Advertisement

ನಗರದೆಲ್ಲೆಡೆ ರಾಜ್ಯೋತ್ಸವ ಸಂಭ್ರಮಾಚರಣೆ

09:49 PM Nov 01, 2019 | Lakshmi GovindaRaju |

ಮೈಸೂರು: 64ನೇ ಕನ್ನಡ ರಾಜ್ಯೋತ್ಸವವನ್ನು ನಗರದ ಎಲ್ಲಡೆ ಸಂಭ್ರಮದಿಂದ ಆಚರಿಸಲಾಯಿತು. ನಗರದ ವಿವಿಧ ಸಂಘ ಸಂಸ್ಥೆ, ಸಂಘಟನೆಗಳು ಕನ್ನಡ ರಾಜ್ಯೋತ್ಸವ ಪ್ರಯುಕ್ತ ಸ್ಪರ್ಧೆ, ಪ್ರಶಸ್ತಿ ಪ್ರದಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಮುಂತಾದ ಹಲವು ಕಾರ್ಯಕ್ರಮ ನಡೆಸುವ ಮೂಲಕ ಕನ್ನಡದ ಏಕೀಕರಣದ ದಿನ ಹಾಗೂ ಹೋರಾಟ ಮಾಡಿದವರನ್ನು ಸ್ಮರಿಸಲಾಯಿತು.

Advertisement

ಆಟೋ ನಿಲ್ದಾಣಗಳಲ್ಲಿ ಹಬ್ಬದ ವಾತಾವರಣ: ರಾಜ್ಯೋತ್ಸವ ಎಂದರೆ ಆಟೋ ಚಾಲಕರಿಗೆ ಎಲ್ಲಿಎಲ್ಲದ ಸಂಭ್ರಮ. ತಮ್ಮ ಆಟೋ ನಿಲ್ದಾಣಗಳನ್ನು ಸ್ವತ್ಛಗೊಳಿಸಿ, ಹಸಿರು ತೋರಣಗಳಿಂದ ಸಿಂಗರಿಸಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ನಂತರ ಧ್ವಜಾರೋಹಣ ನೆರವೇರಿಸಿದರು. ಆಟೋಕ್ಕೆ ಕನ್ನಡ ಬಾವುಟ ಕಟ್ಟಿಕೊಂಡು ಕನ್ನಡ ಧ್ವಜ ರಾರಾಜಿಸುವಂತೆ ಮಾಡಿದರು. ಜೊತೆಗೆ ಕನ್ನಡ ಪ್ರೇಮಿಗಳು ತಮ್ಮ ವಾಹನಗಳಿಗೆ ಕನ್ನಡ ಬಾವುಟ ಕಟ್ಟಿಕೊಂಡು ನಗರದೆಲ್ಲೆಡೆ ಸಂಚಾರಿಸಿ ಸಂಭ್ರಮಿಸಿದರು. ಇನ್ನೂ ಕೆಲವರು ನಗರದ ಪ್ರಮುಖ ವೃತ್ತ ಮತ್ತು ರಸ್ತೆಗಳಲ್ಲಿ ಕನ್ನಡ ಬಾವುಟ ಹಾರಿಸಿದರು.

