ಹಾವೇರಿ: ರಾಜ್ಯ ಸರ್ಕಾರ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಜಿಲ್ಲೆಯ ‘ನಾಟಿ ರಾಗಿ’ ಕೃಷಿ ಖ್ಯಾತಿಯ ಸಾವಯವ ಕೃಷಿಕ ಬ್ಯಾಡಗಿ ತಾಲೂಕು ಚಿನ್ನಿಕಟ್ಟಿ ಗ್ರಾಮದ ಮೂಕಪ್ಪ ಪೂಜಾರ ಅವರನ್ನು ಆಯ್ಕೆ ಮಾಡಿದೆ. ಮೂಕಪ್ಪ ಪೂಜಾರ ಅವರು ಪಾರಂಪರಿಕ ರಾಗಿ ತಳಿ ಸಂರಕ್ಷಣೆ ಹಾಗೂ ಗುಣಿ ಇಲ್ಲವೇ ನಾಟಿ ಪದ್ಧತಿಯಲ್ಲಿ ರಾಗಿ ಕೃಷಿ ಕುರಿತು ರಾಜ್ಯದಲ್ಲಷ್ಟೇ ಅಲ್ಲ ದೇಶದ ವಿವಿಧ ಭಾಗಗಳಲ್ಲಿ ಅರಿವು ಮೂಡಿಸುವ ವಿಶೇಷ ಕೆಲಸ ಮಾಡಿದ್ದು, ಈ ಸೇವೆ ಪರಿಗಣಿಸಿ ಸರ್ಕಾರ ಅವರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಮೂಕಪ್ಪ ಪೂಜಾರ ಅವರು ಕಳೆದ ಎರಡು ದಶಕಗಳಿಂದ ಅತೀ ಹಳೆಯ ರಾಗಿ ತಳಿ ಎನಿಸಿದ ‘ಉಂಡೆರಾಗಿ’ ತಳಿಯನ್ನು ಸಂರಕ್ಷಿಸಿ, ರೈತರಿಗೆ ಪರಿಚಯಿಸುವ ಮೂಲಕ ಅದನ್ನು ಉಳಿಸುವ ಪ್ರಯತ್ನ ಮಾಡಿದ್ದಾರೆ. ಇದರೊಂದಿಗೆ ನಾಟಿ ಪದ್ಧತಿಯ ರಾಗಿ ಕೃಷಿ ಬಗ್ಗೆ 8-10 ಸಾವಿರ ರೈತರಿಗೆ ತಿಳಿಸುವ ಮೂಲಕ ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಪಡೆಯುವ ಜ್ಞಾನ ನೀಡಿದ್ದಾರೆ.
ಸಾಮಾನ್ಯವಾಗಿ ರಾಗಿ ಕೃಷಿಯಲ್ಲಿ ಒಂದು ಎಕರೆಗೆ ಐದಾರು ಕೆಜಿ ರಾಗಿ ಬೀಜ ಬಿತ್ತಲಾಗುತ್ತದೆ. ಹೀಗೆ ಬಿತ್ತಿದ ಕೃಷಿಯಲ್ಲಿ ಒಂದು ಎಕರೆಗೆ ಆರರಿಂದ ಎಂಟು ಕ್ವಿಂಟಲ್ ಮಾತ್ರ ರಾಗಿ ಇಳುವರಿ ಬರುತ್ತದೆ. ಆದರೆ, ಮೂಕಪ್ಪ ಅವರ ‘ಉಂಡೆರಾಗಿ’ ತಳಿಯ ಬೀಜ ಬಳಸುವ ಮೂಲಕ ನಾಟಿ ಪದ್ಧತಿಯಲ್ಲಿ ಬೆಳೆದರೆ ಒಂದು ಎಕರೆಗೆ ಒಂದು ಕೆಜಿ ಮಾತ್ರ ಬಿತ್ತನೆಬೀಜ ಸಾಕು. ಇಳುವರಿಗೆ ಸರಾಸರಿ 18ರಿಂದ 20ಕೆಜಿ ಬರುತ್ತದೆ. ಮೂಕಪ್ಪ ಅವರು ಸ್ವತಃ ತಮ್ಮ ಜಮೀನಿನಲ್ಲಿ ಪ್ರಯೋಗ ಮಾಡಿ ಯಶಸ್ವಿಯಾಗುವ ಜತೆಗೆ ಸಾವಿರಾರು ರೈತರಿಗೆ ತರಬೇತಿ ನೀಡಿ ಅವರ ಜೀವನಕ್ಕೂ ಅನುಕೂಲ ಮಾಡಿಕೊಟ್ಟಿರುವುದು ವಿಶೇಷ.
