ರಕ್ಷಿತ್ ಶೆಟ್ಟಿ ಅಭಿನಯದ “ಕಿರಿಕ್ ಪಾರ್ಟಿ’ ಚಿತ್ರ ದೊಡ್ಡ ಮಟ್ಟದ ಯಶಸ್ಸು ಕಂಡಿದ್ದು, ನಿಮಗೆ ಗೊತ್ತೆ ಇದೆ. ಸಹಜವಾಗಿಯೇ ಒಂದು ಚಿತ್ರ ಯಶಸ್ಸು ಕಂಡಾಗ ಆ ಚಿತ್ರದ ಮುಂದುವರಿದ ಭಾಗ ಬರೋದು ಅಥವಾ ಆ ಚಿತ್ರದ ಮುಂದುವರಿದ ಭಾಗದ ಟೈಟಲ್ ರಿಜಿಸ್ಟರ್ ಆಗೋದು ಸಹಜ. “ಕಿರಿಕ್ ಪಾರ್ಟಿ’ ಚಿತ್ರ ಕೂಡಾ ಇದರಿಂದ ಹೊರತಾಗಿಲ್ಲ. ಆ ಚಿತ್ರದ ಮುಂದುವರಿದ ಭಾಗ ಮಾಡಲು ಚಿತ್ರತಂಡ ಮನಸ್ಸು ಮಾಡಿದೆ.
ಈಗಾಗಲೇ ಒಂದು ಸುತ್ತಿನ ಮಾತುಕತೆಯಾಗಿದೆ. “ಕಿರಿಕ್ ಪಾರ್ಟಿ-2′ ಟೈಟಲ್ ಕೂಡಾ ರಕ್ಷಿತ್ ಶೆಟ್ಟಿ ಬ್ಯಾನರ್‌ನಲ್ಲಿ ರಿಜಿಸ್ಟರ್ ಆಗಿದೆ. ಈ ಚಿತ್ರವನ್ನು ಕೂಡಾ ರಿಷಭ್ ನಿರ್ದೇಶಿಸಲಿದ್ದಾರೆ. ಸದ್ಯ ರಿಷಭ್ “ಕಥಾ ಸಂಗಮ’ ಹಾಗೂ “ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಿತ್ರದಲ್ಲಿ ಬಿಝಿ. ಅದು ಮುಗಿಸಿಕೊಂಡು “ಕಿರಿಕ್ ಪಾರ್ಟಿ-2′ ಚಿತ್ರದ ಪೂರ್ವತಯಾರಿಯಲ್ಲಿ ತೊಡಗುವ ಸಾಧ್ಯತೆ ಇದೆ.
ಇತ್ತ ಕಡೆ ರಕ್ಷಿತ್ ಶೆಟ್ಟಿ ಕೂಡಾ ಬಿಝಿ ಇದ್ದಾರೆ. ಅವರು ನಾಯಕರಾಗಿ ನಟಿಸಲಿರುವ “ಇವನೇ ಶ್ರೀಮನ್ನಾರಾಯಣ’ ಚಿತ್ರ ಚಿತ್ರೀಕರಣಕ್ಕೆ ರೆಡಿಯಾಗಿದ್ದಾರೆ. ಚಿತ್ರ ಫೆಬ್ರವರಿ 10 ರಿಂದ ಆರಂಭವಾಗಲಿದೆ. ಚಿತ್ರ ದೊಡ್ಡ ಮಟ್ಟದಲ್ಲಿ ತಯಾರಾಗುತ್ತಿದ್ದು, ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ಸೆಟ್ ಹಾಕಲಾಗುತ್ತಿದೆ. ಈ ಚಿತ್ರದ ಮತ್ತೂಂದು ವಿಶೇಷವೆಂದರೆ ಈ ಚಿತ್ರಕ್ಕಾಗಿ ರಕ್ಷಿತ್ ಶೆಟ್ಟಿ 8 ಪ್ಯಾಕ್ ಮಾಡುತ್ತಿದ್ದಾರೆ.
