ಬೆಂಗಳೂರು: ರಾಜ್ಯಸಭಾ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ತನ್ನೆಲ್ಲ ಶಾಸಕರನ್ನು ಜೆಡಿಎಸ್ ರೆಸಾರ್ಟ್ ಗೆ ಸ್ಥಳಾಂತರಿಸಿದೆ. ಇನ್ನೊಂದೆಡೆ ಬಿಜೆಪಿ ಮೂವರು ಸಚಿವರಿಗೆ ಮತ ಅಸಿಂಧುವಾಗದಂತೆ ಹಕ್ಕು ಚಲಾಯಿಸುವಂತೆ ಶಾಸಕರಿಗೆ ಪಾಠ ಮಾಡುವ ಜವಾಬ್ದಾರಿ ನೀಡಿದೆ.
ಎಷ್ಟೇ ಮಾತುಕತೆಯ ನಂತರವೂ ಕಾಂಗ್ರೆಸ್ ನಿಂದ ಸಹಕಾರ ಲಭ್ಯವಾಗದ ಹಿನ್ನೆಲೆಯಲ್ಲಿ ಜೆಡಿಎಸ್ ಈಗ ತನ್ನ ಮತ ಕಾಯ್ದುಕೊಳ್ಳುವುದಕ್ಕೆ ಮುಂದಾಗಿದೆ.ಎಲೆಕ್ಟ್ರಾನಿಕ್ ಸಿಟಿ ಸಮೀಪದ ರೆಸಾರ್ಟ್ ಗೆ ತನ್ನ ಶಾಸಕರನ್ನು ಸ್ಥಳಾಂತರಿಸಿದೆ. ವಿದೇಶ ಪ್ರವಾಸದಲ್ಲಿದ್ದ ಶಾಸಕ ಗೌರಿ ಶಂಕರ್ ಅವರನ್ನೂ ತುರ್ತಾಗಿ ವಾಪಾಸ್ ಕರೆಸಿಕೊಳ್ಳಲಾಗಿದೆ. ಒಂದಿಬ್ಬರು ಶಾಸಕರು ಮಾತ್ರ ಅಸಮಾಧಾನ ಹೊಂದಿದ್ದು, ಅವರು ಅಡ್ಡಮತದಾನ ಮಾಡುವ ಸಾಧ್ಯತೆ ಕಡಿಮೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಈ ಬಾರಿ ಖಂಡಿತಾ ಶಿಕ್ಷಕರು ನನ್ನ ಕೈ ಹಿಡಿಯುತ್ತಾರೆ: ಬಸವರಾಜ ಗುರಿಕಾರ
ಸಚಿವರಿಗೆ ಜವಾಬ್ದಾರಿ: ಈ ಮಧ್ಯೆ ಶಾಸಕಾಂಗ ಪಕ್ಷದ ಸಭೆ ನಡೆಸಿದ ಬಿಜೆಪಿ ಮೂವರು ಸಚಿವರಿಗೆ ಅಸಿಂಧುವಾಗದ ರೀತಿ ಶಾಸಕರು ಮತ ಚಲಾಯಿಸುವ ಜವಾಬ್ದಾರಿ ನೀಡಿದೆ. ಸಚಿವರಾದ ಸುನೀಲ್ ಕುಮಾರ್, ಬಿ.ಸಿ.ನಾಗೇಶ್ ಹಾಗೂ ಆರ್.ಅಶೋಕ ಅವರಿಗೆ ಈ ಜವಾಬ್ದಾರಿ ನೀಡಲಾಗಿದೆ. ಇಂದು ಸಂಜೆ ಮತ್ತೊಂದು ಸುತ್ತಿನ ಸಭೆ ನಡೆಯಲಿದೆ. ಒಟ್ಟಾರೆಯಾಗಿ ಬಿಜೆಪಿ ಉಳಿದೆರಡು ಪಕ್ಷಕ್ಕಿಂತ ತುಸು ನೆಮ್ಮದಿಯಿಂದ ಇದೆ.
ಕಾಂಗ್ರೆಸ್ ಸಭೆ: ನಾಳೆ ಮತದಾನ ನಡೆಯುವ ಹಿನ್ನೆಲೆಯಲ್ಲಿ ಇಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ.