Advertisement
ಪ್ರಶಸ್ತಿಗೆ ಸುಮಾರು 22 ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಪರಿಗಣಿಸಲಾಗಿದ್ದು, ರಾಜ್ಯೋತ್ಸವ ಸಲಹಾ ಸಮಿತಿ 110 ಸಾಧಕರ ಪಟ್ಟಿಯನ್ನು ಸಿದ್ಧಪಡಿಸಿ ಮುಖ್ಯಮಂತ್ರಿ ಅಧ್ಯಕ್ಷತೆಯ ಆಯ್ಕೆ ಸಮಿತಿಗೆ ನೀಡಿತ್ತು. ಶುಕ್ರವಾರ ನಡೆದ ಮುಖ್ಯಮಂತ್ರಿ ಅಧ್ಯಕ್ಷತೆಯ ಆಯ್ಕೆ ಸಮಿತಿಯಲ್ಲಿ ಹೈಕೋರ್ಟ್ ಆದೇಶದಂತೆ ಈ ವರ್ಷದ ರಾಜ್ಯೋತ್ಸವದ ಲೆಕ್ಕಾಚಾರದಲ್ಲಿ 65 ಜನರಿಗೆ ಮಾತ್ರ ಪ್ರಶಸ್ತಿ ನೀಡುವುದು, ಕ್ರೀಡಾ ಕ್ಷೇತ್ರವನ್ನು ಹೊರತು ಪಡೆಸಿ 60 ವರ್ಷ ಮೀರಿದವರಿಗೆ ಮಾತ್ರ ಪ್ರಶಸ್ತಿ ನೀಡುವುದು ಹಾಗೂ ಎಲ್ಲ ಜಿಲ್ಲೆಗಳಿಗೂ ಪ್ರಾತಿನಿಧ್ಯ ದೊರೆಯುವಂತೆ ನೋಡಿಕೊಂಡು ಪಟ್ಟಿ ಸಿದ್ಧಪಡಿಸಲಾಗಿದೆ ಎನ್ನಲಾಗಿದೆ.
ಪ್ರತಿ ವರ್ಷ ಮುಖ್ಯಮಂತ್ರಿ ಅಧ್ಯಕ್ಷತೆಯ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ರಾಜ್ಯ ಸರಕಾರದ ವ್ಯಾಪ್ತಿಯಲ್ಲಿರುವ ವಿವಿಧ ಅಕಾಡೆಮಿಗಳ ಅಧ್ಯಕ್ಷರು ಹಾಗೂ ರಾಜ್ಯ ಸರಕಾರದ ಪ್ರಮುಖ ಸಚಿವರನ್ನು ಸೇರಿಸಲಾಗುತ್ತಿತ್ತು. ಆದರೆ, ಈ ವರ್ಷ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರನ್ನು ಹೊರತು ಪಡೆಸಿ ಬೇರೆ ಯಾವುದೇ ಹಿರಿಯ ಸಚಿವರನ್ನು ಈ ಸಮಿತಿಗೆ ಸೇರ್ಪಡೆ ಮಾಡಿಲ್ಲ. ಅಂತಿಮ ಆಯ್ಕೆ ಸಮಿತಿಯಲ್ಲಿ ಸಲಹಾ ಸಮಿತಿಯಲ್ಲಿದ್ದ ಸದಸ್ಯರ ಜತೆಗೆ ನಾಲ್ವರು ಮಾತ್ರ ಇದ್ದರು.