ಈಗಾಗಲೇ ವಕೌìಟ್ ಆರಂಭಿಸಿದ್ದು, ಚಿತ್ರೀಕರಣ ಆರಂಭವಾಗುವ ಹೊತ್ತಿಗೆ ಕಟ್ಟುಮಸ್ತಾಗಿರಲಿದ್ದಾರೆ. ಚಿತ್ರದ ದೃಶ್ಯವೊಂದಕ್ಕಾಗಿ 8 ಪ್ಯಾಕ್ ಮಾಡುತ್ತಿದ್ದು, ಸದ್ಯ ರಕ್ಷಿತ್ ವಕೌìಟ್ ಜೋರಾಗಿ ಸಾಗುತ್ತಿದೆ. ಸದ್ಯ ರಕ್ಷಿತ್ ಶೆಟ್ಟಿ ” ಅವನೇ ಶ್ರೀಮನ್ನಾರಾಯಣ’ ಚಿತ್ರಕ್ಕೆ ಅಣಿಯಾಗಿದ್ದಾರೆ. ಹಾಗಾದರೆ ಅವರ ನಿರ್ದೇಶನ ಯಾವಾಗ, “ಥಗ್ಸ್ ಆಫ್ ಮಾಲ್ಗುಡೀಸ್’ ಕಥೆ ಏನು ಎಂದರೆ, ಮುಂದೆ ಮಾಡುತ್ತೇನೆ ಎನ್ನುತ್ತಾರೆ.
“ಶ್ರೀಮನ್ನಾರಾಯಣ’ ಮುಗಿಸಿದ ನಂತರ ರಕ್ಷಿತ್ ಪುಷ್ಕರ್ ನಿರ್ಮಾಣದ ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಚಿತ್ರದಲ್ಲಿ ಕೇವಲ ನಟರಾಗಿಯಷ್ಟೇ ಕಾಣಿಸಿಕೊಳ್ಳಲಿರುವ ರಕ್ಷಿತ್, ಆ ಚಿತ್ರದ ನಂತರ ಸಿನಿಮಾವೊಂದನ್ನು ನಿರ್ದೇಶಿಸಲು ಆಲೋಚಿಸಿದ್ದಾರೆ. ಚಾರ್ಲಿಗೆ ಹೊಸ ಹೀರೋ: ರಕ್ಷಿತ್ ಶೆಟ್ಟಿ ತಮ್ಮ ಪರಂವಾ ಸ್ಟುಡಿಯೋದಡಿ “ಚಾರ್ಲಿ 777′ ಎಂಬ ಚಿತ್ರ ನಿರ್ಮಿಸಲು ಹೊರಟ ವಿಷಯ ನಿಮಗೆ ಗೊತ್ತೇ ಇದೆ.
ಆ ಚಿತ್ರದ ಫೋಟೋ ಶೂಟ್ ಬೇರೆ ಆಗಿತ್ತು. ಅರವಿಂದ್ ಅಯ್ಯರ್ ಈ ಚಿತ್ರದ ನಾಯಕರಾಗಿದ್ದರು. ಈಗ ಅರವಿಂದ್ ಬದಲಾಗಿದ್ದು, ಹೊಸ ನಾಯಕನ ಶೋಧದಲ್ಲಿ ಚಿತ್ರತಂಡ ಬಿಝಿ. ಅಷ್ಟಕ್ಕೂ ಅರವಿಂದ್ ಬದಲಾಗಲು ಕಾರಣವೇನು ಎಂದರೆ ಅವರ ಡೇಟ್ಸ್ ಎಂಬ ಉತ್ತರ ಬರುತ್ತದೆ.
ಅರವಿಂದ್ ಈಗಾಗಲೇ ರಕ್ಷಿತ್ ಅವರದ್ದೇ ಮತ್ತೂಂದು ಚಿತ್ರ “ಭೀಮಸೇನಾ ನಳಮಹಾರಾಜ’ದಲ್ಲಿ ನಟಿಸುತ್ತಿದ್ದಾರೆ. ಇದಲ್ಲದೇ, ಇನ್ನೂ ಎರಡು ಸಿನಿಮಾ ಒಪ್ಪಿಕೊಂಡಿದ್ದಾರೆ. ಹಾಗಾಗಿ ಅವರ ಡೇಟ್ಸ್ ಸಮಸ್ಯೆ ಕಾಡುತ್ತದೆ. ಆ ಕಾರಣದಿಂದ ಅವರು ಬದಲಾಗಿದ್ದಾರೆ. ಈಗ ಅರವಿಂದ್ ಅವರಂತಹ ಮತ್ತೂಬ್ಬ ನಾಯಕನ ಹುಡುಕಾಟದಲ್ಲಿದೆ ಚಿತ್ರತಂಡ.