Advertisement

ರಕ್ಷಾ ಬಂಧನ ವಿಶೇಷ : “ಸಹೋದರಿಯರ ಪ್ರೀತಿಯ ರಕ್ಷಾ ಬಂಧನ “

12:56 PM Aug 03, 2020 | mahesh |

ನಮ್ಮ ದೇಶದಲ್ಲಿ ಸಹೋದರ ಮತ್ತು ಸಹೋದರಿಯ ನಡುವಿನ ಬಾಂಧವ್ಯವನ್ನು ಬಲಪಡಿಸುವ ಹಬ್ಬವೆಂದರೆ ರಕ್ಷಾ ಬಂಧನ. ಶ್ರಾವಣ ಮಾಸದ ಹುಣ್ಣಿಮೆಯ ದಿನದಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ರಕ್ಷಾ ಬಂಧನ ಆಚರಣೆಯು ಬರಿ ರಕ್ತಸಂಬಂಧಕ್ಕೆ ಮಾತ್ರ ಮೀಸಲಾಗಿರದೆ ಇದು ಒಂದು ಪವಿತ್ರ ಸಂಬಂಧವನ್ನು ತೋರ್ಪಡಿಸುವ ಹಬ್ಬವಾಗಿದೆ. ಈ ಹಬ್ಬವನ್ನು ಎಲ್ಲಾ ಜಾತಿಯವರು ತನ್ನ ಸಹೋದರತ್ವ ಭಾವವನ್ನು ತೋರ್ಪಡಿಸಲು ರಾಖಿಗಳನ್ನು ಕಟ್ಟಿ ಅಣ್ಣ-ತಂಗಿ, ತಮ್ಮ- ಅಕ್ಕನ, ರಕ್ಷಣೆ ಮಾಡುವನು ಎಂಬ ನಂಬಿಕೆಯ ಮೇಲೆ ಈ ಹಬ್ಬವನ್ನು ಆಚರಿಸುತ್ತೇವೆ.

Advertisement

ಪ್ರತಿ ಸಹೋದರಿಯು ಪ್ರತಿವರ್ಷ ತನ್ನ ಸಹೋದರರ ಕೈಗೆ ಕಟ್ಟುವ ದಾರವನ್ನು ‘ರಾಖಿ’ಎಂದು ಕರೆಯಲ್ಪಡುವ ಪವಿತ್ರ ಹಬ್ಬ. ಈ ಹಬ್ಬ ಯಾಕೆ ಆಚರಿಸುತ್ತೇವೆ ಗೊತ್ತಾ? ಅಲ್ಲಿ ಒಬ್ಬ ಸಹೋದರಿಯ ಪ್ರೀತಿ ತೋರ್ಪಡಿಸುತ್ತಾಳೆ. ಶ್ರಾವಣ ಮಾಸದ ಹುಣ್ಣಿಮೆಯಂದು ಅಣ್ಣ ತಮ್ಮ ಅಕ್ಕ ತಂಗಿಯ ಮನೆಗಾದರೂ, ಇಲ್ಲ ಅಕ್ಕ ತಂಗಿ ತನ್ನ ತವರಿಗೆ ಹೋಗಿ ಸಹೋದರರಿಗೆ ರಾಖಿಯನ್ನು ಕಟ್ಟುವ ಪ್ರವೃತ್ತಿಯಲ್ಲಿ ಪ್ರೀತಿಯು ಅಡಗಿ ಕೊಂಡಿರುತ್ತದೆ.

ರಾಖಿಯ ಕುರಿತು ಹಿಂದಿನ ಕಾಲದಿಂದಲೂ ದಂತಕತೆಗಳು ಹೇಳುವುದನ್ನು ಕೇಳಿದ್ದೇವೆ. ಅಲೆಕ್ಸಾಂಡರನು ಭಾರತದ ಮೇಲೆ ದಂಡೆತ್ತಿ ಬಂದಾಗ ಅವನನ್ನು ಧೈರ್ಯದಿಂದ ಎದುರಿಸಿದವನು ಪೋರಸ್. ಆಗ ಅವರಿಬ್ಬರ ನಡುವೆ ಯುದ್ಧ ಆರಂಭಗೊಂಡಿತು. ಇದೇ ಸಮಯದಲ್ಲಿ ಅಲೆಕ್ಸಾಂಡರನ ಪತ್ನಿ ರೊಕ್ಸಾನಳು ಪೋರಸ್‌ಗೆ ಒಂದು ಪವಿತ್ರ ದಾರವನ್ನು (ರಾಖಿ) ಕಳುಹಿಸಿದಳು. ಅದರ ಜೊತೆಗೆ ಒಂದು ಮನವಿ ಸಹ ಇತ್ತು. ತನ್ನ ಪತಿಯನ್ನು ಕೊಲ್ಲದಿರುವಂತೆ ಕೇಳಿಕೊಂಡ ಮನವಿ ಅದಾಗಿತ್ತು. ಮುಂದೆ ನಡೆದ ಯುದ್ಧದಲ್ಲಿ ಪೋರಸ್ ಅಲೆಕ್ಸಾಂಡರನನ್ನು ಕೊಲ್ಲದೆ ಉಳಿಸಿದನು. ಇದಕ್ಕೆ ಕಾರಣ ಅಲೆಕ್ಸಾಂಡರ್ ನ ಹೆಂಡತಿ ಆತನ ಕೈಯಲ್ಲಿ ಕಟ್ಟಿರುವ ರಾಖಿ ಅವನನ್ನು ತಡೆದು ನಿಲ್ಲಿಸಿತ್ತು.

ರಾಖಿ ಹಬ್ಬದ ಹಿಂದೆ ಹಲವು ಪುರಾಣ ಮತ್ತು ಐತಿಹಾಸಿಕ ಕತೆಗಳಿವೆ. ಶಿಶುಪಾಲನನ್ನು ಕೊಲ್ಲುವುದಕ್ಕೆಂದು ಸುದರ್ಶನ ಚಕ್ರ ಬಳಸಲು ಹೊರಟ ಕೃಷ್ಣನ ಕೈ ಬೆರಳಿಗೆ ಗಾಯವಾದಾಗ ದ್ರೌಪದಿ ತನ್ನ ಸೀರೆಯನ್ನೇ ಹರಿದು ಆತನ ಕೈಬೆರಳಿಗೆ ಕಟ್ಟುತ್ತಾಳೆ. ಅದಕ್ಕೆ ಪ್ರತಿಯಾಗಿ ದುಶ್ಶಾಸನ ದ್ರೌಪದಿಯ ಸೀರೆ ಎಳೆಯುವಾಗ ಶ್ರೀಕೃಷ್ಣ ದ್ರೌಪದಿಗೆ ಸೀರೆಯನ್ನು ದಯಪಾಲಿಸುತ್ತಾನೆ.ದ್ರೌಪದಿ ಕಟ್ಟಿದ ಸೀರೆಯ ತುಂಡನ್ನೇ ಕೃಷ್ಣ ರಕ್ಷೆ ಎಂದುಕೊಂಡು ಆಕೆಯನ್ನು ತಂಗಿ ಎಂದು ಸ್ವೀಕರಿಸುವ ಕೃಷ್ಣ, ಮುಂದೆ ಆಕೆಯ ರಕ್ಷಣೆಗೆ ಬದ್ಧನಾಗುತ್ತಾನೆ. ಹೀಗೇ ರಕ್ಷಾಬಂಧನದ ಆಚರಣೆ ಆರಂಭವಾಯ್ತು ಎಂಬುದು ಪುರಾಣದ ಒಂದು ಕತೆ. ತಮಗೂ ಶ್ರೀಕೃಷ್ಣನಂತೇ ರಕ್ಷಣೆ ನೀಡುವ ಅಣ್ಣ ಸಿಗಲಿ ಎಂಬ ಉದ್ದೇಶದಿಂದ ಇಂದಿಗೂ ಸಹೋದರಿಯರು ತಮ್ಮ ಅಣ್ಣ, ತಮ್ಮಂದಿರಿಗೆ ರಕ್ಷೆ ಕಟ್ಟುತ್ತಾರೆ.

ವೃಕ್ಷೋ ರಕ್ಷತಿ ರಕ್ಷಿತಃ ಜಾರ್ಖಂಡಿನ ಬುಡಕಟ್ಟು ಮಹಿಳೆಯರು ಮರಕ್ಕೆ ರಾಖಿ ಕಟ್ಟುವ ಮೂಲಕ ತಮ್ಮನ್ನು ರಕ್ಷಿಸುವಂತೆ ಬೆಡಿಕೊಳ್ಳುತ್ತಾರೆ. ಮರವನ್ನು ರಕ್ಷಿಸಿದರೆ, ಮರ ನಮ್ಮನ್ನು ರಕ್ಷಿಸುತ್ತದೆ ಎಂಬ ಅವರ ಉನ್ನತ ಪರಿಜ್ಞಾನಕ್ಕೆ ತಲೆಬಾಗದಿದ್ದರೆ ಹೇಗೆ? ನಾವು ಈ ಸಂಕಟದ ಸಮಯದಲ್ಲಿ ಸಹೋದರರ ಜೊತೆಗೆ ಒಂದೊಂದು ಗಿಡಗಳನ್ನು ನೆಟ್ಟಿದರೆ ಅವು ನಮ್ಮನ್ನು ಮುಂದಿನ ದಿನಮಾನಗಳಲ್ಲಿ ರಕ್ಷಿಸುತ್ತವೆ ಎಂದು ಎಲ್ಲರಿಗೂ ಕೇಳಿಕೊಳ್ಳುತ್ತೇನೆ.

