Advertisement

ಶಾಂತಿಯ ಆಟ ಶುರು: ಪಶ್ಚಿಮ ಬಂಗಾಲದಲ್ಲಿ ದೀದಿಗೆ ರಕ್ಷಣ ಸಚಿವರ ತಿರುಗೇಟು

07:13 AM Mar 17, 2021 | Team Udayavani |

ದಾಸ್‌ಪುರ: ಪಶ್ಚಿಮ ಬಂಗಾಲದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಚುನಾವಣೆಯಲ್ಲಿ ಬಿಜೆಪಿ ಜಯ ಸಾಧಿಸಿದರೆ ಕೇವಲ ಶಾಂತಿ ಹಾಗೂ ಅಭಿವೃದ್ಧಿಯ “ಆಟ’ ಶುರುವಾಗುತ್ತದೆ ಎಂದು ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ಘೋಷಿಸಿದ್ದಾರೆ.

Advertisement

ಅತ್ತ ಮಮತಾ ಅವರು ಬಿಜೆಪಿ ವಿರುದ್ಧ ಆರೋಪ ಹೊರಿಸುತ್ತಲೇ ಇತ್ತ ದಾಸ್‌ಪುರದಲ್ಲಿ ಚುನಾವಣ ಪ್ರಚಾರ ನಡೆಸಿದ ರಾಜನಾಥ್‌, 294ರ ಪೈಕಿ 200ಕ್ಕೂ ಹೆಚ್ಚು ಸೀಟುಗಳಲ್ಲಿ ಬಿಜೆಪಿ ಜಯಗಳಿಸುವುದು ಖಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹೊರಗಿನವರು-ಒಳಗಿನವರು ಎಂಬ ಟಿಎಂಸಿಯ ಪ್ರಚಾರ ತಂತ್ರಕ್ಕೆ ತಿರುಗೇಟು ನೀಡಿದ ರಾಜನಾಥ್‌, ಕೇಸರಿ ಪಕ್ಷವು ಜನ ಸಂಘದ ಇಂದಿನ ಅವತಾರವಾಗಿದೆ. ಜನ ಸಂಘವನ್ನು ಸ್ಥಾಪಿಸಿದವರೇ ಇಲ್ಲಿನ ಮಣ್ಣಿನ ಮಗ ಶ್ಯಾಮ್‌ ಪ್ರಸಾದ್‌ ಮುಖರ್ಜಿ ಎಂದಿದ್ದಾರೆ. ಬಂಗಾಲದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಉತ್ತರಪ್ರದೇಶ ಅಥವಾ ಬಿಜೆಪಿ ಆಡಳಿತದಲ್ಲಿರುವ ಇತರ ರಾಜ್ಯಗಳಿಗೆ ಹೋಗಿ ನೋಡಿ, ಅಲ್ಲಿ ಹೇಗೆ ಶಾಂತಿ ನೆಲೆಸಿದೆ ಎಂಬುದು ತಿಳಿಯುತ್ತದೆ ಎಂದೂ ಅವರು ಹೇಳಿದ್ದಾರೆ.

ದೀದಿಯಲ್ಲಿ ಬದಲಾವಣೆಗೆ ಬಿಜೆಪಿ ಕಾರಣ: ಕೇಂದ್ರದಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ದೇಶದ ಜನರ ಮನಸ್ಥಿತಿಯೂ ಬದಲಾಗಿದೆ. ಇದೇ ಬದಲಾವಣೆಯಿಂದಾಗಿ ಮಮತಾ ಬ್ಯಾನರ್ಜಿ ಅವರು ಈಗ ದೇವಸ್ಥಾನಗಳಿಗೆ ಭೇಟಿ ನೀಡಲು, ಚಂಡೀ ಪಾಠ್ ಪಠಿಸಲು ಕಾರಣವಾಗಿದೆ ಎಂದು ಬಲರಾಂಪುರದಲ್ಲಿ ಪ್ರಚಾರ ನಡೆಸಿದ ಉ.ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ವ್ಯಂಗ್ಯವಾಡಿದ್ದಾರೆ.

ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ: ಪ.ಬಂಗಾಲದ ಬಿಜೆಪಿಯಲ್ಲಿ ವಲಸಿಗರು-ಮೂಲ ನಿವಾಸಿಗಳ ಜಗಳ ಆರಂಭವಾಗಿದೆ. ಹೊರಗಿನಿಂದ ಬಂದವರಿಗೇ ಟಿಕೆಟ್‌ ನೀಡಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಸತತ 2ನೇ ದಿನವಾದ ಮಂಗಳವಾರವೂ ತೀವ್ರ ಪ್ರತಿಭಟನೆ ನಡೆಸಿದ್ದಾರೆ.

Advertisement

ವಾಕಿಂಗ್‌, ಜಿಮ್‌, ಮೀನು ಮಾರ್ಕೆಟ್‌: ತಮಿಳುನಾಡಿನ ಕೊಯಮತ್ತೂರು ದಕ್ಷಿಣ ಕ್ಷೇತ್ರದಿಂದ ಕಣಕ್ಕಿಳಿದಿರುವ ಎಂಎನ್‌ಎಂ ಮುಖ್ಯಸ್ಥ ಕಮಲ್‌ ಹಾಸನ್‌ ಅವರು ಪ್ರಚಾರ ಕಣಕ್ಕೆ ಧುಮುಕಿದ್ದಾರೆ. ಮಂಗಳವಾರ ಬೆಳಗ್ಗೆ ವಾಯುವಿಹಾರಕ್ಕೆ ತೆರಳಿದ ಅವರು, ರೇಸ್‌ ಕೋರ್ಸ್‌ ರಸ್ತೆಯಲ್ಲಿ ವಾಕಿಂಗ್‌ ಮಾಡುತ್ತಿದ್ದವರೊಂದಿಗೆ ಕೆಲವು ಕಾಲ ಮಾತುಕತೆ ನಡೆಸಿದ್ದಾರೆ. ಅಲ್ಲಿಂದ ರಾಮನಾಥಪುರಂನ ಜಿಮ್ನಾಶಿಯಂ, ರಸ್ತೆ ಬದಿಯ ಟೀ ಅಂಗಡಿ, ಉಕ್ಕಡಂನ ಮೀನು ಮಾರುಕಟ್ಟೆಗೂ ತೆರಳಿ ಮತದಾರರ ಮನದಾಳ ಅರಿಯುವ ಪ್ರಯತ್ನ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next