Advertisement

ರಾಜ್ಯೋತ್ಸವ ಕನ್ನಡ ಪ್ರಜ್ಞೆ ಜಾಗೃತಗೊಳಿಸುವ ಉತ್ಸವ

03:09 PM Nov 25, 2018 | Team Udayavani |

ದಾವಣಗೆರೆ: ಕನ್ನಡ ರಾಜ್ಯೋತ್ಸವ ಕನ್ನಡ ಭಾಷೆ, ಸಂಸ್ಕೃತಿ, ಕನ್ನಡ ಪ್ರಜ್ಞೆಯನ್ನು ಕನ್ನಡಿಗರಲ್ಲಿ ಉಳಿಸುವ ಉತ್ಸವವಾಗಿದೆ
ಎಂದು ಚಿತ್ರದುರ್ಗದ ಸಾಹಿತಿ ಲೋಕೇಶ್‌ ಅಗಸನಕಟ್ಟೆ ಅಭಿಪ್ರಾಯಪಟ್ಟರು.

Advertisement

ಮಹಾನಗರಪಾಲಿಕೆ ಆವರಣದಲ್ಲಿ ಮಹಾನಗರಪಾಲಿಕೆ, ಕನ್ನಡಪರ ಸಂಘ-ಸಂಸ್ಥೆಗಳು ಹಾಗೂ ಪತ್ರಕರ್ತರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿರುವ 63ನೇ ಕನ್ನಡ ರಾಜ್ಯೋತ್ಸವ ಸಮಾರಂಭದ 2ನೇ ದಿನದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಕನ್ನಡ ರಾಜ್ಯೋತ್ಸವ ಕನ್ನಡ ಭಾಷೆ, ಸಂಸ್ಕೃತಿಯ ಸಾಂಸ್ಕೃತಿಕ ಉತ್ಸವವಾಗಿದ್ದು, ಕನ್ನಡಿಗರು ಮೊದಲು ಕನ್ನಡ ಭಾಷೆಯನ್ನು ನಿರಂತರವಾಗಿ ಉಳಿಸಿಕೊಂಡು ಹೋಗಬೇಕೆನ್ನುವ ಎಚ್ಚರಿಕೆಯ ಉತ್ಸವವಾಗಿದೆ ಎಂದರು. 

1890 ರಲ್ಲಿ ಕನ್ನಡವನ್ನು ಒಟ್ಟುಗೂಡಿಸುವ, ಕನ್ನಡ ಭಾಷೆ ಮಾತಾಡುವ ಎಲ್ಲಾ ಪ್ರಯತ್ನ ಮಾಡಲಾಯ್ತು. ನಂತರ 1905ರಲ್ಲಿ ಆಲೂರು ವೆಂಕಟರಾಯರು ಕನ್ನಡ ಭಾಷೆಯನ್ನು ಒಟ್ಟುಗೂಡಿಸುವ ಪ್ರಯತ್ನ ಮಾಡಿದರು. 1956 ರಲ್ಲಿ ಕನ್ನಡ ಭಾಷೆಯನ್ನು ಸಾಕ್ಷೀಕರಿಸಿದ ಸುದೀರ್ಘ‌ ಇತಿಹಾಸ, ಹೋರಾಟ ಫಲವಾಗಿ ಕನ್ನಡ ಭಾಷೆ ಮಾತನಾಡುವ ಎಲ್ಲಾ ಪ್ರದೇಶಗಳು ಕೂಡ ಒಂದು ರಾಜ್ಯದ ಮಿತಿಯೊಳಗೆ ಸೇರಿಕೊಂಡ ಸುದಿನವಾಗಿದೆ ಎಂದು ಹೇಳಿದರು.

