Advertisement
ರಾಜ್ಯ ಸರ್ಕಾರ ಗುರುವಾರ ಪ್ರಕಟಿಸಿದ 2018ರ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಹಿರಿಯ ಜೀವಿ ಶರಣಬಸವರಾಜ ಬಿಸರಳ್ಳಿ ಅವರು ‘ಉದಯವಾಣಿ’ಯೊಂದಿಗೆ ಮನದಾಳದ ಮಾತು ಹಂಚಿಕೊಂಡಿದ್ದಾರೆ. ಪ್ರಸ್ತುತ ಕನ್ನಡ ಭಾಷೆ ಪೂರ್ತಿ ದಾರಿ ತಪ್ಪುತ್ತಿದೆ. ಏಲ್ಲಿ ನೋಡಿದರೂ ಅಲ್ಲಿ ಇಂಗ್ಲಿಷ್ ವ್ಯಾಮೋಹ ಹೆಚ್ಚಾಗಿದೆ. ಪಾಲಕರಲ್ಲಿ ಇಂಗ್ಲಿಷ್‌ನಲ್ಲಿ ಅಂತಹದ್ದು ಏನು ಕಂಡು ಬಂದಿದೆಯೋ ನನಗೆ ತಿಳಿಯುತ್ತಿಲ್ಲ. ಮಕ್ಕಳನ್ನು ಕನ್ನಡ ಶಾಲೆಗಳಿಗೆ ದಾಖಲಿಸುವುದನ್ನು ಬಿಟ್ಟು ಆಂಗ್ಲ ಮಾಧ್ಯಮ ಶಾಲೆಗೆ ದಾಖಲಿಸುತ್ತಾರೆ. ಈಗಿನ ಮಕ್ಕಳಿಗೆ ಕನ್ನಡ ವರ್ಣಮಾಲೆ, ಅಕ್ಷರಗಳ ಬಗ್ಗೆ ಸರಿಯಾದ ಪರಿಜ್ಞಾನವಿಲ್ಲ, ಇದು ಬೇಸರ ತರುತ್ತಿದೆ. ಕನ್ನಡಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಯಾವ ರಾಜ್ಯಗಳಲ್ಲಿಯೂ ಎಂಟು ಜನರಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿಲ್ಲ. ಆದರೆ ಕರ್ನಾಟಕದ ಕಣ್ಮಣಿಗಳಿಗೆ ಎಂಟು ಜ್ಞಾನಪೀಠ ಪ್ರಶಸ್ತಿ ಲಭಿಸಿವೆ. ಇದು ನಮ್ಮ ಸೌಭಾಗ್ಯವೇ ಸರಿ. ಆದರೆ ಈ ನೆಲದಲ್ಲಿ ಕನ್ನಡದ ಉಳಿವಿಗೆ ಹೋರಾಟಗಳು ಅಷ್ಟಕ್ಕಷ್ಟೇ ಆಗಿದೆ ಎನ್ನುತ್ತಾರೆ.
Related Articles
ದೇಶಕ್ಕೆ 1947 ಆ. 15ರಂದು ಸ್ವಾತಂತ್ರ್ಯ ಸಿಕ್ಕರೂ ಹೈದ್ರಾಬಾದ್ ಕರ್ನಾಟಕ ಭಾಗಕ್ಕೆ ಆಗಿನ್ನೂ ಸ್ವಾತಂತ್ರ್ಯ ದೊರೆತಿರಲಿಲ್ಲ. ಇಲ್ಲಿ ನಿಜಾಮರ ಆಳ್ವಿಕೆ ಜೋರಾಗಿತ್ತು. ಆಗ ಯುವಕರಾಗಿದ್ದ ಶರಣಬಸವರಾಜ ಬಿಸರಳ್ಳಿ ಅವರು ನಿಜಾಮನ ವಿರುದ್ಧವೇ ಸಿಡಿದೆದ್ದು ಕೊಪ್ಪಳ ಹಳೇ ಡಿಸಿ ಕಚೇರಿ ಮೇಲೆ ಮಧ್ಯರಾತ್ರಿ ರಾಷ್ಟ್ರ ಧ್ವಜಾರೋಹಣ ಮಾಡಿ ದಿಟ್ಟತನ ತೋರಿದ್ದರು. ಇದರಿಂದ ಆಗಿನ ಆಡಳಿತ ವರ್ಗ ಇವರನ್ನು ಬಂಧಿಸಿ ಜೈಲಿಗೆ ಕಳಿಸಿತ್ತು. ಆದರೂ ಸ್ವಾತಂತ್ರ್ಯಕ್ಕಾಗಿ ತನ್ನ ನಿಷ್ಠೆ ಬಿಡದ ಇವರು ನನ್ನನ್ನು ಗಲ್ಲಿಗೇರಿಸಿದರೂ ಪರವಾಗಿಲ್ಲ. ಸ್ವಾತಂತ್ರ್ಯಕ್ಕಾಗಿ ನಾವು ಹೋರಾಟ ಮಾಡಲು ಸಿದ್ಧರಿದ್ದೇವೆ ಎಂದು ಪಣ ತೊಟ್ಟಿದ್ದರು.
