ಸುರಪುರ: ನಾರಾಯಣಪುರ ಜಲಾಶಯ ದಿಂದ ಎಡ ಮತ್ತು ಬಲದಂಡೆ ಕಾಲುವೆಗಳಿಗೆ ಏ. 10ರವರೆಗೆ ನೀರು ಹರಿಸಬೇಕು ಎಂದು ಮಾಜಿ ಸಚಿವ ರಾಜುಗೌಡ ಒತ್ತಾಯಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾರಾಯಣಪುರ ಜಲಾಶಯದಲ್ಲಿ 5 ಟಿಎಂಸಿ ಮತ್ತು ಆಲಮಟ್ಟಿ ಜಲಾಶಯದಲ್ಲಿ 15 ಟಿಎಂಸಿ ಸೇರಿ ಒಟ್ಟು 20 ಟಿಎಂಸಿ ಹೆಚ್ಚುವರಿ ನೀರು ಲಭ್ಯವಿದೆ. ಇದನ್ನು ನೀರಾವರಿಯ ಉಪಯೋಗಕ್ಕೆ ಬಳಸಕೊಳ್ಳಬಹುದು.
ಪ್ರಸ್ತುತ ಬೆಳೆಗಳು ಕಾಳು ಕಟ್ಟುವ ಹಂತದಲ್ಲಿವೆ. ಮಾರ್ಚ್ 25ಕ್ಕೆ ನೀರು ಹರಿಸುವುದನ್ನು ನಿಲ್ಲಿಸಿದರೆ ಬೆಳೆಗಳು ಒಣಗಿ ಹೋಗುತ್ತವೆ. ಆದ್ದರಿಂದ ಜಲಾಶಯದಲ್ಲಿ ನೀರು ಇದ್ದು ಬಿಡದಿರುವುದು ಯಾವ ಪುರುಷಾರ್ಥಕ್ಕಾಗಿ ಎಂದು ಪ್ರಶ್ನಿಸಿದ ಅವರು, ನೀರು ಬಂದ್ ಮಾಡುವುದು ರೈತರು ಪ್ರತಿಭಟನೆ ಮಾಡಿದಾಗ ಮತ್ತೆ ನಾಲ್ಕು ದಿನ ನೀರು ಹರಿಸುವುದು ಚುನಾವಣೆ ತಂತ್ರವಾಗಿದೆ ಎಂದು ದೂರಿದರು.
ಈ ಕುರಿತು ಕೆಬಿಜೆಎನ್ನೆಲ್ ಎಂಡಿ ಅವರ ಜೊತೆ ಮಾತನಾಡಿದ್ದೇನೆ. ಮಾ. 24ರಂದು ನೀರಾವರಿ ಸಲಹಾ ಸಮಿತಿ ಸಭೆ ಕರೆಯಲಾಗಿದ್ದು, ಸಭೆಯಲ್ಲಿ ಈ ಕುರಿತು ತೀರ್ಮಾನಿಸುವುದಾಗಿ ಭರವಸೆ ನೀಡಿದ್ದಾರೆ. ಏ. 10ರವರೆಗೆ ಕಾಲುವೆ ನೀರು ಹರಿಸಿದರು ಇನ್ನೂ 6-7 ಟಿಎಂಸಿ ನೀರು ಉಳಿಯುತ್ತದೆ. ಈ ಭಾಗದ ಎಲ್ಲ ಜನಪ್ರತಿನಿಧಿಗಳು ರೈತರ ಸಮಸ್ಯೆಗೆ ಸ್ಪಂದಿಸಬೇಕು. ಏ. 10ರವರೆಗೆ ನೀರು ಹರಿಸುವಂತೆ ಒತ್ತಾಯಿಸಬೇಕು. ಐಸಿಸಿ ಸಭೆ ಕಾಟಾಚಾರದ ಸಭೆಯಾಗಬಾರದು ಎಂದು ನುಡಿದರು. ಜಿಪಂ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ (ತಾತಾ), ಎಪಿಎಂಸಿ ಸದಸ್ಯ ದುರ್ಗಪ್ಪ ಗೋಗಿಕೇರಾ ಇದ್ದರು.
ಕುಡಿವ ನೀರಿಗೆ ಹಾಹಾಕಾರ ನಗರದಲ್ಲಿ ಕುಡಿಯುವ ನೀರಿನ ಸ್ಥಿತಿ ಗಂಭೀರವಾಗಿದೆ. ತಿಂಗಳಾದರೂ ನೀರು ಬರುತ್ತಿಲ್ಲ. ಎಲ್ಲೆಡೆ ನೀರಿನ ಹಾಹಾಕಾರ ಎದ್ದಿದೆ. ನಗರಸಭೆ ಜನತೆಗೆ ನೀರು ಕೊಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಜಿಲ್ಲಾಧಿಕಾರಿ ಮಧ್ಯಪ್ರವೇಶಿಸಿ ಕುಡಿಯುವ ನೀರಿನ ಸಮಸ್ಯೆ ಇತ್ಯರ್ಥಪಡಿಸಬೇಕು.
ನಗರಸಭೆಯಲ್ಲಿ ಸದಸ್ಯರ ಮತ್ತು ಅಧಿಕಾರಿಗಳ ನಡುವೆ ಹೊಂದಾಣಿಕೆ ಸಮಸ್ಯೆ ಇರುವುದರಿಂದ ಸಾರ್ವಜನಿಕರು ಈ ಕಷ್ಟ ಅನುಭವಿಸುವ ದುಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.