ರಕುಲ್‌ಪ್ರೀತ್ ಸಿಂಗ್, ತೆಲುಗಿನಲ್ಲಿ ಇದು ಬಹಳ ಜನಪ್ರಿಯ ಹೆಸರು. ಈಗಾಗಲೇ 25ಕ್ಕೂ ಹೆಚ್ಚು ತೆಲುಗು ಚಿತ್ರಗಳಲ್ಲಿ ಹೊಸ ಪೀಳಿಗೆಯ ಬಹುತೇಕ ಎಲ್ಲ ಜನಪ್ರಿಯ ನಾಯಕರ ಜತೆಗೆ ರಕುಲ್ ನಟಿಸಿದ್ದಾಳೆ. ಅಂತೆಯೇ ನೆರೆಯ ತಮಿಳು ಮತ್ತು ಕನ್ನಡ ನಾಡುಗಳಿಗೂ ಹೋಗಿ ಬಂದಿದ್ದಾಳೆ.
ಹಾಗೇ ನೋಡಿದರೆ ರಕುಲ್ ಮೊದಲು ಬಣ್ಣ ಹಚ್ಚಿದ್ದೇ ಕನ್ನಡದ ಗಲ್ಲಿ ಎಂಬ ಚಿತ್ರದಲ್ಲಿ. ಆಂಧ್ರ ಮತ್ತು ತೆಲಂಗಾಣದಲ್ಲಿ ರಕುಲ್ ತೆಲುಗಿನವಳೇ ಆಗಿದ್ದಾಳೆ. ತೆಲಂಗಾಣ ಸರಕಾರ ಅವಳನ್ನು ಭೇಟಿ ಬಚಾವೋ ಭೇಟಿ ಪಢಾವೋ ಕಾರ್ಯಕ್ರಮದ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿದೆ. ಇಷ್ಟು ಮಾತ್ರವಲ್ಲದೆ ಮರಣಾನಂತರ ಅಂಗಾಂಗ ದಾನ ಮಾಡುವ ಒಪ್ಪಂದಕ್ಕೂ ಸಹಿ ಹಾಕಿದ್ದಾಳೆ. ಇದಿಷ್ಟು ರಕುಲ್ ಎಂಬ ನಟಿಯ ಪರಿಚಯ.
ದಕ್ಷಿಣದಲ್ಲಿ ಮಿಂಚಿದ ಎಲ್ಲ ನಟಿಯರಂತೆ ರಕುಲ್‌ಗೂ ಈಗ ಬಾಲಿವುಡ್‌ನಲ್ಲೂ ಹೆಸರು ಗಳಿಸಬೇಕೆಂಬ ಆಶೆಯಾಗಿದೆ. ಈ ನಿಟ್ಟಿನಲ್ಲೀಗ ಅವಳು ಪ್ರಯತ್ನ ನಿರತಳಾಗಿದ್ದಾಳೆ. ಹಾಗೆಂದು ರಕುಲ್ ಬಾಲಿವುಡ್ ಬಾಗಿಲು ಬಡಿಯುತ್ತಿರುವುದು ಇದೇ ಮೊದಲೇನಲ್ಲ. ನಾಲ್ಕು ವರ್ಷದ ಹಿಂದೆಯೇ ರಕುಲ್ ಹೀಗೊಂದು ಪ್ರಯತ್ನ ಮಾಡಿದ್ದಳು. ಯಾರಿಯಾಂ ಎಂಬ ಈ ಚಿತ್ರ ವಿಫಲವಾಗುವುದರೊಂದಿಗೆ ರಕುಲ್ ಪಾಲಿಗೆ ಪ್ರಥಮ ಚುಂಬನದಲ್ಲೇ ದಂತಭಗ್ನವಾಗಿತ್ತು. ಆದರೆ ಹಠಬಿಡದ ರಕುಲ್ ಇದೀಗ ಎರಡನೆಯ ಸಲ ಪ್ರಯತ್ನಿಸುತ್ತಿದ್ದಾಳೆ. ನೀರಜ್ ಪಾಂಡೆ ನಿರ್ದೇಶಿಸಿದ ಅಯ್ನಾರೇ ಚಿತ್ರದಲ್ಲಿ ಮನೋಜ್ ಬಾಜಪೇಯಿ ಮತ್ತು ಸಿದ್ಧಾರ್ಥ್ ಮಲ್ಹೋತ್ರ ಅವರಿಗೆ ನಾಯಕಿಯಾಗುವ ಅವಕಾಶ ರಕುಲ್‌ಗೆ ಸಿಕ್ಕಿದೆ. ಈ ಚಿತ್ರ ಗೆಲ್ಲಲಿದೆ ಎಂಬ ಅದಮ್ಯ ವಿಶ್ವಾಸ ರಕುಲ್‌ಗಿದೆ. ಇಷ್ಟು ಮಾತ್ರವಲ್ಲದೆ ಅಜಯ್ ದೇವಗನ್ ಹೀರೊ ಆಗಿರುವ ಚಿತ್ರಕ್ಕೂ ರಕುಲ್ ನಾಯಕಿಯಾಗಿ ಆಯ್ಕೆಯಾಗಿದ್ದಾಳೆ. ಹೀಗೆ 2014ರಲ್ಲಿ ಕೈಗೂಡದ ಆಶೆ 2018ರಲ್ಲಿ ಈಡೇರುವ ನಿರೀಕ್ಷೆಯಲ್ಲಿದ್ದಾಳೆ ರಕುಲ್.