ಹೊಸದಿಲ್ಲಿ : ಆರು ರಾಜ್ಯಗಳ 25 ರಾಜ್ಯಸಭಾ ಸ್ಥಾನಗಳ ಚುನಾವಣೆ ಇಂದು ನಡೆಯುತ್ತಿದ್ದು 2019ರ ಲೋಕ ಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಇದು ಅತ್ಯಂತ ಮಹತ್ವವನ್ನು ಪಡೆದುಕೊಂಡಿದೆ.
ಚುನಾವಣೆಯತ್ತ ಮುಖ ಮಾಡಿರುವ ಕರ್ನಾಟಕ ಮತ್ತು ಉತ್ತರ ಪ್ರದೇವ ಅತ್ಯಧಿಕ ರಾಜ್ಯಸಭಾ ಸ್ಥಾನಗಳನ್ನು ಹೊಂದಿರುವ ಕಾರಣಕ್ಕೆ ದೇಶದ ಗಮನವನ್ನು ಸೆಳೆಯುತ್ತಿವೆ.
ಇಂದು ಬೆಳಗ್ಗೆ 9 ಗಂಟೆಯಿಂದಲೇ ರಾಜ್ಯಸಭಾ ಚುನಾವಣಾ ಮತದಾನದ ಪ್ರಕ್ರಿಯೆ ಆರಂಭಗೊಂಡಿದೆ. ಸಂಜೆ 4 ಗಂಟೆಯ ವೇಳೆ ಅದು ಪೂರ್ಣಗೊಳ್ಳಲಿದೆ. ಕರ್ನಾಟಕ, ಉತ್ತರ ಪ್ರದೇಶ, ಪಶ್ಚಿಮ ಬಂಗಾಲ, ಜಾರ್ಖಡ್, ಛತ್ತೀಸ್ ಗಢ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಮತದಾನ ಆರಂಭವಾಗಿದೆ.
ಕರ್ನಾಟಕದಲ್ಲಿ ನಾಲ್ಕು ರಾಜ್ಯಸಭಾ ಸ್ಥಾನಗಳಿದ್ದು ಐದು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿಯಿಂದ ರಾಜೀವ್ ಚಂದ್ರಶೇಖರ್, ಕಾಂಗ್ರೆಸ್‌ನಿಂದ ಎ ಹನುಮಂತಯ್ಯ, ನಾಸಿರ್ ಹುಸೇನ್ ಮತ್ತು ಜೆ ಸಿ ಚಂದ್ರಶೇಖರ್ ಸ್ಪರ್ಧಿಸುತ್ತಿದ್ದಾರೆ ಜೆಡಿಎಸ್ ನಿಂದ ಬಿ ಎಂ ಫಾರೂಕ್ ಸ್ಪರ್ಧಿಸುತ್ತಿದ್ದಾರೆ.
ಒಟ್ಟು 224 ಸದಸ್ಯಬಲದ ಕರ್ನಾಟಕ ವಿಧಾನಸಭೆಯಲ್ಲಿ ಪ್ರಕೃತ 7 ಸ್ಥಾನಗಳು ಖಾಲಿ ಇವೆ. ಕಾಂಗ್ರೆಸ್ 123, ಬಿಜೆಪಿ 43 ಮತ್ತು 7 ಬಂಡುಕೋರ ಶಾಸಕರನ್ನು ಒಳಗೊಂಡಂತೆ ಜೆಡಿಎಸ್ 37 ಸದಸ್ಯ ಬಲ ಹೊಂದಿದೆ. ಪ್ರತೀ ಅಭ್ಯರ್ಥಿ ಗೆಲವಿಗೆ 44 ಮತಗಳು ಬೇಕು.
ಒಂದು ಲೆಕ್ಕಾಚಾರದ ಪ್ರಕಾರ ಕಾಂಗ್ರೆಸ್ ನ 3ನೇ ಅಭ್ಯರ್ಥಿಯ ಗೆಲವಿಗೆ ಜೆಡಿಎಸ್ ಬಂಡುಕೋರ ಶಾಸಕರು ಮುತ್ತ ನಾಲ್ವರು ಪಕ್ಷೇತರರ ಮತಗಳು ಅಗತ್ಯವಿವೆ.
2016ರ ಜೂನ್ 11ರಂದು ನಡೆದಿದ್ದ ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್‌ನ 7 ಶಾಸಕರು ಅಡ್ಡ ಮತದಾನ ಮಾಡಿದ್ರು. ಪರಿಣಾಮವಾಗಿ ಕಾಂಗ್ರೆಸ್ ನ 3ನೇ ಅಭ್ಯರ್ಥಿ ಜಯಶಾಲಿಯಾಗಿದ್ದರು. ಅಂದು ಜೆಡಿಎಸ್ ಅಭ್ಯರ್ಥಿ ಫಾರೂಕ್ ಸೋತಿದ್ದರು. ಈ ಬಾರಿ ಅದೇ ಇತಿಹಾಸ ಪುನರಾವರ್ತನೆ ಆಗುವುದೇ ಎಂಬುದು ಕಾತರದ ವಿಷಯ.