ಕನ್ನಡಿಗರು ಕನ್ನಡವನ್ನು ಪ್ರೀತಿಸಬೇಕು. ಉದ್ಯೋಕ್ಕಾಗಿ ಇತರೆ ಭಾಷೆಗಳನ್ನು ಕಲಿಯಬೇಕು. ಜ್ಞಾನದ ಅರಿವಿಗಾಗಿ ಇತರೆ ಭಾಷೆಗಳನ್ನು ಓದುವ ಜೊತೆಗೆ ಬೇರೆ ಭಾಷಿಗರನ್ನು ಸಮನ್ವಯ ಭಾವದಿಂದ ಕಾಣುವ ಮೂಲಕ ಅನ್ಯ ಭಾಷಿಗರು ಕೂಡ ಕನ್ನಡವನ್ನು ಪ್ರೀತಿಸುವಂತಾಗಬೇಕು. ಆಗ ಮಾತ್ರ ಶಾಂತಿ, ನೆಮ್ಮದಿಯಿಂದ ಕನ್ನಡಿಗರು ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದರು.

ಗಡಿನಾಡು ಪ್ರಾಂತ್ಯಗಳಲ್ಲಿ ಕನ್ನಡಿಗರ ಸ್ಥಿತಿ ಹೀನಾಯವಾಗಿದೆ. ಕನ್ನಡ ಸಮೃದ್ಧವಾಗಿ ಉಳಿದಿರುವುದು ಹಳ್ಳಿಗಾಡಿನ ಜನರಿಂದ. ಅದನ್ನ ದಾವಣಗೆರೆ ಜಿಲ್ಲೆಯಲ್ಲಿ ಕಾಣಬಹುದಾಗಿದೆ ಎಂದು ತಿಳಿಸಿದರು.

Advertisement

ಸಂಸದ ಜಿ.ಎಂ. ಸಿದ್ದೇಶ್ವರ್‌ ಮಾತನಾಡಿ, ಬೆಂಗಳೂರಿನಲ್ಲಿ ಒರಿಸ್ಸಾ, ಬಂಗಾಳಿ, ಹಿಂದಿ, ಬಿಹಾರಿ ಸೇರಿದಂತೆ ಎಲ್ಲಾ ಭಾಷೆಯನ್ನು ಮಾತನಾಡುವ ಜನರಿದ್ದಾರೆ. ಅದೇ ರೀತಿ ಮಧ್ಯ ಕರ್ನಾಟಕ ದಾವಣಗೆರೆ ರಾಜಧಾನಿ ಆಗಿದ್ದರೆ ಎಲ್ಲಾ ಕನ್ನಡಮಯ ಭಾಗವಾಗುತ್ತಿತ್ತು. ದಾವಣಗೆರೆ 2ನೇ ರಾಜಧಾನಿ ಆ ಗಬೇಕು ಎಂದು ಸಾಕಷ್ಟು ಕನ್ನಡ ಪರ ಸಂಘಟನೆಗಳು ಬಹು ವರ್ಷಗಳಿಂದ ಹೋರಾಟ ಮಾಡುತ್ತಲೇ ಬಂದಿದ್ದು. ಇದಕ್ಕೆ ಎಲ್ಲರು ಸಹಕರಿಸಬೇಕು. ಅದಕ್ಕೆ ನಾವು ಕೂಡ ಸರ್ಕಾರದ ಮೇಲೆ ಒತ್ತಡವೇರಿ
ದಾವಣಗೆರೆಯನ್ನು ರಾಜಧಾನಿಯನ್ನಾಗಿ ಮಾಡಲು ಪ್ರಯತ್ನ ಮಾಡುತ್ತೇವೆ. ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದೆ. ಅದಕ್ಕೆ ಸಾಕಷ್ಟು ಅನುದಾನದ ಅಗತ್ಯವಿದೆ. ಎಲ್ಲಾ ಸಂಸದರೂ ಸೇರಿ ಒತ್ತಡ ಹಾಕಿ ಅನುದಾನ ತರಲು ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.