ಹೋಲಿಗೆ ಯಂತ್ರ, ಸೀರೆ ವಿತರಣೆ: ಮೃಗಾಲಯದ ಸಮೀಪದ ಇಟ್ಟಿಗೆಗೂಡು ಕನ್ನಡ ಸಮಿತಿಯ ಆವರಣದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ರಾಜ್ಯೋತ್ಸವ ಪ್ರಯುಕ್ತ ಎಂಟು ಮಹಿಳೆಯರಿಗೆ ಉಚಿತ ಹೋಲಿಗೆ ಯಂತ್ರ, 300 ಮಂದಿಗೆ ಸೀರೆ ಹಾಗೂ 50 ಮಂದಿಗೆ 5ಕೇಜಿ ಅಕ್ಕಿಯನ್ನು ವಿತರಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವ ವಿ.ಸೋಮಣ್ಣ, ಜಿಲ್ಲಾಡಳಿತಕ್ಕಿಂತ ಅರ್ಥಪೂರ್ಣ, ವಿಜೃಂಭಣೆಯಿಂದ ಈ ಸಮಿತಿ ರಾಜ್ಯೋತ್ಸವ ಆಚರಿಸುತ್ತಿದೆ. ಕಳೆದ 32 ವರ್ಷಗಳಿಂದ ಆಚರಿಸಿಕೊಂಡು ಬಂದಿರುವುದು ಶ್ಲಾಘನೀಯ ಎಂದರು. ಈ ಸಂದರ್ಭ ಸಂಸದ ಪ್ರತಾಪ್‌ ಸಿಂಹ, ಮೇಯರ್‌ ಪುಷ್ಪಲತಾ ಜಗನ್ನಾಥ್‌, ಮಾಜಿ ಸಚಿವ ಕೋಟೆ ಎಂ.ಶಿವಣ್ಣ, ಸಮಿತಿ ಅಧ್ಯಕ್ಷ ಎನ್‌. ನೀಲಕಂಠ ಹಾಗೂ ಪದಾಧಿಕಾರಿಗಳಾದ ವೆಂಕಟೇಶ್‌, ಸುರೇಶ್‌, ಚಂದ್ರಶೇಖರ್‌, ಶ್ರೀನಿವಾಸ್‌ ಇದ್ದರು.

ಸರ್ವಜನಾಂಗ ಹಿತ‌ರಕ್ಷಣಾ ವೇದಿಕೆ ಜಾಥಾ: ಸರ್ವಜನಾಂಗ ಹಿತ‌ರಕ್ಷಣಾ ವೇದಿಕೆಯಿಂದ ನಗರದಲ್ಲಿ ಜಾಥಾ ನಡೆಸುವ ಮೂಲಕ ರಾಜ್ಯೋತ್ಸವ ಆಚರಿಸಲಾಯಿತು. ನಾಡ ದೇವತೆ ಭುವನೇಶ್ವರಿ ದೇವಿಯ ಭಾವಚಿತ್ರವನ್ನು ತೆರೆದ ವಾಹನದಲ್ಲಿಟ್ಟು ಮೆರವಣಿಗೆ ನಡೆಸಲಾಯಿತು. ಕನ್ನಡ ಮಾತೆಗೆ ಜೈಕೂರ ಕೂಗಿ ಸಂಭ್ರಮಿಸಿದರು. ರಾಜ್ಯಾಧ್ಯಕ್ಷ ವೇಣುಗೋಪಾಲ್, ಪದಾಧಿಕಾರಿಗಳಾದ ಜಯರಾಮ್, ಸೋಮಸುಂದರ್‌, ಅಕ್ಷಯ್, ಅಕ್ರಂ ಪಾಷಾ, ಗೌರಿ ಮತ್ತಿತರಿದ್ದರು.

