ಮುಂಬಯಿ: ಷೇರುಮಾರುಕಟ್ಟೆಯ ವಹಿವಾಟು ಅಂದರೆ ಅದು ಹಾವು-ಏಣಿ ಆಟವಿದ್ದಂತೆ. ಒಂದೇ ನೆಗೆತಕ್ಕೆ 98 ಅಂಕದವರೆಗೆ ಮುಟ್ಟಿ, ಇನ್ನೇನು 100 ಅಂಕ ತಲುಪಬೇಕು ಎಂಬಷ್ಟರಲ್ಲಿ ಹಾವು ನುಂಗಿ ದಿಢೀರ್ ಕೆಳಕ್ಕೆ ಇಳಿಯುವಂತೆ. ಷೇರು ವಹಿವಾಟು ಕೂಡಾ ಹೀಗೆಯೇ. ಬೆಳಗ್ಗೆ ನೂರಾರು ಅಂಕ ಏರಿಕೆ ಕಾಣುತ್ತಲೇ ವಹಿವಾಟು ಮುಕ್ತಾಯ ಹಂತದಲ್ಲಿ ನೂರಾರು ಅಂಕ ಪತನವಾಗುತ್ತದೆ. ಇದರಿಂದಾಗಿ ಹೂಡಿಕೆದಾರರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗುತ್ತದೆ. ಇದಕ್ಕೆ ಉದಾಹರಣೆ ಶುಕ್ರವಾರ ಮುಂಬಯಿ ಷೇರುಪೇಟೆಯಲ್ಲಿ ಟೈಟಾನ್ ಕಂಪನಿಯ ಷೇರು ಮೌಲ್ಯ ಕುಸಿದ ಪರಿಣಾಮ ಕೇವಲ 10 ನಿಮಿಷಗಳಲ್ಲಿ ರಾಕೇಶ್ ಜುಂಜುನ್ ವಾಲಾ ಕೋಟ್ಯಂತರ ರೂಪಾಯಿ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ:‘ಕೆಜಿಎಫ್’ ಚಿತ್ರಕ್ಕೆ ಹೋಲಿಸಿ ಇದೀಗ ಸಖತ್ ಟ್ರೋಲ್ ಆದ ಅಲ್ಲು ಅರ್ಜುನ್ ಚಿತ್ರ ‘ಪುಷ್ಪ’
ನಷ್ಟ ಹೇಗಾಯಿತು?
ಜಾಗತಿಕ ಷೇರುಮಾರುಕಟ್ಟೆಯ ದುರ್ಬಲ ವಹಿವಾಟಿನ ಪರಿಣಾಮ ಶುಕ್ರವಾರ ಮುಂಬಯಿ ಷೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ ನಿಫ್ಟಿ 200 ಅಂಕ ಇಳಿಕೆಯಾಗಿತ್ತು, ಸಂವೇದಿ ಸೂಚ್ಯಂಕ 800 ಅಂಕ ಪತನಗೊಂಡಿತ್ತು. ಏತನ್ಮಧ್ಯೆ ಷೇರುಪೇಟೆ ವಹಿವಾಟಿನ ಆರಂಭದಲ್ಲೇ ಟೈಟಾನ್ ಕಂಪನಿ ಷೇರುಗಳಲ್ಲಿ ಇಳಿಕೆಯಾದ ಪರಿಣಾಮ ಸ್ಟಾಕ್ ಟ್ರೇಡರ್ ರಾಕೇಶ್ ಜುಂಜುನ್ ವಾಲಾ ಅವರು ಹತ್ತೇ ನಿಮಿಷದಲ್ಲಿ 318 ಕೋಟಿ ರೂಪಾಯಿ ನಷ್ಟ ಅನುಭವಿಸುವಂತಾಗಿತ್ತು.
ಷೇರುಪೇಟೆಯಲ್ಲಿ ವಹಿವಾಟು ಆರಂಭವಾದ ಸಂದರ್ಭದಲ್ಲಿ ಟೈಟಾನ್ ಕಂಪನಿಯ ಒಂದು ಷೇರಿನ ಬೆಲೆ 2,336 ಅಂಕದಲ್ಲಿತ್ತು, ನಂತರ 9.25ರ ಹೊತ್ತಿಗೆ ಷೇರು ಮೌಲ್ಯ 2,283 ರೂಪಾಯಿಗೆ ಇಳಿಕೆಯಾಗಿತ್ತು. ಇದು ಕೇವಲ ಹತ್ತು ನಿಮಿಷಗಳಲ್ಲಿ ಆದ ಬೆಳವಣಿಗೆಯಾಗಿತ್ತು.
ಈ ಅವಧಿಯಲ್ಲಿ ಟೈಟಾನ್ ಪ್ರತಿ ಷೇರು ಮೌಲ್ಯ 73.60 ರೂ. ಇಳಿಕೆ ಕಂಡಿತ್ತು. ಟೈಟಾನ್ ಕಂಪನಿಯ ಶೇರ್ ಹೋಲ್ಡಿಂಗ್ ಪ್ರಕಾರ, ರಾಕೇಶ್ ಜುಂಜುನ್ ವಾಲಾ ಅವರ ಬಳಿ 3,37,60,395 ಟೈಟಾನ್ ಕಂಪನಿಯ ಷೇರುಗಳಿದ್ದು, ಪತ್ನಿ ರೇಖಾ ಜುಂಜುನ್ ವಾಲಾ ಅವರ ಬಳಿ 95,40,575 ಷೇರುಗಳಿದ್ದವು. ರಾಕೇಶ್ ಹಾಗೂ ರೇಖಾ ಜುಂಜುನ್ ವಾಲಾ ದಂಪತಿ ಒಟ್ಟು 4,33,00,970 ಟೈಟಾನ್ ಕಂಪನಿ ಷೇರುಗಳನ್ನು ಹೊಂದಿದ್ದರು.
ಹತ್ತು ನಿಮಿಷದಲ್ಲಿ ಟೈಟಾನ್ ಪ್ರತಿ ಷೇರಿನ ಮೌಲ್ಯ 73.60 ರೂ. ಇಳಿಕೆಯಾದ ಪರಿಣಾಮ ಬರೋಬ್ಬರಿ 318 (4,33,00970 X 73.60 ) ಕೋಟಿ ರೂಪಾಯಿ ನಷ್ಟ ಅನುಭವಿಸುವಂತಾಗಿದೆ.
ಹೂಡಿಕೆಗೆ ಉತ್ತಮ ಅವಕಾಶ:
ಷೇರುಪೇಟೆ ವಹಿವಾಟಿನಲ್ಲಿ ಟೈಟಾನ್ ಕಂಪನಿ ಷೇರು ಮೌಲ್ಯದಲ್ಲಿ ಇಳಿಕೆಯಾಗಿರುವುದು ಚಿಲ್ಲರೆ ಹೂಡಿಕೆದಾರರಿಗೆ ಷೇರು ಖರೀದಿಸಲು ಉತ್ತಮ ಅವಕಾಶ ನೀಡಿದಂತಾಗಿದೆ ಎಂದು ಚಾಯ್ಸ್ ಬ್ರೋಕಿಂಗ್ ಕಾರ್ಯನಿರ್ವಾಹಕ ನಿರ್ದೇಶಕ ಸುಮೀತ್ ಬಗಾಡಿಯಾ ವಿಶ್ಲೇಷಿಸಿದ್ದಾರೆ. ಟೈಟಾನ್ ಕಂಪನಿಯ ಷೇರುಗಳ ಮೌಲ್ಯ 2,200 ಅಂಕಗಳಲ್ಲಿ ಇರುವುದು ಉತ್ತಮ ಬೆಳವಣಿಗೆ. ಯಾಕೆಂದರೆ ಪ್ರಸ್ತುತ ವಹಿವಾಟಿನಲ್ಲಿ ಯಾರಾದರು 2,200ರ ಮೌಲ್ಯದಲ್ಲಿ ಟೈಟಾನ್ ಷೇರುಗಳನ್ನು ಖರೀದಿಸಿದರೆ, ಇದು ಅಲ್ಪಾವಧಿಯ ಟ್ರೇಡಿಂಗ್ ನಲ್ಲಿ ಪ್ರತಿ ಷೇರಿನ ಮೌಲ್ಯ 2,350ರಿಂದ 2,400 ರೂ.ವರೆಗೆ ತಲುಪುವ ಸಾಧ್ಯತೆ ಇದೆ. ಈ ಹಂತದಲ್ಲಿ ಒಂದು ವೇಳೆ ಟೈಟಾನ್ ಷೇರು ಮೌಲ್ಯ 2,230ರಿಂದ 2,240 ಅಂಕಗಳಷ್ಟು ಕುಸಿತ ಕಂಡರೂ ಕೂಡಾ ಹೆಚ್ಚಿನ ನಷ್ಟವಾಗಲಾರದು ಎಂದು ಬಗಾಡಿಯಾ ಷೇರು ಹೂಡಿಕೆದಾರರಿಗೆ ಸಲಹೆ ನೀಡಿದ್ದಾರೆ.