ಮಾನ್ವಿ: ಬಡ ಕೂಲಿ ಕಾರ್ಮಿಕ ಗರ್ಭಿಣಿಯರು, ಮಹಿಳೆಯರ ಆರೋಗ್ಯ ಮತ್ತು ಸುರಕ್ಷತೆಗೆ ಆದ್ಯತೆ ನೀಡುವಂತೆ ಒತ್ತಾಯಿಸಿ ಕರ್ನಾಟಕ ಜನಾರೋಗ್ಯ ಸಂಘಟನೆ ಮತ್ತು ಜಾಗೃತ ಮಹಿಳಾ ಸಂಘಟನೆಯಿಂದ ಇಲ್ಲಿನ ಶಾಸಕರ ಭವನದ ಎದುರು ಪ್ರತಿಭಟನೆ ನಡೆಸಲಾಯಿತು.
ಗರ್ಭಿಣಿಯರಿಗೆ ಪ್ರಸವ ಪೂರ್ವ ಆರೈಕೆ ಗುಣಮಟ್ಟ ಹೆಚ್ಚಿಸುವುದು ಸೇರಿದಂತೆ ಹೆರಿಗೆ ಸೇವೆಗಳ ಗುಣಮಟ್ಟ, ಸರ್ಕಾರಿ ಆರೋಗ್ಯ ವ್ಯವಸ್ಥೆಯಲ್ಲಿ ಪಾರದರ್ಶಕತೆ, ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎಂಬಿಬಿಎಸ್ ವೈದ್ಯರ
ನೇಮಕ ಮಾಡುವುದು, ಖಾಸಗಿ ಆಸ್ಪತ್ರೆಗಳಿಂದ ಆಗುವ ಸುಲಿಗೆ ತಪ್ಪಿಸುವುದು, ಸರ್ಕಾರಿ ಅಸ್ಪತ್ರೆಗಳಲ್ಲಿ ಗರ್ಭಿಣಿಯರ ತಪಾಸಣೆಗೆ ಸ್ಕ್ಯಾನಿಂಗ್ ಸೌಲಭ್ಯ, ರಕ್ತ ಸಂಗ್ರಹ ಘಟಕ ಪ್ರಾರಂಭಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಹಕ್ಕೊತ್ತಾಯಕ್ಕಾಗಿ ರ್ಯಾಲಿ ಮತ್ತು ಬಹಿರಂಗ ಸಭೆ ಮೂಲಕ ಪ್ರತಿಭಟನೆ ನಡೆಸಿದರು.
ಕರ್ನಾಟಕ ಜನಾರೋಗ್ಯ ಚಳವಳಿ ಅಧ್ಯಕ್ಷೆ ಡಾ| ಅಖೀಲಾ ವಾಸನ್ ಮಾತನಾಡಿ, ಜಿಲ್ಲೆಯಲ್ಲಿ ಗರ್ಭಿಣಿಯರಿಗೆ ಸರಿಯಾದ ಚಿಕಿತ್ಸೆಗಳು ದೊರೆಯದೆ ಅನೇಕರು ರಕ್ತಹೀನತೆ, ಕಡಿಮೆ ತೂಕ, ಬಿಪಿ, ಮೂತ್ರ ತೊಂದರೆ ಹಾಗೂ ಕಬ್ಬಿಣಾಂಶದ ಕೊರತೆಯಿಂದ ಸಾವನ್ನಪ್ಪುತ್ತಿದ್ದಾರೆ. ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಜ್ಞ ವೈದ್ಯರ ಸಮಸ್ಯೆ ಇದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಗರ್ಭಿಣಿಯರ ತಪಾಸಣೆಗೆ ಸ್ಕಾ Âನಿಂಗ್ ವ್ಯವಸ್ಥೆ ಇಲ್ಲದೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಹಣವಿಲ್ಲದೆ ಬಡ ಗರ್ಭಿಣಿಯರು ತೊಂದರೆ ಎದುರಿಸುವಂತಾಗಿದೆ. ಕೂಡಲೇ ಸರ್ಕಾರ ಈ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕೆಂದು ಪಟ್ಟು ಹಿಡಿದರು.
ಪ್ರತಿಭಟನಾ ಸ್ಥಳಕ್ಕೆ ವಿಧಾನ ಪರಿಷತ್ ಸದಸ್ಯ ಎನ್. ಎಸ್. ಭೋಸರಾಜು ಮತ್ತು ಶಾಸಕ ಹಂಪಯ್ಯ ನಾಯಕ ಭೇಟಿ ನೀಡಿ ಮನವಿ ಸ್ವೀಕರಿಸಿ ಮಾತನಾಡಿ, ಸರ್ಕಾರದ ಮಟ್ಟದಲ್ಲಿ ಈಗಾಗಲೇ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಎಂಬಿಬಿಎಸ್ ವೈದ್ಯರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಅದೇ ರೀತಿಯಾಗಿ ಆಸ್ಪತ್ರೆಗಳಲ್ಲಿ ಮೂಲ ಸೌಕರ್ಯ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ದೊರಕಿಸುವ ವ್ಯವಸ್ಥೆ ಮಾಡಲಾಗಿದೆ. ವೈದ್ಯರ ಕೊರತೆ ನೀಗಿಸಲು ಗುತ್ತಿಗೆ ಆಧಾರದ ಮೇಲೆ ಎಂಬಿಬಿಎಸ್ ವೈದ್ಯರನ್ನು ನಿಯೋಜಿಸಲಾಗಿದೆ. ಗರ್ಭಿಣಿಯರಲ್ಲಿ ಪೌಷ್ಟಿಕತೆ ಕಾಪಾಡಲು ಅಂಗನವಾಡಿ ಕೇಂದ್ರಗಳ ಮೂಲಕ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಉಳಿದ ಬೇಡಿಕೆಗಳ ಈಡೇರಿಕೆ ಬಗ್ಗೆ ಜಿಲ್ಲಾಧಿಕಾರಿ ಮೂಲಕ
ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ| ನಜೀರ್ ಅಹಮ್ಮದ್, ತಹಶೀಲ್ದಾರ್ ಅಮರೇಶ ಬಿರಾದಾರ, ತಾಲೂಕು ವೈದ್ಯಾಧಿಕಾರಿ ಚಂದ್ರಶೇಖರಯ್ಯ, ಸಿಪಿಐ ಚಂದ್ರಶೇಖರ, ಸಿಡಿಪಿಒ ಎನ್.ಎಸ್. ಖಾಜಿ, ಪಿಎಸ್‌ಐ ಮಂಜುನಾಥ ಇದ್ದರು.