Advertisement
ಸದ್ಯ ಬಿಡುಗಡೆಯಾಗಿ 25 ದಿನಗಳನ್ನು ಪೂರೈಸಿದ ಖುಷಿಯಲ್ಲಿರುವ “777 ಚಾರ್ಲಿ’ ಚಿತ್ರತಂಡ, “25 ದಿನಗಳ ಯಶಸ್ವಿ ಸಂಭ್ರಮ’ವನ್ನು ಆಚರಿಸಿತು. ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಚಿತ್ರತಂಡ “777 ಚಾರ್ಲಿ’ ಬಿಡುಗಡೆಯ ನಂತರದ ಬೆಳವಣಿಗೆಗಳ ಬಗ್ಗೆ ಒಂದಷ್ಟು ವಿಷಯಗಳನ್ನು ಹಂಚಿಕೊಂಡಿತು.
Related Articles
Advertisement
ಲಾಭಾಂಶದ 10% ಚಿತ್ರತಂಡಕ್ಕೆ ಬೋನಸ್: ಇನ್ನು “777 ಚಾರ್ಲಿ’ ಸಿನಿಮಾದ ಲಾಭಾಂಶದಲ್ಲಿ ಬಂದಿರುವ 10% ಹಣವನ್ನು ಚಿತ್ರದಲ್ಲಿ ದುಡಿದ ಕಲಾವಿದರು, ತಂತ್ರಜ್ಞರು ಮತ್ತು ಕಾರ್ಮಿಕರಿಗಾಗಿ ತೆಗೆದಿರಿಸಲಾಗಿದೆ. ಈ ವಿಷಯವನ್ನು ಕೂಡ ಅಧಿಕೃತವಾಗಿ ಘೋಷಿಸಿರುವ ನಟ ಕಂ ನಿರ್ಮಾಪಕ ರಕ್ಷಿತ್ ಶೆಟ್ಟಿ, “”777 ಚಾರ್ಲಿ’ ಸಿನಿಮಾಕ್ಕೆ ಪ್ರತಿಯೊಬ್ಬರೂ ಕೂಡ ಅವರದ್ದೇ ಆದ ಪರಿಶ್ರಮ ಹಾಕಿದ್ದಾರೆ. ಎಲ್ಲರ ಪರಿಶ್ರಮದಿಂದಾಗಿಯೇ ಇಂಥದ್ದೊಂದು ಸಿನಿಮಾ ಮಾಡೋದಕ್ಕೆ ಸಾಧ್ಯವಾಯ್ತು. ಸಿನಿಮಾದ ಯಶಸ್ಸಿಗೆ ಅವರೆಲ್ಲರೂ ಪಾಲುದಾರರಾಗಿದ್ದಾರೆ. “777 ಚಾರ್ಲಿ’ಯ ಸಕ್ಸಸ್ ಸಿನಿಮಾ ತಂಡದ ಪ್ರತಿಯೊಬ್ಬರ ಜೊತೆಯೂ ಹಂಚಿಕೊಳ್ಳಬೇಕು. ಹೀಗಾಗಿ ನನ್ನನ್ನು ಹೊರತುಪಡಿಸಿ ಸಿನಿಮಾದಲ್ಲಿ ಅಭಿನಯಿಸಿರುವ ಕಲಾವಿದರು, ಕೆಲಸ ಮಾಡಿದ ತಂತ್ರಜ್ಞರು ಮತ್ತು ಕಾರ್ಮಿಕರಿಗಾಗಿ “777 ಚಾರ್ಲಿ’ ಸಿನಿಮಾದ ಲಾಭಾಂಶದಲ್ಲಿ ಬಂದಿರುವ ಶೇಕಡ 10ರಷ್ಟು ಹಣವನ್ನು ತೆಗೆದಿಡಲು ನಿರ್ಧರಿಸಿದ್ದೇವೆ’ ಎಂದಿದ್ದಾರೆ ರಕ್ಷಿತ್ ಶೆಟ್ಟಿ.
150 ಕೋಟಿ ಗಳಿಕೆ?: ಇನ್ನು ಪ್ಯಾನ್ ಇಂಡಿಯಾ ಸಿನಿಮಾವಾಗಿ ಬಿಡುಗಡೆಯಾದ “777 ಚಾರ್ಲಿ’ ಸಿನಿಮಾ ಕನ್ನಡದ ಜೊತೆಗೆ ಬೇರೆ ಬೇರೆ ಭಾಷೆಗಳಲ್ಲೂ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ. ಇದೀಗ “777 ಚಾರ್ಲಿ’ ಯಶಸ್ವಿಯಾಗಿ 25 ದಿನಗಳ ಪ್ರದರ್ಶನ ಪೂರ್ಣಗೊಳಿಸಿರುವುದರಿಂದ, ಸಹಜವಾಗಿಯೇ ಸಿನಿಮಾದ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟಾಗಿರಬಹುದು ಎಂಬ ಕುತೂಹಲ ಸಿನಿಮಾ ಮಂದಿಯಲ್ಲಿ ಮತ್ತು ಪ್ರೇಕ್ಷಕರಲ್ಲಿತ್ತು. ಆದರೆ “777 ಚಾರ್ಲಿ’ ಸಿನಿಮಾದ ಅಧಿಕೃತ ಗಳಿಕೆಯ ಮಾಹಿತಿ ಬಿಟ್ಟುಕೊಡದ ಚಿತ್ರತಂಡ, ಇಲ್ಲಿಯವರೆಗೆ ಆಗಿರುವ ಒಟ್ಟು ಗಳಿಕೆಯ ಬಗ್ಗೆ ಒಂದಷ್ಟು ಸುಳಿವನ್ನು ಬಿಟ್ಟುಕೊಟ್ಟಿದೆ. ಕನ್ನಡ ಮತ್ತು ಇತರ ಭಾಷೆಗಳ ಒಟ್ಟು ಥಿಯೇಟರಿಕಲ್ ಕಲೆಕ್ಷನ್ ಮತ್ತು ವಿದೇಶಿ ಗಳಿಕೆ ಸೇರಿದಂತೆ, 25 ದಿನಗಳವರೆಗೆ “777 ಚಾರ್ಲಿ’ ಬರೋಬ್ಬರಿ 150 ಕೋಟಿಗೂ ಅಧಿಕ ಗಳಿಕೆ ಕಂಡಿದೆ ಎನ್ನಲಾಗುತ್ತಿದೆ.
25 ದಿನ ಸಂಭ್ರಮ ದಲ್ಲಿ ನಿರ್ದೇಶಕ ಕಿರಣ್ ರಾಜ್, ನಾಯಕ ನಟಿ ಸಂಗೀತಾ ಶೃಂಗೇರಿ, ಬೇಬಿ ಶಾರ್ವರಿ, ಸಂಗೀತ ನಿರ್ದೇಶಕ ನೋಬಿನ್ ಪೌಲ್, ವಿತರಕ ಕಾರ್ತಿಕ್ ಗೌಡ ಮತ್ತಿತರರು ಚಿತ್ರದ ಬಿಡುಗಡೆಯ ನಂತರ ಸಿಗುತ್ತಿರುವ ಪ್ರತಿಕ್ರಿಯೆಗಳ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡು, ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದರು.