ನವದೆಹಲಿ: 15 ರಾಜ್ಯಗಳ 56 ರಾಜ್ಯಸಭಾ ಸ್ಥಾನಗಳಿಗೆ ಫೆ. 27ರಂದು ಚುನಾವಣೆ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಸೋಮವಾರ (ಜ.29ರಂದು) ದಿನಾಂಕವನ್ನು ಪ್ರಕಟಿಸಿದೆ.
ಅದರಂತೆ ಫೆ.8ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಸಲ್ಲಿಕೆಗೆ ಫೆ.15 ಕೊನೆಯ ದಿನ. ಫೆ.16ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಫೆ. 20 ಕೊನೆಯ ದಿನ. ಫೆ. 27 ರಂದು ಬೆಳಿಗ್ಗೆ 9 ರಿಂದ ಸಂಜೆ ತನಕ ಚುನಾವಣೆ ನಡೆಯಲಿದ್ದು, ಅದೇ ದಿನ ಸಂಜೆ 5 ಗಂಟೆಗೆ ಮತ ಎಣಿಕೆ ನಡೆಯಲಿದೆ.
ಒಟ್ಟು 13 ರಾಜ್ಯಗಳ 50 ರಾಜ್ಯಸಭಾ ಸದಸ್ಯರ ಅವಧಿ ಎ. 2ರಂದು ಮುಗಿಯಲಿದ್ದರೆ ಎರಡು ರಾಜ್ಯಗಳ ಉಳಿದ ಆರು ಸದಸ್ಯರು ಎ. 3ರಂದು ನಿವೃತ್ತರಾಗಲಿದ್ದಾರೆ.
ಉತ್ತರ ಪ್ರದೇಶದ 10 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆದರೆ, ಮಹಾರಾಷ್ಟ್ರ, ಬಿಹಾರ ರಾಜ್ಯಗಳ ತಲಾ ಆರು ಸ್ಥಾನಗಳಿಗೆ, ಪಶ್ಚಿಮ ಬಂಗಾಳ, ಮಧ್ಯಪ್ರದೇಶದ ತಲಾ ಐದು ಸ್ಥಾನಗಳಿಗೆ, ಗುಜರಾತ್, ಕರ್ನಾಟಕದ ತಲಾ ನಾಲ್ಕು, ಆಂಧ್ರ ಪ್ರದೇಶ, ತೆಲಂಗಾಣ, ರಾಜಸ್ಥಾನ, ಒಡಿಶಾ ರಾಜ್ಯಗಳ ತಲಾ ಮೂರು, ಉತ್ತರಾಖಂಡ, ಛತ್ತೀಸಗಢ, ಹರ್ಯಾಣ ಮತ್ತು ಹಿಮಾಚಲ ಪ್ರದೇಶದ ತಲಾ ಒಂದು ಸ್ಥಾನಕ್ಕೆ ಚುನಾವಣೆ ನಡೆಯಲಿದೆ.