ಬೆಂಗಳೂರು: ಅಶೋಕ್ ಗಸ್ತಿ ನಿಧನದಿಂದ ತೆರವಾಗಿರುವ ರಾಜ್ಯಸಭಾ ಸ್ಥಾನಕ್ಕೆ ರಾಜ್ಯ ಬಿಜೆಪಿಯು ಸಂಭಾವ್ಯ ಅಭ್ಯರ್ಥಿಗಳನ್ನು ಸೋಮವಾರ ಆಯ್ಕೆ ಮಾಡಿ ಕೇಂದ್ರ ಚುನಾವಣ ಸಮಿತಿಗೆ ರವಾನಿಸುವ ಸಾಧ್ಯತೆಯಿದೆ.
ಇತ್ತೀಚೆಗೆ ಮಂಗಳೂರಿನಲ್ಲಿ ಜರಗಿದ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆದಿತ್ತು. ಈ ಸಂದರ್ಭದಲ್ಲಿ ಸುಮಾ ಗಸ್ತಿ, ಮಾಜಿ ಶಾಸಕ ನಿರ್ಮಲ್ ಕುಮಾರ್ ಸುರಾನ ಹಾಗೂ ನ್ಯಾಯವಾದಿ ಶಂಕರಪ್ಪ ಸಹಿತ ಇತರರ ಹೆಸರು ಪ್ರಸ್ತಾವವಾಗಿತ್ತು.
ಒಂದು ಪ್ರಭಾವಿ ವರ್ಗ ಶಂಕರಪ್ಪ ಅವರಿಗೆ ಅವಕಾಶ ನೀಡುವಂತೆ ಒತ್ತಡ ಹೇರುತ್ತಿದೆ. ಆದರೆ ವರಿಷ್ಠರ ಚಿಂತನೆ ಬೇರೆ ಇದ್ದಂತಿದೆ. ರಾಜ್ಯದಲ್ಲಿ ಈವರೆಗೆ ಸೂಕ್ತ ಸ್ಥಾನಮಾನ ಸಿಗದ ಸಮುದಾಯದ ಸೂಕ್ತ ಅಭ್ಯರ್ಥಿಯನ್ನು ಗುರುತಿಸಬೇಕು. ಆ ಆಯ್ಕೆ ರಾಜಕೀಯವಾಗಿಯೂ ಲಾಭವಾಗುವಂತಿರಬೇಕು ಎಂಬ ಸೂಚನೆಯನ್ನು ವರಿಷ್ಠರು ನೀಡಿದ್ದಾರೆ. ಆ ನಿಟ್ಟಿನಲ್ಲಿ ರಾಜ್ಯ ಬಿಜೆಪಿ ನಾಯಕರು ಸೂಕ್ತ ಅಭ್ಯರ್ಥಿಗಳನ್ನು ಆರಿಸುವ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ಕೈ ಪಾಳಯದಲ್ಲಿ ಮತ್ತೆ ಹಿರಿಯರ ಮುನಿಸು: ಹೈಕಮಾಂಡ್ ವಿರುದ್ಧ ಹರಿಹಾಯ್ದ ಕಪಿಲ್ ಸಿಬಲ್
ನಾಮಪತ್ರ ಸಲ್ಲಿಸಲು ನ. 18 ಕೊನೆಯ ದಿನವಾಗಿದೆ. ಆ ಹಿನ್ನೆಲೆಯಲ್ಲಿ ಸೋಮವಾರ ವೆಬ್ ಎಕ್ಸ್ ಮೂಲಕವೇ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಮುಖ್ಯಮಂತ್ರಿ ಯಡಿಯೂರಪ್ಪ ಸಹಿತ ಹಿರಿಯ ನಾಯಕರು ವೀಡಿಯೋ ಸಂವಾದ ಅಥವಾ ದೂರವಾಣಿ ಸಂಭಾಷಣೆ ಮೂಲಕ ಸಂಭಾವ್ಯ ಅಭ್ಯರ್ಥಿಗಳ ಹೆಸರನ್ನು ವರಿಷ್ಠರಿಗೆ ಸಲ್ಲಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.