1 ರಿಂದ 7ನೇ ತರಗತಿವರೆಗೆ ಮಾತೃಭಾಷೆ ಕಲಿಸಬೇಕು. ಈ ಪದ್ಧತಿಯನ್ನು ಎಲ್ಲಾ ಪೋಷಕರು ಕಾರ್ಯಗತಗೊಳಿಸಬೇಕು
ಎಂದರಲ್ಲದೇ, ಹಳ್ಳಿಗಳಲ್ಲಿ ಎಲ್‌ಕೆಜಿಗೆ ಮಕ್ಕಳನ್ನು ಕಾನ್ವೆಂಟ್‌ಗೆ ಸೇರಿಸುತ್ತಿದ್ದಾರೆ. ಹಾಗಾಗಿ ಮಕ್ಕಳಿಗೆ ಕನ್ನಡವೇ ತಿಳಿಯದ ಹಾಗೆ ಮಾಡುತ್ತಿದ್ದಾರೆ. ಈ ಧೋರಣೆ ಬದಲಾದರೆ ಮಾತ್ರ ಕನ್ನಡ ಭಾಷೆ, ಸಂಸ್ಕೃತಿ ಉಳಿಯುತ್ತದೆ. 2000 ಸಾವಿರ ವರ್ಷಗಳ ಇತಿಹಾಸವೂ ಸಮೃದ್ಧವಾಗಿ ಉಳಿಯಲು ಸಾಧ್ಯವಾಗುತ್ತದೆ ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌. ಚೇತನ್‌ ಮಾತನಾಡಿ, ಕನ್ನಡಕ್ಕೇ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳು ಬಂದಿವೆ. ಹಾಗಾಗಿ ಕನ್ನಡ ಭಾಷೆ ಉಳಿಯಲು ಮೊದಲು ಕನ್ನಡಿಗರು ಎಲ್ಲಾ ವ್ಯವಹಾರವನ್ನು ಕನ್ನಡದಲ್ಲಿ ಮಾಡಬೇಕು. ಕನ್ನಡವನ್ನು ಅನ್ನ ಕೊಡುವ ಭಾಷೆಯಾಗಿ ಮಾಡಬೇಕು. ಇದಕ್ಕೆ ಎಲ್ಲಾ ಜನರು, ಅಧಿಕಾರಿಗಳು, ಜನಪ್ರತಿನಿಧಿಗಳು ಕೈಜೋಡಿಸಬೇಕು. ವೈಜ್ಞಾನಿಕವಾಗಿ ತಂತ್ರಜ್ಞಾನದಲ್ಲೂ ಕನ್ನಡ ಭಾಷೆ ಬೆಳೆಸಲು ಪ್ರಯತ್ನ ಮಾಡಬೇಕು ಎಂದು ಹೇಳಿದರು. 

ದಾವಣಗೆರೆ ಉತ್ತರ ಕ್ಷೇತ್ರ ಶಾಸಕ ಎಸ್‌.ಎ. ರವೀಂದ್ರನಾಥ್‌ ಉದ್ಘಾಟನೆ ನೆರವೇರಿಸಿದರು. ಮೇಯರ್‌ ಶೋಭಾ ಪಲ್ಲಾಗಟ್ಟೆ ಅಧ್ಯಕ್ಷತೆ ವಹಿಸಿದ್ದರು. ಉಪಮೇಯರ್‌ ಚಮನಸಾಬ್‌, ಪತ್ರಕರ್ತರಾದ ಎನ್‌. ವಿಶಾಖ್‌, ಸದಾನಂದ ಹೆಗಡೆ, ಆಯುಕ್ತ ಮಂಜುನಾಥ್‌ ಆರ್‌. ಬಳ್ಳಾರಿ, ಟಿ. ಶಿವಕುಮಾರ್‌, ಸುರೇಂದ್ರಮೋಯ್ಲಿ, ಎಸ್‌. ತಿಪ್ಪಣ್ಣ ಇತರರು ಉಪಸ್ಥಿತರಿದ್ದರು. ಮಂಜಮ್ಮ. ಚಂದ್ರಶೇಖರ್‌ ಸ್ವಾಗತಿಸಿದರು. ಪತ್ರಕರ್ತೆ ತೇಜಸ್ವಿನಿ, ಡಾ| ರವೀಂದ್ರ ಬಣಕಾರ್‌, ಜಾಲಿಕಟ್ಟೆ ಇಮ್ರಾನ್‌, ಅಂಜಲಿದೇವಿ ಸೇರಿದಂತೆ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next