ವಿವಿಧ ಕೃಷಿ ಸಂಸ್ಥೆಗಳ ಮೂಲಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತರಬೇತಿ ನೀಡುವ ಜತೆಗೆ ದೆಹಲಿ, ರಾಜಸ್ತಾನ, ಪಂಜಾಬ್, ಛತ್ತಿಸಗಡ್, ತಮಿಳುನಾಡಿನಲ್ಲೂ ತರಬೇತಿ ನೀಡಿ ಜನಪ್ರಿಯರಾಗಿದ್ದಾರೆ. ನಾಟಿ ರಾಗಿಯ ಬಗ್ಗೆ ಮೂರು ಪುಸ್ತಕ ಸಹ ಬರೆದಿದ್ದಾರೆ. ಸಾವಿರಾರು ರೈತರು ನಾಟಿ ಪದ್ಧತಿಯಲ್ಲಿ ರಾಗಿ ಬೆಳೆದು ಉತ್ತಮ ಇಳುವರಿ ಪಡೆದಿದ್ದಾರೆ. 71 ವರ್ಷದ ಮೂಕಪ್ಪ ಅವರು ಈಗಲೂ ದೇಶದ ತುಂಬೆಲ್ಲ ಓಡಾಡಿ ನಾಟಿ ರಾಗಿ ಬಗ್ಗೆ ರೈತರಿಗೆ ತರಬೇತಿ ನೀಡುವ ಕೆಲಸ ಮಾಡುತ್ತಲೇ ಇದ್ದಾರೆ. ಒಟ್ಟಾರೆ ಮೂಕಪ್ಪ ಪೂಜಾರ ಅವರ ಸಾವಯವ ರಾಗಿ ಕೃಷಿಜ್ಞಾನ ಪ್ರಸಾರವನ್ನು ಪರಿಗಣಿಸಿ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಜಿಲ್ಲೆಯ ಹೆಮ್ಮೆ ಹೆಚ್ಚಿಸಿದೆ.
ಏನಿದು ನಾಟಿ ರಾಗಿ ಪದ್ಧತಿ?
ಇಲ್ಲಿ ರಾಗಿಯನ್ನು ನೇರವಾಗಿ ಬಿತ್ತದೇ ಮಡಿ ಮಾಡಿ 20ರಿಂದ25 ದಿನಗಳ ಸಸಿ ಇರುವಾಗ ಕಿತ್ತು ಒಂದೂವರೆ ಅಡಿಯಷ್ಟು ಚೌಕದ ಅಂತರದಲ್ಲಿ ಎರಡೆರಡು ಸಸಿ ನಾಟಿ ಮಾಡಲಾಗುತ್ತದೆ. ಬಳಿಕ ಪೈರುಗಳ ಸಾಲಿನ ಮಧ್ಯೆ ಕುಂಟೆ ಹಾಗೂ ಕೊರಡು ಹೊಡೆದು ಕಳೆ ನಿವಾರಣೆ ಮಾಡಲಾಗುತ್ತದೆ. ಕೊರಡು ಹೊಡೆಯುವುದರಿಂದ ಒಂದು ಸಸಿ ಹತ್ತಾರು ಟಿಸಿಲೊಡೆದು ಮೇಲಕ್ಕೇಳುತ್ತದೆ. ಇದಕ್ಕೆ ಸೆಗಣಿ ಗೊಬ್ಬರ ಬಳಸಲಾಗುತ್ತದೆ. ಈ ಮಾದರಿ ಕೃಷಿಗೆ ನೀರು ಸಹ ಕಡಿಮೆ ಸಾಕು. ಇದು ಭತ್ತದ ಶ್ರೀ ಪದ್ಧತಿಗೆ ಹೋಲುತ್ತದೆ.
ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ನೀಡುವ ರಾಗಿ ತಳಿ ಹಾಗೂ ರಾಗಿ ಕೃಷಿ ಪದ್ಧತಿ ಬಗ್ಗೆ ನಾನು ನೀಡುತ್ತಿರುವ ತರಬೇತಿ ಗುರುತಿಸಿ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದೆ. ನಾಟಿ ಪದ್ಧತಿಯಲ್ಲಿ ರಾಗಿ ಕೃಷಿ ಮಾಡುವುದರಿಂದ ನಾಟಿ ಮಾಡಿದ ಸಸಿಗೆ ನೀರು, ಪೋಷಕಾಂಶ ಯಥೇತ್ಛವಾಗಿ ಲಭಿಸಿ ಹೆಚ್ಚಿನ ತೆನೆಗಳು ಬರುತ್ತವೆ. ಸರ್ಕಾರ ನನ್ನಂಥ ಸಾಮಾನ್ಯ ಕೃಷಿಕನ ಸೇವೆ ಗುರುತಿಸಿರುವುದು ಖುಷಿಯಾಗಿದೆ.
ಮೂಕಪ್ಪ ಪೂಜಾರ, ಕೃಷಿಕ
ಎಚ್.ಕೆ.ನಟರಾಜ