ವ ಹಿಂದೂ ಪರಿಷತ್ ಆಫ್ ಅಮೆರಿಕ (VHPA) ನ ಪ್ರಧಾನ ಕಾರ್ಯದರ್ಶಿ ಅಮಿತಾಬ್ ಮಿತ್ತಲ್ ಪ್ರಕಾರ “ರಾಮ ಮಂದಿರ ಉದ್ಘಾಟನೆಯು ಪ್ರಪಂಚದಾದ್ಯಂತದ 1.5 ಶತಕೋಟಿ ಹಿಂದೂಗಳ ಹೃದಯವನ್ನು ಸಂತೋಷದಿಂದ ತುಂಬಿದೆ, ಹೊಸ ಶಕ್ತಿ ಮತ್ತು ನಂಬಿಕೆಗೆ ಕಾರಣವಾಗಿದೆ. ಅಮೆರಿಕ ರಾಷ್ಟ್ರವ್ಯಾಪಿ ರಥಯಾತ್ರೆ ಮಾರ್ಚ್ 25 ರಂದು ಅಮೆರಿಕಾದ ಚಿಕಾಗೋದಿಂದ ಪ್ರಾರಂಭವಾಗಲಿದೆ ಮತ್ತು 8000 ಮೈಲುಗಳಷ್ಟು ಪ್ರಯಾಣಿಸಲಿದೆ. ಇದು ಅಮೆರಿಕದ 851 ದೇವಾಲಯಗಳನ್ನು ಮತ್ತು ಕೆನಡಾದಲ್ಲಿ ಸುಮಾರು 150 ದೇವಾಲಯಗಳನ್ನು ಒಳಗೊಳ್ಳಲಿದೆ. ರಥ ಯಾತ್ರೆಯ ಕೆನಡಾ ವಿಭಾಗ ಪ್ರತ್ಯೇಕವಾಗಿದ್ದು, ಕೆನಡಾದ ವಿಶ್ವ ಹಿಂದೂ ಪರಿಷತ್ ಆಯೋಜಿಸುತ್ತಿದೆ ಎಂದು ತಿಳಿಸಿದ್ದಾರೆ.
” ರಥಯಾತ್ರೆಯ ಉದ್ದೇಶವು ಹಿಂದೂ ಧರ್ಮದ ಜಾಗೃತಿ, ಶಿಕ್ಷಣ ಮತ್ತು ಸಬಲೀಕರಣವಾಗಿದೆ. ಯಾತ್ರೆಯು ಎಲ್ಲಾ ಹಿಂದೂಗಳು ಒಗ್ಗೂಡಲು ಮತ್ತು ಭಾಗವಹಿಸಲು ಅವಕಾಶ ಒದಗಿಸುತ್ತದೆ, ಇದು ಹಿಂದೂ ನೀತಿ ಮತ್ತು ಧರ್ಮದ ಪುನರುಜ್ಜೀವನಕ್ಕೆ ಕಾರಣವಾಗುತ್ತದೆ” ಎಂದು ಯುನೈಟೆಡ್ ಸ್ಟೇಟ್ಸ್‌ನ ಎಲ್ಲಾ ದೇವಾಲಯಗಳ ಉನ್ನತ ಸಂಸ್ಥೆಯಾಗಿರುವ ಹಿಂದೂ ಮಂದಿರ ಎಂಪವರ್‌ಮೆಂಟ್ ಕೌನ್ಸಿಲ್ (HMEC) ನ ತೇಜಲ್ ಶಾ ಹೇಳಿದ್ದಾರೆ.
“ನಮಗೆ ಮತ್ತು ವಿಶೇಷವಾಗಿ ನಮ್ಮ ಭವಿಷ್ಯದ ಪೀಳಿಗೆಗೆ ಜಾಗೃತಿ ಮೂಡಿಸಲು ಮತ್ತು ಪ್ರಪಂಚದಾದ್ಯಂತ ಹಿಂದೂ ಧರ್ಮವನ್ನು ಹರಡಲು ಅಭಿಯಾನದಲ್ಲಿ ಒಗ್ಗಟ್ಟಾಗಿ ಮತ್ತು ಬಲವಾಗಿ ಉಳಿಯುವುದು ಬಹಳ ಮುಖ್ಯ” ಎಂದು ಶಾ ಹೇಳಿದ್ದಾರೆ.