Advertisement
ನ್ಯಾಶನಲ್ ಬ್ಯಾಂಕ್ ಫಾರ್ ಫೈನಾನ್ಸಿಂಗ್ ಇನ್‌ಫ್ರಾಸ್ಟಕ್ಚರ್ ಆ್ಯಂಡ್ ಡೆವಲಪ್‌ಮೆಂಟ್ (ನಾಬ್‌ಫಿಡ್) ಕೇಂದ್ರ ಸರಕಾರ ನೂತನವಾಗಿ ರಚಿಸಿರುವ ಸಂಸ್ಥೆ. ಬೃಹತ್ ಮೂಲ ಸೌಕರ್ಯ ಯೋಜನೆಗಳಿಗೆ ಬೆನ್ನಲುಬಾಗಿ ಇರಲೆಂಬಂತೆ ಈ ಸಂಸ್ಥೆಯನ್ನು ಸ್ಥಾಪಿಸಲಾಗಿದೆ.
ಗತಿಶಕ್ತಿ ಯೋಜನೆಯಡಿ ಪ್ರಧಾನಿಯವರು 110 ಲಕ್ಷ ಕೋಟಿ ರೂ.ನಷ್ಟು ದೊಡ್ಡ ಬಂಡವಾಳವನ್ನು ಮೂಲಸೌಕರ್ಯಕ್ಕಾಗಿ ಹೂಡಿಕೆ ಮಾಡುವ ಉದ್ದೇಶ ಹೊಂದಿದ್ದಾರೆ. ಇದು 5 ಟ್ರಿಲಿಯನ್ ಜಿಡಿಪಿ ಗುರಿ ತಲುಪುವ ಗುರಿಗೂ ಪೂರಕ. ಇವೆಲ್ಲ ಈಡೇರಲು ಹೆಚ್ಚಿನ ಬಂಡವಾಳ ಹರಿದು ಬರಲೇಬೇಕು. ಈಗಿನ ವ್ಯವಸ್ಥೆಯ ಸಾಮರ್ಥಯ ಅಗತ್ಯಕ್ಕೆ ತಕ್ಕಂತೆ ಹೆಚ್ಚಿಸಬೇಕಿದೆ. ಈ ಹಿನ್ನೆಲೆಯಲ್ಲಿ ನಾಬ್‌ಫಿಡ್ ನಂಥ ಮಹತ್ವದ ಬ್ಯಾಂಕ್ ಸ್ಥಾಪನೆಯಾಗಿದೆ. ಅಷ್ಟೇ ಅಲ್ಲ ಸರಕಾರ 25 ಸಾವಿರ ಕೋಟಿ ರೂ. ಬಂಡವಾಳ ನಿಧಿಯನ್ನೂ ನೀಡಿದೆ.
Related Articles
ಈಗಾಗಲೇ ಚೇರ್ಮನ್ ಆಗಿ ಬ್ಯಾಂಕಿಂಗ್ ದಿಗ್ಗಜ ಕೆ.ವಿ. ಕಾಮತ್ ಸಂಸ್ಥೆಗೆ ಒಂದು ರೂಪುರೇಖೆ ಹಾಕಿದ್ದಾರೆ. ಬ್ರಿಕ್ಸ್ ಬ್ಯಾಂಕ್ ಅಧ್ಯಕ್ಷರಾಗಿ ಸಾಕಷ್ಟು ಅನುಭವವುಳ್ಳವರು. ನಾವು ಅಧಿಕಾರಿ ವರ್ಗದವರನ್ನು ನೇಮಿಸಬೇಕು. ಸಂಸ್ಥೆಯ ನಿರ್ವಹಣ ವೆಚ್ಚವನ್ನು ಕನಿಷ್ಠವಾಗಿರಿಸಿಕೊಂಡು ನಮ್ಮ ಗುರಿ ಸಾಧಿಸಬೇಕಿದೆ. ಬೇರೆ ಖಾಸಗಿ, ಸಾರ್ವಜನಿಕ ರಂಗದ ಬ್ಯಾಂಕ್ ಅಧಿಕಾರಿಗಳನ್ನು ನಿಯೋಜನೆ ಮೇರೆಗೆ ನೇಮಿಸಿಕೊಳ್ಳಲಾಗುವುದು. ಒಟ್ಟಾರೆಯಾಗಿ ಎರಡು ತಿಂಗಳಲ್ಲಿ ಇನ್ನು ಎರಡು ತಿಂಗಳಲ್ಲಿ ನಾಬ್‌ಫಿಡ್ ಪೂರ್ಣವಾಗಿ ಚಟುವಟಿಕೆ ಆರಂಭಿಸಲಿದೆ.
