ಹೊಸದಿಲ್ಲಿ : ಅಯೋಧ್ಯೆಯಲ್ಲಿನ ಬಾಬರಿ ಮಸೀದಿ – ರಾಮ ಜನ್ಮಭೂಮಿ ವಿವಾದಕ್ಕೆ ಶಿಯಾ ಸೆಂಟ್ರಲ್ ವಕ್‌ಫ್ ಮಂಡಳಿ ಹೊಸ ಪರಿಹಾರವೊಂದನ್ನು ಸೂಚಿಸಿದೆ.
ಶಿಯಾ ಸೆಂಟ್ರಲ್ ವಕ್‌ಫ್ ಮಂಡಳಿಯ ಸೂತ್ರದ ಪ್ರಕಾರ ರಾಮ ಮಂದಿರವನ್ನು ಅಯೋಧ್ಯೆಯಲ್ಲಿ ಕಟ್ಟಬಹುದಾಗಿದೆ ಮತ್ತು ಬಾಬರಿ ಮಸೀದಿಯನ್ನು ಲಕ್ನೋದಲ್ಲಿ ನಿರ್ಮಿಸಬಹುದಾಗಿದೆ.
ರಾಮ ಜನ್ಮಭೂಮಿ ಮತ್ತು ಬಾಬರಿ ಮಸೀದಿ ವಿಷಯದಲ್ಲಿನ ಎಲ್ಲ ಹಿತಾಸಕ್ತಿದಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಡೆಸಿದ ಚರ್ಚೆ-ಸಮಾಲೋಚನೆಯಲ್ಲಿ ಈ ಪರಿಹಾರ ಸೂತ್ರವನ್ನು ಸಿದ್ಧಪಡಿಸಲಾಗಿದೆ ಎಂದು ಶಿಯಾ ಸೆಂಟ್ರಲ್ ವಕ್‌ಫ್ ಮಂಡಳಿ ಅಧ್ಯಕ್ಷ ಸೈಯದ್ ವಸೀಮ್ ರಿಜ್ವಿ ಹೇಳಿದರು.
“ಈ ಪರಿಹಾರ ಸೂತ್ರದಿಂದ ದೇಶದಲ್ಲಿ ಶಾಂತಿ ಮತ್ತು ಸಹೋದರತೆ ಏರ್ಪಡುತ್ತದೆ’ ಎಂದು ರಿಜ್ವಿ ಹೇಳಿದರು.
Related Articles
“ರಾಮ ಜನ್ಮಭೂಮಿ-ಬಾಬರಿ ಮಸೀದಿ ವಿವಾದವನ್ನು ಇತ್ಯರ್ಥ ಪಡಿಸುವ ನಿಟ್ಟಿನಲ್ಲಿ ಕೈಗೊಳ್ಳಲಾಗಿರುವ ಈ ಸೌಹಾರ್ದಯುತ ನಿರ್ಧಾರದ ಪ್ರಕಾರ ಯಾವುದೇ ಹೊಸ ಮಸೀದಿಯನ್ನು ಅಯೋಧ್ಯೆ ಅಥವಾ ಫೈಜಾಬಾದ್‌ನಲ್ಲಿ ನಿರ್ಮಿಸುವುದಿಲ್ಲ; ವಕ್‌ಫ್ ಮಂಡಳಿಯು ಲಕ್ನೋದಲ್ಲಿ ಮುಸ್ಲಿಂ ಬಾಹುಳ್ಯದ ಪ್ರದೇಶವೊಂದನ್ನು ಗುರುತಿಸಿ ಅಲ್ಲಿ ಮಸೀದಿ ನಿರ್ಮಿಸುವ ಪ್ರಸ್ತಾವವನ್ನು ಸರಕಾರಕ್ಕೆ ತಿಳಿಸಲಿದೆ’ ಎಂದು ರಿಜ್ವಿ ಹೇಳಿದರು.
ರಾಮ ಜನ್ಮಭೂಮಿ ಟ್ರಸ್ಟ್ ಅಧ್ಯಕ್ಷ ನೃತ್ಯ ಗೋಪಾಲ ದಾಸ್ ಅವರು ಭಾಗವಹಿಸಿದ್ದ ಸಭೆಯಲ್ಲಿ ಅಖೀಲ ಭಾರತೀಯ ಅಖಾಡ ಪರಿಷತ್ “ಅಯೋಧ್ಯೆ ಅಥವಾ ಫೈಜಾಬಾದ್‌ನಲ್ಲಿ ಯಾವುದೇ ಮಸೀದಿಯ ನಿರ್ಮಾಣಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು’.
ಇದೀಗ ರೂಪಿಸಲಾಗಿರುವ ಅಯೋಧ್ಯೆ ವಿವಾದ ಇತ್ಯರ್ಥ ಪರಿಹಾರ ಸೂತ್ರದ ನಿರ್ಧಾರವನ್ನು ಡಿ.5ರಂದು (ಬಾಬರಿ ಮಸೀದಿ ಧ್ವಂಸಗೊಳಿಸಲಾದ 25ನೇ ವರ್ಷದ ಮುನ್ನಾದಿನ) ಸುಪ್ರೀಂ ಕೋರ್ಟ್ ಗೆ ತಿಳಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ರಿಜ್ವಿ ಹೇಳಿದರು.
ರಿಜ್ವಿ ಅವರು ಮುಂದುವರಿದು, “ಸುನ್ನಿ ವಕ್‌ಫ್ ಬೋರ್ಡ್ ಹಲವಾರು ನ್ಯಾಯಾಲಯಗಳಲ್ಲಿ ತನ್ನ ನೋಂದಾವಣೆ ಕೇಸನ್ನು ಸೋತಿದ್ದು ಈಗ ಶಿಯಾ ವಕ್‌ಫ್ ಬೋರ್ಡ್ ಮಾತ್ರವೇ ಬಾಬರಿ ಮಸೀದಿ ಮೇಲಿನ ಹಕ್ಕನ್ನು ಹೊಂದಿದೆ’ ಎಂದು ಹೇಳಿದರು.