Advertisement

ರಕ್ಷಾ ಬಂಧನ ರಕ್ಷಣೆ ಹಾಗೂ ಸಂಬಂಧ ಎಂಬ ಎರಡು ಪದಗಳಿಂದ ಕೂಡಿದೆ. ಪ್ರಸ್ತುತ ಈ ಹಬ್ಬವು ಸಹೋದರ-ಸಹೋದರಿಯರ ನಡುವಿನ ಪ್ರೀತಿ ಮತ್ತು ಬಂಧನ ಇದು ಸಹೋದರಿ ಮತ್ತು ಸಹೋದರರ ನಡುವಿನ ಪ್ರೀತಿಯನ್ನು ಬಲಪಡಿಸುವ ಉತ್ಸವವಾಗಿದೆ ಎಂದು ಹೇಳಬಹುದು. ಒಂದು ಕಡೆ, ಸಹೋದರನು ತನ್ನ ಸಹೋದರಿಯನ್ನು ನೋಡಿಕೊಳ್ಳುವುದಾಗಿ ಮತ್ತು ತನ್ನ ಜೀವನಪರ್ಯಂತ ಅವಳನ್ನು ರಕ್ಷಿಸುವುದಾಗಿ ಭರವಸೆ ನೀಡುತ್ತಾನೆ. ಮತ್ತೊಂದೆಡೆ, ಸಹೋದರಿ ತನ್ನ ಸಹೋದರನ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಾಳೆ.

ಈ ದಿನ ಸಹೋದರಿ ತನ್ನ ಸಹೋದರರ ಕೈಯ ಮೇಲೆ ಕಟ್ಟುವ ರೇಷ್ಮೆ ದಾರವು ಕೇವಲ ಒಂದು ದಾರವಲ್ಲ. ಅದು ಇಬ್ಬರ ನಡುವಿನ ಶುದ್ಧ, ಪವಿತ್ರ ಮತ್ತು ನಿರಂತರ ಪ್ರೀತಿಯ ಗುರುತು, ಜೊತೆಗೆ ಶಾಶ್ವತ ರಕ್ಷಣೆಗಾಗಿ ಮಂತ್ರದೊಂದಿಗೆ ಬೆರೆತಿದೆ. ರಾಖಿ ಕೇವಲ ದಾರವಲ್ಲ, ಪವಿತ್ರ ಬಂಧನ ಇಂದು ಮಾರುಕಟ್ಟೆಯಲ್ಲಿ ತರತರಹದ ರಾಖಿಗಳು ಬಂದಿವೆ. ಒಂದು ರೂಪಾಯಿ ರಾಖಿಯಿಂದ ಹಿಡಿದು, ಅಣ್ಣನಿಗಾಗಿ ಲಕ್ಷಾಂತರ ರೂ. ಬೆಲೆಬಾಳುವ ವಜ್ರದ ರಾಖಿಯನ್ನೇ ಕಟ್ಟುವವರೂ ಇದ್ದಿರಬಹುದು. ಅವೆಲ್ಲವೂ ಅವರವರ ಅನುಕೂಲಕ್ಕೆ ತಕ್ಕ ಹಾಗೆ, ಆದರೆ ಅಣ್ಣನಿಂದ ಸಿಗುವ ಉಡುಗೊರೆಯನ್ನೋ, ದುಬಾರಿ ವಸ್ತುವನ್ನೋ ನಿರೀಕ್ಷಿಸಿ ಕಟ್ಟುವದಿಲ್ಲ ಸಹೋದರಿ, ಆಕೆ ಶುದ್ಧ ಮನಸ್ಸಿನಿಂದ, ಪ್ರೀತಿಯಿಂದ ಕಟ್ಟುವ ಒಂದೇ ಒಂದು ದಾರಕ್ಕೂ ವಿಶಿಷ್ಟ ಅರ್ಥವಿದೆ. ಅಣ್ಣತಮ್ಮಂದಿರಿಗೆ ಆರತಿ ಮಾಡಿ, ಸಿಹಿ ತಿನ್ನಿಸಿ, ನಿಶ್ಕಲ್ಮಶ ಮನಸ್ಸಿನಿಂದ ರಾಖಿ ಕಟ್ಟುತ್ತಾಳೆ . ಅಣ್ಣ ಅಥವಾ ತಮ್ಮನಿಗೆ ದೀರ್ಘಾಯುರಾರೋಗ್ಯ ನೀಡುವಂತೆ ದೇವರನ್ನು ಬೇಡಿಕೊಲ್ಲುತ್ತಾಳೆ. ತನಗೆ ಸದಾ ರಕ್ಷಣೆ ನೀಡುವಂತೆ ಅಣ್ಣ-ತಮ್ಮರನ್ನು ಕೇಳಿಕೊಳ್ಳುವ ಸಾಕೇಂತಿಕ ಆಚರಣೆ ಈ ರಕ್ಷಾಬಂಧನ.


ಸುನಿತಾ. ಎಸ್. ಪಾಟೀಲ, ಸರಕಾರಿ ಪ್ರೌಢ ಶಾಲೆ ನಿಂಬೂರ ತಾ. ಹುಮ್ನಾಬಾದ ಜಿ. ಬೀದರ

Advertisement

Udayavani is now on Telegram. Click here to join our channel and stay updated with the latest news.

Next