Advertisement
ಇದನ್ನೂ ಓದಿ : ಸುಳ್ಯದಲ್ಲಿ ಭಾರೀ ಮಳೆ: ರಸ್ತೆ, ತೋಟ ಜಲಾವೃತ, ಜನಜೀವನ ಅಸ್ತವ್ಯಸ್ತ
– ಹೊಸ ಸಂಸ್ಥೆಯ ಕಾರ್ಯವೈಖರಿ ಹೇಗೆ?ಪ್ರಸ್ತುತ ದೇಶದಲ್ಲಿ ಮೂಲಸೌಕರ್ಯದ ಮೇಲೆ ಹೂಡಿಕೆ ಮಾಡುವವರಿಗೆ ದೀರ್ಘಾವಧಿ ಸಾಲ ಸೂಕ್ತವಾಗಿ ಸಿಗುತ್ತಿಲ್ಲ, ವಾಣಿಜ್ಯ ಬ್ಯಾಂಕ್‌ಗಳು ಗರಿಷ್ಠ 15 ವರ್ಷಕ್ಕಷ್ಟೇ ಹೆಚ್ಚು ಬಡ್ಡಿದರದಲ್ಲಿ ಸಾಲ ನೀಡುತ್ತಿರುವುದು ಹಿನ್ನಡೆಯಾಗಿದೆ. ಹಾಗಾಗಿ 25-30 ವರ್ಷ ಅವಧಿಗೆ ತೀರಾ ಹೆಚ್ಚೆನಿಸದ ಬಡ್ಡಿದರದಲ್ಲಿ ಸಾಲ ನೀಡುವುದು, ಇದರೊಂದಿಗೆ ಇನ್‌ಫ್ರಾಸ್ಟ್ರಕ್ಚರ್ ಕ್ಷೇತ್ರದಲ್ಲಿ ಹೂಡಿಕೆಗೆ ಬೇಕಾದ ವಾತಾವರಣವನ್ನು ಸೃಷ್ಟಿಸುವುದು ನಮ್ಮ ಉದ್ದೇಶ. ಕೇವಲ ಸಾಲವಷ್ಟೇ ಅಲ್ಲ, ಈ ಕ್ಷೇತ್ರಕ್ಕೆ ಸಂಬಂಧಿಸಿ ಬಾಂಡ್‌ಗಳನ್ನು ಬಿಡುಗಡೆ ಮಾಡುವುದು ಹಾಗೂ ಅವುಗಳ ಮಾರಾಟಕ್ಕೆ
ಬೇಕಾದ ಮಾರುಕಟ್ಟೆ ಸೃಷ್ಟಿಸುವುದೂ ಸೇರಿದಂತೆ ಹಲವಾರು ಯೋಜನೆಗಳಿವೆ. – ಮೂಲಸೌಕರ್ಯದಲ್ಲಿ ಆದ್ಯತೆಯ ಕ್ಷೇತ್ರಗಳನ್ನು ಗುರುತಿಸಿದ್ದೀರಾ?
ಮುಖ್ಯವಾಗಿ ಸರಕಾರದ ಪಟ್ಟಿಯಲ್ಲಿ ಏಳೆಂಟು ಕ್ಷೇತ್ರಗಳಿವೆ. ಹೆದ್ದಾರಿ, ವಿದ್ಯುತ್ ಮಾರ್ಗ, ಗ್ಯಾಸ್ ಪೈಪ್‌ಲೈನ್, ರೈಲ್ವೇ, ಒಳನಾಡು ಜಲಮಾರ್ಗ ನಿರ್ಮಾಣ. ವಿಶೇಷವಾಗಿ ಒಳನಾಡು ಜಲಮಾರ್ಗಕ್ಕೆ ಹೆಚ್ಚು ಅವಕಾಶಗಳಿವೆ. ಇವೆಲ್ಲಗಳನ್ನೂ ಗುರಿಯಾಗಿಸಿಕೊಂಡು ಕಾರ್ಯ ಯೋಜನೆ ರೂಪಿಸಲಾಗುವುದು. – ಸದ್ಯಕ್ಕೆ ನಿಮ್ಮ ಮುಂದೆ ಇರುವ ಸವಾಲು?
