Advertisement

ಕಮಲ್‌ ನಡೆಗೆ ರಜನಿ ಬೆಂಬಲ; ರೈತರ ಕಿಡಿ

12:17 PM Jun 06, 2018 | |

ಚೆನ್ನೈ: ಕಾವೇರಿ ವಿವಾದ ಸಂಬಂಧ ಕರ್ನಾಟಕ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ಮಕ್ಕಳ್‌ ನೀಧಿ ಮಯ್ಯಂ ಮುಖ್ಯಸ್ಥ, ನಟ ಕಮಲ್‌ ಹಾಸನ್‌ ನಡೆಸಿದ ಮಾತುಕತೆಯನ್ನು ತಮಿಳು ಸೂಪರ್‌ಸ್ಟಾರ್‌ ರಜನಿಕಾಂತ್‌ ಸಮರ್ಥಿಸಿಕೊಂಡಿದ್ದಾರೆ. ಆದರೆ, ರಜನಿ ನಿಲುವಿಗೆ ತಮಿಳುನಾಡಿನ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಚೆನ್ನೈ ಏರ್‌ಪೋರ್ಟ್‌ನಲ್ಲಿ ಮಂಗಳವಾರ ಮಾತನಾಡಿದ ರಜನಿಕಾಂತ್‌, “ಕಮಲ್‌ ಅವರು ಕರ್ನಾಟಕ ಸಿಎಂ ಜತೆ ಮಾತನಾಡಿದ್ದರಲ್ಲಿ ನನಗೇನೂ ತಪ್ಪು ಕಾಣಿಸುತ್ತಿಲ್ಲ. ಮಾತುಕತೆ ಯಾವತ್ತೂ ಮುಂದುವರಿಯಬೇಕು. ಕಮಲ್‌ ಹಾಗೂ ಕುಮಾರಸ್ವಾಮಿ ಏನೂ ಶತ್ರುಗಳಲ್ಲ. ಈ ಹಿಂದೆಯೂ ದೊಡ್ಡ ದೊಡ್ಡ ವಿವಾದಗಳೆಲ್ಲ ಮಾತುಕತೆಯಿಂದ ಪರಿಹಾರವಾಗಿದ್ದಿದೆ’ ಎಂದು ಹೇಳುವ ಮೂಲಕ ಕಮಲ್‌ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ನ್ಯಾಯಾಂಗ ನಿಂದನೆಗೆ ಸಮ: ಆದರೆ, ರಜನಿ ಹೇಳಿಕೆಗೆ ತಮಿಳುನಾಡಿನ ರೈತ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ತಮಿಳುನಾಡು ಕಾವೇರಿ ಮುಖಜಭೂಮಿ ರೈತರ ಕ್ಷೇಯೋಭಿವೃದ್ಧಿ ಸಂಘದ ಅಧ್ಯಕ್ಷ ಮನ್ನಾರ್‌ಗುಡಿ ರಂಗನಾಥನ್‌, “ದಶಕಗಳ ಕಾಲದ ಕಾನೂನು ಹೋರಾಟದ ಬಳಿಕ ಕಾವೇರಿ ನಿರ್ವಹಣಾ ಪ್ರಾಧಿಕಾರ ರಚನೆಯಾಗಿದೆ. ಹೀಗಿರುವಾಗ ಕರ್ನಾಟಕದೊಂದಿಗೆ ಮಾತುಕತೆ ನಡೆಸುವ ಅವಶ್ಯಕತೆಯೇನಿದೆ?  ಕೋರ್ಟ್‌ ತೀರ್ಪು ನೀಡಿರುವಾಗ ಮಾತುಕತೆಗೆ ಮುಂದಾಗಿರುವುದು ನ್ಯಾಯಾಂಗ ನಿಂದನೆಯಾಗುತ್ತದೆ’ ಎಂದಿದ್ದಾರೆ.

ಕಮಲ್‌ಗೇಕೆ ಬೇಕಿತ್ತು?: ಇಂಥ ಸೂಕ್ಷ್ಮ ವಿಷಯಗಳಲ್ಲಿ ಕಮಲ್‌ ಏಕೆ ಮೂಗು ತೂರಿಸಬೇಕಿತ್ತು ಎಂದು ಮತ್ತೂಂದು ರೈತ ಸಂಘಟನೆ ಅಧ್ಯಕ್ಷ ಅಯ್ಯಕಣ್ಣು ಪ್ರಶ್ನಿಸಿದ್ದಾರೆ. ಕಮಲ್‌ ಅವರು ತಮಿಳುನಾಡಿಗೆ ದ್ರೋಹ ಬಗೆದಿದ್ದಾರೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next