Advertisement
ಮೂರು ಬಾರಿ ಜೈಲು ಸೇರಿದ್ದ ಇವರು ನಿಜಾಮ್ ಪೊಲೀಸರ ಕೈಯಿಂದ ಬಡಿಸಿಕೊಂಡಿದ್ದರು. ಸ್ವಾತಂತ್ರ್ಯಕ್ಕಾಗಿ ವಿವಿಧೆಡೆ ಸಭೆ ನಡೆಸಿದ್ದಲ್ಲದೇ ಮಹಾತ್ಮ ಗಾಂಧೀಜಿ ಅವರ ಚಿತಾಭಸ್ಮವನ್ನು ತಂದು ಬಿಸರಳ್ಳಿ ಗ್ರಾಮದಲ್ಲಿಟ್ಟು ಗಾಂಧೀಜಿ ಕಟ್ಟೆ ಕಟ್ಟಿಸಿದ್ದರು. ಕೊನೆಗೂ ಹೈಕ ವಿಮೋಚನೆಗೆ ಹಲವು ಹೋರಾಟಗಾರರ ಜೊತೆ ಕೈ ಜೋಡಿಸಿ ಯಶಸ್ವಿಯಾಗಿದ್ದಾರೆ. ಈಗಲೂ ಸಮಾಜ ಸೇವೆಯಲ್ಲಿ ತೊಡಗಿರುವ ಇವರು ಇಳಿ ವಯಸ್ಸಿನಲ್ಲೂ ದೇಶ, ಭಾಷಾಭಿಮಾನಕ್ಕಾಗಿ ಹೋರಾಟ ನಡೆಸಿದ್ದಾರೆ. ಆದರೆ ಪ್ರಸ್ತುತ ಭ್ರಷ್ಟಾಚಾರ ವ್ಯವಸ್ಥೆಯ ವೈಖರಿಗೆ ಪ್ರತಿಯೊಬ್ಬರ ವಿರುದ್ಧವೂ ಸಿಡಿಯುತ್ತಿದ್ದಾರೆ.
ದೇಶಕ್ಕಾಗಿ ಹೋರಾಡಿದ ಜೀವಕೊಪ್ಪಳ: ರಾಜ್ಯ ಸರ್ಕಾರ ಪ್ರಸಕ್ತ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿದ್ದು, ಸ್ವಾತಂತ್ರ್ಯ ಹೋರಾಟಗಾರರ ಕ್ಷೇತ್ರದಲ್ಲಿ ಕೊಪ್ಪಳ ತಾಲೂಕಿನ ಬಿಸರಳ್ಳಿ ಗ್ರಾಮದ ಹಿರಿಯ ಜೀವ, ಸ್ವಾತಂತ್ರ್ಯ ಹೋರಾಟಗಾರ ಶರಣಬಸವರಾಜ ಬಿಸರಳ್ಳಿ ಅವರಿಗೆ ಪ್ರಶಸ್ತಿ ಲಭಿಸಿದೆ. ಶರಣಬಸವರಾಜ ಬಿಸರಳ್ಳಿ ಅವರು ಬಿಸರಳ್ಳಿಯಲ್ಲಿ 25-4-1929ರಂದು ಜನಿಸಿದರು. 1ರಿಂದ 4ನೇ ತರಗತಿವರೆಗೂ ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದ ಶಾಲೆಯಲ್ಲಿ ಪೂರೈಸಿ 5ರಿಂದ ಮೆಟ್ರಿಕ್‌ವರೆಗೂ ಕೊಪ್ಪಳದಲ್ಲಿ ಅಭ್ಯಾಸ ಮಾಡಿದ್ದಾರೆ. ನಂತರ ಧಾರವಾಡದ ಕರ್ನಾಟಕ ವಿವಿಯಲ್ಲಿ ಎಂಎ, ಹಂಪಿ ವಿವಿಯಲ್ಲೂ ಎಂಪಿ ಪದವಿ ಪಡೆದಿದ್ದಾರೆ. ನಂತರ ಗಂಗಾವತಿಯಲ್ಲಿ ಬಿಇಡಿ ಅಭ್ಯಾಸ ಪೂರೈಸಿದ ಇವರು, ನಂತರ ಎಲ್‌ಎಲ್‌ಬಿ ಪದವಿ ಪಡೆದಿದ್ದಾರೆ. 1953, ಅ. 10ರಂದು ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾಗಿ ಸರ್ಕಾರಿ ನೌಕರಿ ಸೇರಿದ ಅವರು ಸುದೀರ್ಘ 39 ವರ್ಷಗಳ ಕಾಲ ಕೊಪ್ಪಳ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಕವಲೂರು, ಮಂಗಳೂರು, ಕೊಪ್ಪಳ, ಕಾರಟಗಿ ಸೇರಿದಂತೆ ಇತರೆಡೆ ಸೇವೆ ಸಲ್ಲಿಸಿದ ಅವರು 1992ರಲ್ಲಿ ನಿವೃತ್ತಿಯಾಗಿದ್ದಾರೆ. ನಿವೃತ್ತಿ ಬಳಿಕವೂ ಕಾಲಿ ಕುಳಿತುಕೊಳ್ಳದ ಹಿರಿಯ ಜೀವಿ ಪಿಎಚ್‌ಡಿ ಮಾಡಬೇಕೆನ್ನುವ ಮಹದಾಸೆಯಿಂದ ಇತ್ತೀಚೆಗೆ ಧಾರವಾಡ ಹಾಗೂ ಹಂಪಿ ವಿವಿಯಲ್ಲಿ ಪ್ರವೇಶ ಪರೀಕ್ಷೆ ಬರೆದಿದ್ದರು. 91ನೇ ಇಳಿ ವಯಸ್ಸಿನಲ್ಲಿಯೂ ಹಂಪಿ ವಿವಿಯಲ್ಲಿ ಪ್ರಸ್ತುತ ಪಿಎಚ್‌ಡಿಗೆ ಪ್ರವೇಶಾತಿ ದೊರೆತಿದೆ.