ಲಕ್ನೋ:ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಬುಧವಾರ(ಆಗಸ್ಟ್ 05-2020) ಭೂಮಿ ಪೂಜೆ ನಡೆಯಲು ಕ್ಷಣಗಣನೆ ಆರಂಭಗೊಂಡಿದ್ದು, ಕೋಟ್ಯಾನುಕೋಟಿ ಹಿಂದೂಗಳ ಮಹಾಸ್ವಪ್ನ 12.30ಕ್ಕೆ ಭೂಮಿಪೂಜೆಯ ಮೂಲಕ ಮೂರ್ತ ರೂಪ ತಾಳಲಿದೆ. ರಾಮಮಂದಿರ ನಿರ್ಮಾಣದ ಭೂಮಿ ಪೂಜೆ ಹಿನ್ನೆಲೆಯಲ್ಲಿ ಧಾರ್ಮಿಕ ವಿಧಿ, ವಿಧಾನ ಆರಂಭವಾಗಿದ್ದು, ಗೌರಿ ಗಣೇಶ ಪೂಜೆ ನಡೆಯುತ್ತಿದೆ ಎಂದು ವರದಿ ತಿಳಿಸಿದೆ.
ಭೂಮಿ ಪೂಜೆ ನೆರವೇರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸುತ್ತಿರುವ ನಿಟ್ಟಿನಲ್ಲಿ ಹನುಮಾನ್ ದೇವಾಲಯದಲ್ಲಿ ಮೊದಲು ಸ್ಯಾನಿಟೈಸ್ ಮಾಡಲಾಗಿದೆ. ರಾಮಜನ್ಮಭೂಮಿ ಆವರಣದಲ್ಲಿ ಎಂಟು ಮಂದಿ ಪುರೋಹಿತರು ಭೂಮಿ ಪೂಜೆ ನೆರವೇರಿಸಲಿದ್ದಾರೆ.
9.30ಕ್ಕೆ ಪ್ರಧಾನಿ ಮೋದಿ ಅವರು ವಿಶೇಷ ವಿಮಾನದಲ್ಲಿ ಲಕ್ನೋಗೆ ತೆರಳಲಿದ್ದಾರೆ. ಲಕ್ನೋ ತಲುಪಿದ ನಂತರ ಹೆಲಿಕಾಪ್ಟರ್ ನಲ್ಲಿ ಅಯೋಧ್ಯೆಗೆ ತೆರಳಲಿದ್ದಾರೆ ಎಂದು ವರದಿ ವಿವರಿಸಿದೆ.
ನಂತರ ಪ್ರಧಾನಿ ಅವರು ಹನುಮಾನ್ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಭೂಮಿ ಪೂಜೆಯಲ್ಲಿ ಪ್ರಧಾನಿ ಮೋದಿ, ಶ್ರೀರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಧ್ಯಕ್ಷ ನೃತ್ಯ ಗೋಪಾಲ್ ದಾಸ್, ಆರ್ ಎಸ್ ಎಸ್ ಮುಖ್ಯಸ್ಥ ಭಾಗವತ್ , ಉತ್ತರಪ್ರದೇಶ ಗವರ್ನರ್ ಆನಂದಿಬೆನ್ ಪಟೇಲ್ ಮತ್ತು ಸಿಎಂ ಯೋಗಿ ಆದಿತ್ಯನಾಥ್ ಪಾಲ್ಗೊಳ್ಳಲಿದ್ದಾರೆ.
ಅಯೋಧ್ಯೆಯಲ್ಲಿ ನಡೆಯಲಿರುವ ಐತಿಹಾಸಿಕ ಭೂಮಿ ಪೂಜೆಯನ್ನು ಸಾರ್ವಜನಿಕರು ವೀಕ್ಷಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಪವಿತ್ರ ನಗರದಾದ್ಯಂತ ಬೃಹತ್ ಸಿಸಿಟಿವಿ ಸ್ಕ್ರೀನ್ಸ್ ಅಳವಡಿಸಲಾಗಿದೆ.