ನಟ ಜೆಕೆ ಅಭಿನಯದ “ಮೇ 1′ ಚಿತ್ರ ಈ ವಾರ ತೆರೆಗೆ ಬರುತ್ತಿದೆ. ಇದೊಂದು ಹಾರರ್ ಸಸ್ಪೆನ್ಸ್ ಥ್ರಿಲ್ಲರ್ ಹೊಂದಿರುವ ಚಿತ್ರ. ಈ ಚಿತ್ರದ ಹೊಸ ಸುದ್ದಿ ಅಂದರೆ, ಈ ಚಿತ್ರಕ್ಕೆ ನಾಯಕ ಜೆಕೆ ಅವರೇ ಸ್ವತಃ ಕಥೆ, ಚಿತ್ರಕಥೆ ಬರೆದಿದ್ದಾರೆ.ಹೌದು, ಜೆಕೆ ನಟರಷ್ಟೇ ಅಲ್ಲ, ಬರಹಗಾರ ಕೂಡ ಎಂಬುದನ್ನು “ಮೇ 1′ ಚಿತ್ರದ ಮೂಲಕ ಸಾಬೀತುಪಡಿಸಿದ್ದಾರೆ.
ಅಷ್ಟಕ್ಕೂ ಜೆಕೆ ಕಥೆ ಬರೆದಿದ್ದು ಯಾಕೆ ಮತ್ತು ಯಾವಾಗ? ಈ ಪ್ರಶ್ನೆಗೆ ಉತ್ತರಿಸುವ ಜೆಕೆ, ಹಿಂದಿ ಧಾರಾವಾಹಿಯಲ್ಲಿ ಬಿಜಿಯಾಗಿದ್ದ ಜೆಕೆ ಅದಾದ ಬಳಿಕ ಒಂದು ಗ್ಯಾಪ್ ಪಡೆದಿದ್ದರು. ಆ ಸಮಯದಲ್ಲಿ ಒಂದಷ್ಟು ಚಿತ್ರಗಳು ಬಂದರೂ ಯಾವ ಚಿತ್ರವನ್ನೂ ಒಪ್ಪಿಕೊಂಡಿರಲಿಲ್ಲ. ಆಗ ಅವರ ತಲೆಯಲ್ಲಿ ಒಂದು ಆಲೋಚನೆ ಹೊಳೆದಿತ್ತು. ಸುಮ್ಮನೆ ಸಮಯ ವ್ಯರ್ಥ ಮಾಡುವುದಕ್ಕಿಂತ, ಒಂದು ಕಥೆ ಬರೆದರೆ ಹೇಗೆ ಎಂಬ ಯೋಚನೆ ಬಂದಿದ್ದೇ ತಡ, ಅವರು ಪೆನ್ನು ಹಿಡಿದು ಕೂತರು. ಆಗ ಹುಟ್ಟುಕೊಂಡಿದ್ದೇ “ಮೇ 1′ ಚಿತ್ರದ ಕಥೆ ಎಂಬುದು ಜೆಕೆ ಮಾತು.
ಅಷ್ಟಕ್ಕೂ “ಮೇ 1′ ನಾಮಕರಣ ಮಾಡಲು ಕಾರಣವೂ ಇದೆ. ಜೆಕೆ ಅವರು ಒರಿಜನಲ್ ಬರ್ತ್‌ಡೇ ಮೇ 1. ಅದರಲ್ಲೂ, ಕಥೆ ಶುರುವಾಗೋದೇ ಮೇ 1 ದಿನಾಂಕದಿಂದ. ಆ ದಿನದಲ್ಲೊಂದು ಘಟನೆ ನಡೆಯುತ್ತೆ. ಅದರ ಸುತ್ತವೇ ಕಥೆ ಸಾಗುವುದರಿಂದ “ಮೇ 1′ ಎಂದು ಚಿತ್ರಕ್ಕೆ ನಾಮಕರಣ ಮಾಡಿದ್ದಾರೆ. “ಮೇ 1′ ಚಿತ್ರದಲ್ಲಿ ಜೆಕೆ ರಿಯಲ್ ಪಾತ್ರವನ್ನೇ ಮಾಡಿದ್ದಾರೆ. ಚಿತ್ರದಲ್ಲೂ ಅವರು ಸೂಪರ್‌ಸ್ಟಾರ್ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲೂ ಅತಿರೇಖ, ಅಭಿಮಾನ ಎಲ್ಲವೂ ಬಂದು ಹೋಗಲಿದೆ. ಇದು ಹಾರರ್ ಸ್ಪರ್ಶ ಹೊಂದಿದ್ದರೂ, ರೆಗ್ಯುಲರ್ ಹಾರರ್ ಚಿತ್ರದಂತೆ ಇರುವುದಿಲ್ಲ ಎಂಬುದು ಜೆಕೆ ಮಾತು.
ಸಂಪೂರ್ಣ ಹೊಸತನದಲ್ಲೇ ಚಿತ್ರವನ್ನು ಮಾಡಿದ ಖುಷಿಯಲ್ಲಿರುವ ಜೆಕೆ, ಕಥೆ, ಚಿತ್ರಕಥೆ ಬರೆದ ಬಳಿಕ ಚಿತ್ರವನ್ನು ನಾಗೇಂದ್ರ ಅರಸ್ ಅವರಿಂದಲೇ ನಿರ್ದೇಶನ ಮಾಡಿಸಬೇಕು ಅಂತ ನಿರ್ಧರಿಸಿದರು. ನಾಗೇಂದ್ರ ಅರಸ್ ಜೆಕೆ ಅವರ ಗೆಳೆಯ. ಆ ಕಾರಣಕ್ಕೆ, ಇಬ್ಬರೂ ಒಟ್ಟಿಗೆ ಸೇರಿ, “ಮೇ 1′ ಮುಗಿಸಿದ್ದಾರೆ.
ಈ ಚಿತ್ರದಲ್ಲಿ ನಾಗೇಂದ್ರ ಅರಸ್ ಅವರೇ ನೃತ್ಯ ನಿರ್ದೇಶನ ಮಾಡಿರುವುದು ಇನ್ನೊಂದು ವಿಶೇಷ. ಚಿತ್ರದ ಬಗ್ಗೆ ಸಾಕಷ್ಟು ನಂಬಿಕೆ ಇಟ್ಟುಕೊಂಡಿರುವ ಜೆಕೆ, ಕನ್ನಡಿಗರು ಹೊಸತನದ ಚಿತ್ರವನ್ನು ಯಾವತ್ತೂ ಕೈ ಬಿಟ್ಟಿಲ್ಲ. “ಮೇ 1′ ಚಿತ್ರಕ್ಕೂ ಬೆನ್ನು ತಟ್ಟುತ್ತಾರೆ ಎಂಬ ವಿಶ್ವಾಸ ಅವರದು. ಈಗಾಗಲೇ ಟ್ರೇಲರ್‌ಗೆ ಎಲ್ಲೆಡೆಯಿಂದ ಮೆಚ್ಚುಗೆ ಸಿಕ್ಕಿದ್ದು, ಮಲ್ಟಿಪ್ಲೆಕ್ಸ್‌ನಲ್ಲೂ ಚಿತ್ರದ ಟ್ರೇಲರ್ ಸದ್ದು ಮಾಡುತ್ತಿರುವುದರಿಂದ ಚಿತ್ರತಂಡಕ್ಕೆ ಸಹಜವಾಗಿಯೇ ಖುಷಿ ಇದೆ.ಅಂದಹಾಗೆ, ಚಿತ್ರಕ್ಕೆ ರಕ್ಷಾ ನಾಯಕಿ.