ಹೊಸದಿಲ್ಲಿ: ರಾಜ್ಯಸಭೆಯಲ್ಲಿ ಬುಧವಾರ ಸಂಜೆ 6.02 ಗಂಟೆಯಿಂದ 7.05 ಗಂಟೆಯವರೆಗೆ ಮಾರ್ಷಲ್‌ಗಳು ಮತ್ತು ಸಂಸದರ ನಡುವೆ ನಡೆದ ಗುದ್ದಾಟದ ವೀಡಿಯೋ ಬಿಡುಗಡೆಯಾಗಿದೆ. ವೀಡಿಯೋದಲ್ಲಿ ದಾಖಲಾಗಿರುವ ದೃಶ್ಯಾವಳಿಗಳ ಪ್ರಕಾರ ಮಹಿಳಾ ಸಂಸದರು, ಮಹಿಳಾ ಮಾರ್ಷಲ್‌ಗಳು ಸಂಘರ್ಷದಲ್ಲಿ ತೊಡಗಿದ್ದರು. ಜತೆಗೆ ಸಂಸದರು ದಾಖಲೆ ಗಳನ್ನು ಹರಿದು ಎಸೆದಿರುವುದೂ ದಾಖಲಾಗಿದೆ.
ವಿಪಕ್ಷಗಳ ಪಾದಯಾತ್ರೆ: ಸಂಸತ್ ಅಧಿವೇಶನ ಮೊಟಕು ಗೊಳಿಸಿದ್ದನ್ನು ಖಂಡಿಸಿ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಸಂಸತ್ ಭವನದಿಂದ ವಿಜಯ ಚೌಕ್‌ವರೆಗೆ ಪಾದಯಾತ್ರೆ ನಡೆಸಿದರು.
ಜತೆಗೆ ರಾಜ್ಯಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರಿಗೆ ಮನವಿಯನ್ನೂ ಅರ್ಪಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ದೇಶದ ಶೇ.60ರಷ್ಟು ಮಂದಿಯ ಧ್ವನಿಯನ್ನೇ ಹತ್ತಿಕ್ಕಲಾಗಿದೆ. ಹೀಗಾಗಿ ಅವರಿಗೆ ಸಂಸತ್ ಅಧಿವೇಶನ ಇಲ್ಲದಂತೆಯೇ ಆಗಿದೆ. ಸಂಸದರಿಗೆ ಥಳಿಸಲಾಗಿದೆ ಎಂದು ದೂರಿದರು.
ವಿಪಕ್ಷಗಳಿಗೆ ಸದನದಲ್ಲಿ ಮಾತನಾಡಲು ಅವಕಾಶವನ್ನೇ ನೀಡಲಾಗಿಲ್ಲ. ಇದು ದೇಶದಲ್ಲಿ ನಡೆದ ಪ್ರಜಾಸತ್ತೆಯ ಹತ್ಯೆ ಎಂದರು ರಾಹುಲ್. ಅದಕ್ಕೆ ದನಿಗೂಡಿಸಿದ ಶಿವಸೇನೆ ರಾಜ್ಯಸಭಾ ಸದಸ್ಯ ದೇಶದ ಜನರಿಗೆ ಅಗತ್ಯ ವಿಚಾರಗಳನ್ನು ಪ್ರಸ್ತಾಪ ಮಾಡದಂತೆ ತಡೆಯಲಾಗಿದೆ. ಡಿಎಂಕೆ ಸಂಸದ ತಿರುಚ್ಚಿ ಶಿವ ಮಾತನಾಡಿ ತಮ್ಮ ಸಂಸದೀಯ ಅನುಭವದಲ್ಲಿ ಇಂಥ ದೃಶ್ಯಗಳನ್ನು ನೋಡಿಲ್ಲವೆಂದರು.
ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಮಲ್ಲಿಕಾರ್ಜುನ ಖರ್ಗೆ, ಸಂಜಯ ರಾವುತ್, ತಿರುಚ್ಚಿ ಶಿವ, ಮನೋಜ್ ಝಾ ಸೇರಿದಂತೆ ಪ್ರಮುಖರು ಇದ್ದರು. ಜತೆಗೆ ಜಂಟಿ ಹೇಳಿಕೆಯನ್ನೂ ಬಿಡುಗಡೆ ಮಾಡಿವೆ.