ಉಡುಪಿ : ಫಾರ್ಚೂನ್ ಗ್ರೂಪ್ ಆಫ್ ಹೊಟೇಲ್ಸ್ ಸಂಸ್ಥೆಯ ಚೇರ್ಮನ್ ಹಾಗೂ ಆಡಳಿತ ನಿರ್ದೇಶಕ, ಕುಂದಾಪುರ ತಾಲೂಕಿನ ವಕ್ವಾಡಿ ಮೂಲದ ಅನಿವಾಸಿ ಭಾರತೀಯ ಉದ್ಯಮಿ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಅವರಿಗೆ ಕರ್ನಾಟಕ ಸರಕಾರ ೨೦೨೦-೨೧ ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ.
ಪ್ರವೀಣ್ ಕುಮಾರ್ ಶೆಟ್ಟಿ ಅವರು ದುಬಾೖ, ಯುಎಇಯಲ್ಲಿ ಫಾರ್ಚೂನ್ ಗ್ರೂಪ್‌ನ 6 ಹೊಟೇಲ್‌ಗಳಿದ್ದು, ಜಾರ್ಜಿಯಾದಲ್ಲಿ ಒಂದು, ಉಡುಪಿ ಜಿಲ್ಲೆಯ ಬ್ರಹ್ಮಾವರ ಹಾಗೂ ಹುಟ್ಟೂರು ವಕ್ವಾಡಿಯಲ್ಲೂ ಹೊಟೇಲ್ ಹೊಂದಿದ್ದಾರೆ.
ತಮ್ಮ ಸಂಸ್ಥೆಯಲ್ಲಿ ಕನ್ನಡಿಗರು ಸೇರಿದಂತೆ 2 ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯೋಗ ನೀಡಿದ್ದಾರೆ. ಕರ್ನಾಟಕ ಅನಿವಾಸಿ ಭಾರತೀಯ ವೇದಿಕೆಯ ಸ್ಥಾಪಕಾಧ್ಯಕ್ಷ ರಾಗಿ, ದಿ ಬ್ಯುಸಿನೆಸ್ ಚೇಂಬರ್ ಆಫ್ ಏಶ್ಯನ್ ಆ್ಯಂಡ್ ಗಲ್ಫ್ ದೇಶಗಳ ಸಂಘಟನೆಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. 1967ರ ಜು. 6ರಂದು ವಕ್ವಾಡಿಯಲ್ಲಿ ಜನಿಸಿದ ಇವರು, ಕೋಟೇಶ್ವರದ ಜೂನಿಯರ್ ಕಾಲೇಜಿನಲ್ಲಿ ಪಿಯು, ಕುಂದಾಪುರದ ಭಂಡಾರ್‌ಕಾರ್ ಕಾಲೇಜಿನಲ್ಲಿ ಬಿಎಸ್ಸಿ ಪದವಿಯನ್ನು ಮುಗಿಸಿ, ಹೊಟೇಲ್ ಉದ್ಯಮದತ್ತ ಹೆಜ್ಜೆಯಿಟ್ಟಿದ್ದರು.
ಕಳೆದ 30 ವರ್ಷದಿಂದ ದುಬಾೖಯಲ್ಲಿ ಉದ್ಯಮ ಸ್ಥಾಪಿಸಿ ಹೊರನಾಡು ಕನ್ನಡಿಗನಾಗಿದ್ದು, ಕನ್ನಡಿಗರಿಗೆ ಅಗತ್ಯ ಸಹಾಯ ಮಾಡುತ್ತಿರುವೆ. ಜನ ಸೇವೆಯನ್ನು ಸರಕಾರ ಗುರುತಿಸಿ ಈ ಗೌರವ ನೀಡಿದ್ದು ಸಂತಸ ನೀಡಿದೆ.
– ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