Advertisement

ರಾಮಕೃಷ್ಣ ನಗರ: ರಾಮಕೃಷ್ಣ ನಗರದ ಶ್ರೀರಾಮಕೃಷ್ಣ ಸೇವಾ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಈ ವೇಳೆ ಸಂಸ್ಕೃತಿ ಶಿಕ್ಷಕಿ ಮಾತನಾಡಿ, ಕನ್ನಡ ಹೋರಾಟಗಾರ ಎಂ.ರಾಮಮೂರ್ತಿ ಅವರು ಹಳದಿ ಮತ್ತು ಕೆಂಪು ಬಣ್ಣದಿಂದ ನಮ್ಮ ನಾಡಿನ ಬಾವುಟ ಸಿದ್ಧಪಡಿಸಿದರು. ಹಳದಿ ಕನ್ನಡಾಂಬೆಯ ಶಾಂತಿ ಮತ್ತು ಸೌಹಾರ್ದತೆಯ ಸೂಚಿಸಿದರೆ, ಕೆಂಪು ಬಣ್ಣ ಕ್ರಾಂತಿ ಮತ್ತು ಧೈರ್ಯದ ಸಂದೇಶ ನೀಡುತ್ತದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ರಾಮಕೃಷ್ಣ ಸೇವಾ ಸಂಘ ಅಧ್ಯಕ್ಷ ಎಂ.ಪಾಪೇಗೌಡ, ಕಾರ್ಯನಿರ್ವಾಹಕ ಅಧಿಕಾರಿ ಕೆ.ಪಿ.ಮಹದೇವಪ್ಪ, ಪ್ರಾಂಶುಪಾಲ ಪ್ರೊ.ಕೆ.ಎಂ.ಮಹದೇವಪ್ಪ, ಮುಖ್ಯಶಿಕ್ಷಕ ಜಿ.ಎನ್‌. ವಿಶ್ವನಾಥ್‌, ವೀಣಾ ಇದ್ದರು.

ಜೆಎಸ್‌ಎಸ್‌ ಸಂಸ್ಥೆ: ನಗರದ ಬಿ.ಎನ್‌. ರಸ್ತೆಯಲ್ಲಿರುವ ಜೆಎಸ್‌ಎಸ್‌ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರೊ.ಬಿ.ವಿ. ಸಾಂಬಶಿವಯ್ಯ ಧ್ವಜಾರೋಹಣ ನೆರವೇರಿಸಿದರು. ಪ್ರಾಂಶುಪಾಲರಾದ ಪ್ರೊ.ಎಂ.ಮಹದೇವಪ್ಪ, ಎಸ್‌. ಸೋಮಶೇಖರ್‌, ಕನ್ನಡ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಡಾ.ಬಿ.ಎಸ್‌. ಸುದೀಪ್‌ ಇದ್ದರು.

ಶಕ್ತಿನಗರ: ಶಕ್ತಿನಗರ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ಶಕ್ತಿನಗರದ ಚ.ವಿಜಯಕುಮಾರ್‌ ಉದ್ಯಾನದಲ್ಲಿ ಸರಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಮಹೇಶ್‌ ಧ್ವಜಾರೋಹಣ ನೆರವೇರಿಸಿದರು.

ಗಂಡುಭೇರುಂಡ ಪಾರ್ಕ್‌: ಶ್ರೀ ಚೌಡೇಶ್ವರಿ ಶಾಂತಿನಿಕೇತನ ಟ್ರಸ್ಟ್‌ ನಿಂದ ಕುವೆಂಪು ನಗರದ ಗಂಡುಭೇರುಂಡ ಪಾರ್ಕ್‌ನಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಚಿತ್ರಕಲಾ ಸ್ಪರ್ಧೆ ನಡೆಸಲಾಯಿತು. ನಾಗ ಮಾರ್ಷಲ್‌ ಆರ್ಟ್‌ ಅಕಾಡೆಮಿ, ರೋಟರಿ ಪ್ಯಾಲೇಸ್‌ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಒಂದು ದಿನದ ಉಚಿತ ಆತ್ಮರಕ್ಷಣೆ ಮತ್ತು ಕುಮಿತೆ ಶಿಬಿರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಯಿತು. ಕನ್ನಡ ರಾಜ್ಯೋತ್ಸವ ಪ್ರಯುಕ್ತ ಮುರಗಾನ ಕಲಾವೃಂದವರು ಎರಡು ನಕ್ಷತ್ರಗಳ ಅಪೂರ್ವ ಸಂಗಮ ರಸಸಂಜೆ ಕಾರ್ಯಕ್ರಮದಲ್ಲಿ ಕನ್ನಡ ಗೀತೆ ಹಾಡುವ ಮೂಲಕ ರಂಜಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next