ಗ್ರೀನ್‌ಫೀಲ್ಡ್ ಯೋಜನೆಗಳು (ಹೊಸ ಯೋಜನೆ) ಸುಲಭದಲ್ಲಿ ಬಂಡವಾಳ ಆಕರ್ಷಿಸುವುದಿಲ್ಲ, ಯಾಕೆಂದರೆ ಅವುಗಳಿಗೆ ಭೂಸ್ವಾಧೀನ, ಪರಿಸರ ಕ್ಲಿಯರೆನ್ಸ್ ಇತ್ಯಾದಿ ಅಡ್ಡಿಗಳಿರುತ್ತವೆ. ಈಗೀಗ ಇದು ಸುಧಾರಣೆಯಾಗುತ್ತಿದೆ. ಇದನ್ನು ವಿದೇಶೀ ಹೂಡಿಕೆದಾರರಿಗೆ ಮನದಟ್ಟು ಮಾಡಿ ಭಾರತದತ್ತ ಬಂಡವಾಳ ಹೂಡಿಕೆ ಮಾಡುವಂತೆ ಮಾಡುವುದೇ ಸದ್ಯದ ಸವಾಲು. – ಕೆ.ವಿ. ಕಾಮತ್, ನೀವು ಇಬ್ಬರೂ ಕರಾವಳಿಯವರು… ಅವರೊಂದಿಗೆ ಅನುಭವ ಹೇಗಿದೆ ?
ಕೆ.ವಿ. ಕಾಮತ್‌ರೊಂದಿಗೆ ಬಹಳಷ್ಟು ಸಮಾಲೋಚನೆ ಆಗಿದೆ. ಸಂಸ್ಥೆಗೊಂದು ಪ್ರಭಾವಿ ಮುಖ ಬೇಕು, ಕಾಮತ್ ಅವರಿದ್ದರೆ ನಾವು ಯಾರು ಎಂದು ಪರಿಚಯ ಮಾಡಬೇಕಾದ ಅಗತ್ಯವೇ ಇಲ್ಲ. ಅವರ ಮಾರ್ಗದರ್ಶನ ಸಾಕಷ್ಟು ಸಿಗಲಿದೆ. – ನಾಬ್‌ಫಿಡ್‌ಗೆ ನಿಮ್ಮ ಆಯ್ಕೆಯಾದಾಗ ಹೇಗೆನಿಸಿತು?
– ಬಹಳ ಸಂತೋಷ ಅಯಿತು. 5 ವರ್ಷ ಯೂನಿಯನ್ ಬ್ಯಾಂಕ್ ಎಂಡಿ ಆಗಿದ್ದೆ, ಎನ್‌ಪಿಎ ಜಾಸ್ತಿ ಇತ್ತು, ಬಳಿಕ ಕಾರ್ಪೊರೇಶನ್ ಬ್ಯಾಂಕ್ ಯುಬಿಐ ಜತೆ ವಿಲೀನ ಆಯಿತು. ಕೊನೆಯಲ್ಲಿ ಬ್ಯಾಂಕ್ ದೃಢವಾದ ಸ್ಥಿತಿಗೆ ಏರಿತು. ಇದೊಂದು ಹೆಮ್ಮೆ ಇದೆ. ಅದಕ್ಕಾಗಿ ನನಗೆ ಈ ಹೊಸ ಹುದ್ದೆಯನ್ನು ಬಹುಮಾನದ ರೂಪದಲ್ಲಿ ಕೊಟ್ಟಿದ್ದಾರೆ ಎಂದು ಅನಿಸುತ್ತದೆ. – ವೇಣುವಿನೋದ್ ಕೆ.ಎಸ್.