Advertisement

ಚೀನಾ ರಕ್ಷಣಾ ಸಚಿವರ ಕೈಲುಕಲಿಲ್ಲ ರಾಜನಾಥ್‌

08:15 PM Apr 28, 2023 | Team Udayavani |

ನವದೆಹಲಿ: ಶಾಂಘೈ ಸಹಕಾರ ಸಂಘ(ಎಸ್‌ಸಿಒ)ದ ರಕ್ಷಣಾ ಸಚಿವರ ಸಮಾವೇಶವು ಶುಕ್ರವಾರ ನವದೆಹಲಿಯಲ್ಲಿ ನಡೆದಿದ್ದು, ಗಡಿಯಲ್ಲಿ ಪದೇಪದೆ ಕಿರಿಕ್‌ ಮಾಡುತ್ತಿರುವ ಚೀನಾ ಮತ್ತು ಪಾಕಿಸ್ತಾನಕ್ಕೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಖಡಕ್‌ ಸಂದೇಶ ರವಾನಿಸಿದ್ದಾರೆ.

Advertisement

ಮತ್ತೂಂದು ವಿಶೇಷವೆಂದರೆ, ಚೀನಾ ರಕ್ಷಣಾ ಸಚಿವ ಜನರಲ್‌ ಲಿ ಶಾಂಗ್ಫು ಅವರೊಂದಿಗೆ 45 ನಿಮಿಷಗಳ ಕಾಲ ಮಾತುಕತೆ ನಡೆಸಿದರೂ, ಅವರೊಂದಿಗೆ ರಾಜನಾಥ್‌ ಹಸ್ತಲಾಘವ ಮಾಡಲಿಲ್ಲ. ತಜಕಿಸ್ತಾನ, ಇರಾನ್‌ ಮತ್ತು ಕಜಕ್‌ ರಕ್ಷಣಾ ಸಚಿವರಿಗೆ ಹಸ್ತಲಾಘವ ಮಾಡಿ ಕುಶಲೋಪರಿ ವಿಚಾರಿಸಿದ ರಾಜನಾಥ್‌, ಚೀನಾ ರಕ್ಷಣಾ ಸಚಿವರೊಂದಿಗೆ ಮಾತ್ರ ಈ ಆತ್ಮೀಯತೆ ಪ್ರದರ್ಶಿಸದೇ ಅಚ್ಚರಿ ಮೂಡಿಸಿದರು.

ಒಂದುಕಡೆ ಗಡಿ ವಿಚಾರವಾಗಿ ಚೀನಾಗೆ, ಭಯೋತ್ಪಾದನೆ ವಿಚಾರವಾಗಿ ಪಾಕಿಸ್ತಾನಕ್ಕೆ ರಾಜನಾಥ್‌ ಪಾಠ ಮಾಡಿದರು. ಭಾರತ ಮತ್ತು ಚೀನಾದ ಸಂಬಂಧವೃದ್ಧಿಯು ಗಡಿಪ್ರದೇಶದಲ್ಲಿನ ಶಾಂತಿ-ನೆಮ್ಮದಿಯನ್ನು ಅವಲಂಬಿಸಿದೆ ಎಂದ ಸಿಂಗ್‌, ಎಲ್‌ಎಸಿಯಲ್ಲಿನ ಎಲ್ಲ ವಿವಾದಗಳಿಗೂ ದ್ವಿಪಕ್ಷೀಯ ಒಪ್ಪಂದಗಳು ಹಾಗೂ ಬದ್ಧತೆಗಳ ಅನುಸಾರವೇ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು. ಅಲ್ಲದೇ, ಒಪ್ಪಂದಗಳ ಉಲ್ಲಂಘನೆಯು ದ್ವಿಪಕ್ಷೀಯ ಬಾಂಧವ್ಯ ಮತ್ತು ಗಡಿಯಲ್ಲಿನ ಸೇನೆ ವಾಪಸಾತಿಯ ಅಡಿಪಾಯವನ್ನೇ ಅಲುಗಾಡಿಸಿದೆ ಎಂದೂ ಹೇಳಿದರು.

ಇದಾದ ಬೆನ್ನಲ್ಲೇ ಮಾತನಾಡಿದ ಚೀನಾ ರಕ್ಷಣಾ ಸಚಿವ ಜ. ಲಿ ಶಾಂಗ್ಫು, “ಗಡಿಯಲ್ಲಿನ ಪರಿಸ್ಥಿತಿಯು ಸದ್ಯಕ್ಕೆ ಸ್ಥಿರವಾಗಿದ್ದು, ಉಭಯ ದೇಶಗಳು ಸೂಕ್ತ ನಿರ್ಧಾರ ಕೈಗೊಂಡು, ಅದನ್ನು ಸಹಜ ಸ್ಥಿತಿಗೆ ಮರಳಿಸಬೇಕು” ಎಂದಿದ್ದಾರೆ. ಭಾರತ ಮತ್ತು ಚೀನಾ ಒಂದಾಗಿ ಎರಡೂ ದೇಶಗಳ ಸೇನೆಯ ನಡುವೆ ಪರಸ್ಪರ ವಿಶ್ವಾಸ ಬಲಗೊಳ್ಳುವಂತೆ ಮಾಡಬೇಕು. ದ್ವಿಪಕ್ಷೀಯ ಸಂಬಂಧವೃದ್ಧಿಗೆ ಸೂಕ್ತ ಕೊಡುಗೆಗಳನ್ನು ನೀಡಬೇಕು ಎಂದೂ ಅವರು ಸಲಹೆ ನೀಡಿದರು.

