ಅಯೋಧ್ಯೆ: ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ಭವ್ಯ ರಾಮಮಂದಿರದಲ್ಲಿ ರಾಮಲಲ್ಲಾನ ವಿಗ್ರಹ ಪ್ರತಿಷ್ಠಾಪನೆಗೂ ಮುನ್ನ ಜನವರಿ 17ರಂದು ಹಮ್ಮಿಕೊಂಡಿದ್ದ ರಾಮಲಲ್ಲಾ ವಿಗ್ರಹ ಪುರ ಮೆರವಣಿಗೆಯನ್ನು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ರದ್ದುಗೊಳಿಸಿರುವುದಾಗಿ ತಿಳಿಸಿದೆ.
ಇದನ್ನೂ ಓದಿ:Maldives Row: ಮಾಲ್ಡೀವ್ಸ್ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಸಿದ್ಧತೆ
ಅಯೋಧ್ಯೆ ನಗರದಲ್ಲಿ ರಾಮಲಲ್ಲಾ ವಿಗ್ರಹ ಮೆರವಣಿಗೆಯ ಸಂದರ್ಭದಲ್ಲಿ ಅಪಾರ ಪ್ರಮಾಣದ ಭಕ್ತರು ರಾಮಲಲ್ಲಾ ವಿಗ್ರಹದ ಛಾಯಾಚಿತ್ರ ಸೆರೆ ಹಿಡಿಯಲು ಮುಂದಾಗುವುದರಿಂದ ಜನದಟ್ಟಣೆ ಸಂಭವಿಸಬಹುದು ಎಂದು ಟ್ರಸ್ಟ್ ಹೇಳಿದೆ. ಆದರೂ ಪುರ ಮೆರವಣಿಗೆ ರದ್ದಗೊಂಡಿದ್ದರೂ ಕೂಡಾ ಜನವರಿ 17ರಂದು ರಾಮ ಜನ್ಮಭೂಮಿ ಆವರಣದಲ್ಲಿ ನೂತನ ವಿಗ್ರಹದ ಮೆರವಣಿಗೆ ನಡೆಸಲು ಟ್ರಸ್ಟ್ ಸಿದ್ಧತೆ ನಡೆಸಿದೆ ಎಂದು ಮಾಹಿತಿ ನೀಡಿದೆ.
ಹಿರಿಯ ಅಧಿಕಾರಿಗಳು ಮತ್ತು ಕಾಶಿ ಕ್ಷೇತ್ರದ ಹಿರಿಯ ಸಂತರ ಜತೆಗಿನ ಸಭೆಯ ನಂತರ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಈ ನಿರ್ಧಾರವನ್ನು ತೆಗೆದುಕೊಂಡಿರುವುದಾಗಿ ಹೇಳಿದೆ. ಅಪಾರ ಪ್ರಮಾಣದ ಭಕ್ತರನ್ನು ನಿಯಂತ್ರಿಸುವುದು ಹಾಗೂ ಭದ್ರತೆಯ ಕಾರಣದಿಂದ ಪುರ ಮೆರವಣಿಗೆ ರದ್ದುಗೊಳಿಸಲಾಗಿದೆ.
ಅಯೋಧ್ಯೆ ಜಿಲ್ಲಾಡಳಿತ ನೀಡಿದ ಮಾಹಿತಿ ಪ್ರಕಾರ, ನೂತನ ರಾಮಲಲ್ಲಾ ವಿಗ್ರಹವನ್ನು ಪುರ ಮೆರವಣಿಗೆಗೆ ತಂದರೆ ಈ ಸಂದರ್ಭದಲ್ಲಿ ಭಾರೀ ಪ್ರಮಾಣದ ಭಕ್ತರು ಮತ್ತು ಯಾತ್ರಾರ್ಥಿಗಳನ್ನು ನಿಯಂತ್ರಿಸುವುದು ತುಂಬಾ ಕಠಿನವಾದ ಕೆಲಸವಾಗಲಿದೆ. ಆ ನಿಟ್ಟಿನಲ್ಲಿ ಟ್ರಸ್ಟ್ ಪುರ ಮೆರವಣಿಗೆಯನ್ನು ರದ್ದುಗೊಳಿಸುವ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದೆ.