ನವದೆಹಲಿ: “ಉಗ್ರವಾದವು ಅಂತಾರಾಷ್ಟ್ರೀಯ ಶಾಂತಿ ಹಾಗೂ ಸುರಕ್ಷತೆಗೆ ಮಾರಕವಾಗಿದ್ದು, ಆ ಕುಕೃತ್ಯಕ್ಕೆ ಯಾವುದೇ ರೀತಿಯ ನೆರವು ನೀಡಿದರೂ ಅದು ಮಾನವತೆ ವಿರುದ್ಧ ಎಸಗುವ ಮಹಾಪರಾಧ” ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ತಜಕಿಸ್ತಾನದ ರಾಜಧಾನಿ ದುಶಾಂಬೆಯಲ್ಲಿ ಆಯೋಜಿಸಲಾಗಿರುವ ಶಾಂಘೈ ಸಹಕಾರ ಸಂಸ್ಥೆ (ಎಸ್‌ಸಿಒ) ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು, “”ಉಗ್ರವಾದವನ್ನು ಬೆಂಬಲಿಸುವ ಯಾರೇ ಆಗಿದ್ದರೂ, ಅದು ಮಾನವತೆಗೆ ಅವರು ಮಾಡಿದ ದ್ರೋಹವೆಂದೇ ಪರಿಗಣಿಸಲಾಗುತ್ತದೆ” ಎನ್ನುವ ಮೂಲಕ ಪಾಕಿಸ್ತಾನದ ಹೆಸರೆತ್ತದೆ ಟೀಕಿಸಿದರು.
“ಉಗ್ರವಾದವನ್ನು ಹತ್ತಿಕ್ಕಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಭಾರತ ಕೈಗೊಂಡಿದೆ ಎಂದ ಅವರು, ಈ ಭೂಮಿಯಲ್ಲಿ ಶಾಂತಿ- ಸಮೃದ್ಧಿ ಹಾಗೂ ಭಯೋತ್ಪಾದನೆ ಎಂದಿಗೂ ಏಕಕಾಲದಲ್ಲಿ ಒಟ್ಟಿಗಿರಲು ಸಾಧ್ಯವಿಲ್ಲ’ ಎಂದರು.
ಇದನ್ನೂ ಓದಿ :ಮುಂಬರುವ ವಿಧಾನಸಭೆ ಚುನಾವಣೆಗೆ ಒಂದು ವರ್ಷ ಮುನ್ನವೇ ಅಭ್ಯರ್ಥಿಯ ಘೋಷಣೆ: ಸತೀಶ್ ಜಾರಕಿಹೊಳಿ
“”ಭಯೋತ್ಪಾದನೆ ನಿರ್ಮೂಲನೆ ವಿಚಾರದಲ್ಲಿ ಜಗತ್ತಿನ ದೊಡ್ಡ ರಾಷ್ಟ್ರಗಳು ಅನುಸರಿಸಿರುವ ಕ್ರಮಗಳು ಇತರರಿಗೆ ಮಾದರಿಯಾಗಲಿ” ಎಂದ ಅವರು, “”ಉಗ್ರವಾದ ನಿಗ್ರಹಿಸುವ ನಿಟ್ಟಿನಲ್ಲಿ ಎಸ್‌ಸಿಒ ರೂಪಿಸಿರುವ ಕಾರ್ಯಸೂಚಿಯನ್ನು ಚಾಚೂ ತಪ್ಪದೆ ಪಾಲಿಸುವಲ್ಲಿ ಭಾರತ ಬದ್ಧವಾಗಿದೆ” ಎಂದು ಸಿಂಗ್ ಆಶ್ವಾಸನೆ ನೀಡಿದರು.