ಈ ನಡುವೆ, ಸಚಿವ ರಾಜನಾಥ್‌ ಅವರು ರಷ್ಯಾ ರಕ್ಷಣಾ ಸಚಿವ ಜನರಲ್‌ ಸೆರ್ಗೆ ಶೊಯಿಗು ಹಾಗೂ ಉಜ್ಬೆಕ್‌ ರಕ್ಷಣಾ ಸಚಿವರೊಂದಿಗೂ ಪ್ರತ್ಯೇಕ ಮಾತುಕತೆ ನಡೆಸಿದ್ದು ಕಂಡುಬಂತು.

Advertisement

ಭಯೋತ್ಪಾದನೆಯನ್ನು ಬೇರುಸಮೇತ ಕಿತ್ತು ಹಾಕೋಣ

ಎಲ್ಲ ರೀತಿಯ ಭಯೋತ್ಪಾದನೆಗಳನ್ನೂ ನಿರ್ಮೂಲನೆ ಮಾಡಲು ಮತ್ತು ಉಗ್ರರಿಗೆ ಬೆಂಬಲ ನೀಡುವವರನ್ನೇ ಉಗ್ರಕೃತ್ಯಗಳಿಗೆ ಹೊಣೆಗಾರರನ್ನಾಗಿಸಲು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಶಾಂಘೈ ಸಹಕಾರ ಸಂಘದ ಸದಸ್ಯ ರಾಷ್ಟ್ರಗಳಿಗೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಕರೆ ನೀಡಿದರು. ಎಸ್‌ಸಿಒ ದೇಶಗಳ ರಕ್ಷಣಾ ಸಚಿವರ ಸಮಾವೇಶದಲ್ಲಿ ಮಾತನಾಡಿದ ಅವರು, ಯಾವುದೇ ರೀತಿಯ ಭಯೋತ್ಪಾದನಾ ಕೃತ್ಯ ಮತ್ತು ಅದಕ್ಕೆ ನೀಡುವ ಬೆಂಬಲವು ಇಡೀ ಮಾನವತೆಯ ವಿರುದ್ಧ ನಡೆಸುವ ಅಪರಾಧವಾಗಿದೆ. ಒಂದು ದೇಶವು ಉಗ್ರರಿಗೆ ಆಶ್ರಯ ನೀಡುತ್ತಿದ್ದರೆ, ಅದು ಕೇವಲ ಇತರರಿಗೆ ಮಾತ್ರವಲ್ಲ, ಆ ದೇಶಕ್ಕೂ ಅಪಾಯವನ್ನು ಉಂಟುಮಾಡಲಿದೆ. ಯುವಕರನ್ನು ತೀವ್ರಗಾಮಿಗಳಾಗಿ ರೂಪಿಸುವುದರಿಂದ ಭದ್ರತೆಗಷ್ಟೇ ಸಮಸ್ಯೆಯಲ್ಲ, ಬದಲಿಗೆ ಸಮಾಜದ ಸಾಮಾಜಿಕ-ಆರ್ಥಿಕ ಪ್ರಗತಿಗೂ ಅದು ಅಡ್ಡಿ ಉಂಟುಮಾಡಲಿದೆ ಎಂದೂ ಹೇಳಿದರು. ಪಾಕಿಸ್ತಾನ ಹೊರತುಪಡಿಸಿ ಉಳಿದ ಎಲ್ಲ ಸದಸ್ಯ ರಾಷ್ಟ್ರಗಳ ರಕ್ಷಣಾ ಸಚಿವರು ಈ ಸಮಾವೇಶದಲ್ಲಿ ಖುದ್ದು ಭಾಗಿಯಾಗಿದ್ದರು. ಪಾಕ್‌ ರಕ್ಷಣಾ ಸಚಿವರು ವರ್ಚುವಲ್‌ ಆಗಿ ಪಾಲ್ಗೊಂಡರು ಎಂದು ಮೂಲಗಳು ತಿಳಿಸಿವೆ.

ಎಸ್‌ಸಿಒ ರಾಷ್ಟ್ರಗಳೊಂದಿಗೆ ಸಂಪರ್ಕ ಸಾಧಿಸುವುದೇ ಭಾರತದ ಆದ್ಯತೆಯಾಗಿದೆ. ದೇಶಗಳ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗಳು° ಗೌರವಿಸಿಕೊಂಡು, ಸುಸ್ಥಿರ ಅಭಿವೃದ್ಧಿ ಸಾಧಿಸುವತ್ತ ಎಲ್ಲರೂ ಗಮನಹರಿಸಬೇಕು.

– ನಿತಿನ್‌ ಗಡ್ಕರಿ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ.

Advertisement

Udayavani is now on Telegram. Click here to join our channel and stay updated with the latest news.

Next