ಬೆಂಗಳೂರು: ಬಿಜೆಪಿ ತನ್ನ ಬತ್ತಳಿಕೆಯಲ್ಲಿರುವ 66 ಮತಗಳನ್ನು ರಾಜ್ಯಸಭೆಯ ಅಭ್ಯರ್ಥಿಗಳಿಗೆ ಹೇಗೆ ಹಂಚಿಕೆ ಮಾಡಲಿದೆ ಎನ್ನುವ ಸೂತ್ರದ ಮೇಲೆ ಕುತೂಹಲ ಹೆಚ್ಚಿದ್ದು, ಪಕ್ಷದ ಅಭ್ಯರ್ಥಿ ನಾರಾಯಣ ಕೃಷ್ಣಸಾ ಭಾಂಡಗೆ ಅವರ ಗೆಲುವಿನ ದಾರಿಯನ್ನು ಸುಲಭ ಮಾಡಿಕೊಳ್ಳುತ್ತಿದೆ.
ಉಳಿದಂತೆ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಜೆಡಿಎಸ್ ಕುಪೇಂದ್ರರೆಡ್ಡಿ ಅವರಿಗೆ ಬಿಜೆಪಿ ಯಾವ ರೀತಿಯ ಬೆಂಬಲ ನೀಡಲಿದೆ ಎಂಬ ಕೌತಕವೂ ಇದ್ದು, ಇದಕ್ಕಾಗಿ ಮತದಾನ ನಡೆಯಲಿರುವ ಮಂಗಳವಾರ ಬೆಳಗ್ಗೆ 8.30ಕ್ಕೆ ಸಭೆ ಸೇರಿ ಮತ್ತೊಮ್ಮೆ ಅಣಕು ಮತದಾನದ ಮೂಲಕ ಯಾವುದೇ ಮತಗಳು ವ್ಯರ್ಥ ಅಥವಾ ಅಸಿಂಧು ಆಗದಂತೆ ನೋಡಿಕೊಳ್ಳಲು ಕಸರತ್ತು ನಡೆಸಲಿದೆ.
ಯಶವಂತಪುರ ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್, ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಅವರು ಬಿಜೆಪಿ ಶಾಸಕಾಂಗ ಸಭೆಗಳಿಗೂ ಬಾರದೆ ಅಂತರ ಕಾಯ್ದುಕೊಳ್ಳುವುದರ ಜತೆಗೆ ಕಾಂಗ್ರೆಸ್ ಜತೆ ಗುರುತಿಸಿಕೊಂಡಿರುವುದರಿಂದ ಬಿಜೆಪಿಗೂ ಅಡ್ಡಮತದಾನ ಭೀತಿ ಇದೆ. ಅದಕ್ಕಾಗಿಯೇ ಬಿಜೆಪಿ ಅಭ್ಯರ್ಥಿಗೆ ಮತ ಹಾಕುವ 45 ಶಾಸಕರನ್ನು ಮೂರು ತಂಡಗಳಾಗಿ ವಿಂಗಡಿಸಿದ್ದು, ಮೊದಲ ಬ್ಯಾಚ್‌ನಲ್ಲೇ ಸೋಮಶೇಖರ್ ಹಾಗೂ ಶಿವರಾಮ ಹೆಬ್ಬಾರ್ ಅವರಿಂದ ಮತದಾನ ಮಾಡಿಸಿಬಿಡುವ ತಂತ್ರಗಾರಿಕೆ ಹೆಣೆದಿದೆ.
ಅನಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬೀಳಲಿರುವ ಮತಗಳನ್ನು ನೋಡಿಕೊಂಡು ಬಾಕಿ ಉಳಿಯುವ 21 ಮತಗಳಲ್ಲಿ ಮೊದಲ ಪ್ರಾಶಸ್ತ್ಯ ಹಾಗೂ ಎರಡನೇ ಪ್ರಾಶಸ್ತ್ಯ ಯಾರಿಗೆ ಕೊಡಬೇಕೆಂಬ ನಿರ್ಣಯವನ್ನು ಬಿಜೆಪಿ ಕೈಗೊಳ್ಳುವ ಸಾಧ್ಯತೆಗಳು ನಿಚ್ಚಳವಾಗಿವೆ.
ಅಧಿವೇಶನದ ಬಳಿಕ ಹೊಟೇಲ್‌ಗೆ ಕೈ ಶಾಸಕರು
ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡಮತದಾನದ ಭೀತಿ ಎದುರಿಸುತ್ತಿರುವ ಕಾಂಗ್ರೆಸ್ ಪಕ್ಷ ತನ್ನೆಲ್ಲ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಹೊಟೇಲ್ ವಾಸ್ತವ್ಯಕ್ಕೆ ಮೊರೆ ಹೋಗಿದೆ.
ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಎಲ್ಲ ಶಾಸಕರಿಗೂ ಪತ್ರ ಬರೆದಿದ್ದು, ಸೋಮವಾರ ಮಧ್ಯಾಹ್ನ 12 ಗಂಟೆಗೆ ಎಲ್ಲ ಶಾಸಕರು ಹಿಲ್ಟನ್ ಹೊಟೇಲ್‌ಗೆ ಆಗಮಿಸಬೇಕು. ಅಲ್ಲಿಯೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯೂ ನಡೆಯಲಿದೆ ಎಂದಿದ್ದಾರೆ.