ಹೊಸದಿಲ್ಲಿ : ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರಿಗೆ ಕೊಡಲಾಗಿದ್ದ ಭಾರತ ರತ್ನ ಪ್ರಶಸ್ತಿಯನ್ನು 1984ರ ಸಿಕ್ಖ್ ವಿರೋಧಿ ಗಲಭೆಯ ಕಾರಣಕ್ಕೆ ಹಿಂಪಡೆಯುವ ಠರಾವನ್ನು ದಿಲ್ಲಿ ವಿಧಾನಸಭೆಯಲ್ಲಿ ಕೈಗೊಂಡಿರುವ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಮತ್ತು ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸಿದೆ.
“ನಮ್ಮ ಕಟ್ಟಾ ರಾಜಕೀಯ ವಿರೋಧಿ ಪಕ್ಷ ಬಿಜೆಪಿ ಕೂಡ ಇಂತಹ ಆಗ್ರಹವನ್ನು ಈ ತನಕ ಮಾಡಿಲ್ಲ’ ಎಂದು ಕಾಂಗ್ರೆಸ್ ಹೇಳಿದೆ.
“ರಾಜೀವ್ ಗಾಂಧಿ ಅವರು ತಮ್ಮ ಬದುಕನ್ನೇ ದೇಶಕ್ಕಾಗಿ ತ್ಯಾಗಮಾಡಿದ್ದಾರೆ. ಭಾರತೀಯ ಜನತಾ ಪಕ್ಷ ಕೂಡ ರಾಜೀವ್ ಗಾಂಧಿಗೆ ನೀಡಲಾಗಿದ್ದ ಭಾರತ ರತ್ನ ಪ್ರಶಸ್ತಿಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿಲ್ಲ’ ಎಂದು ಕಾಂಗ್ರೆಸ್ ನಾಯಕ ಅಜಯ್ ಮಾಕನ್ ಹೇಳಿದರು.
ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ದಿವಂಗತ ರಾಜೀವ್ ಗಾಂಧಿ ಕುರಿತು ದಿಲ್ಲಿ ವಿಧಾನಸಭೆಯಲ್ಲಿ ಕೈಗೊಳ್ಳಲಾದ ಈ ಠರಾವಿಗಾಗಿ ಕ್ಷಮೆಯಾಚಿಸಬೇಕು ಮತ್ತು ಇದನ್ನು ಅಸೆಂಬ್ಲಿಯ ನಡವಳಿಕೆಯ ದಾಖಲೆಯಿಂದ ಕಿತ್ತು ಹಾಕಬೇಕು’ ಎಂದು ಮಾಕನ್ ಒತ್ತಾಯಿಸಿದರು.
ಇಂತಹ ಒಂದು ದುರದೃಷ್ಟಕರ ಠರಾವನ್ನು ಕೈಗೊಂಡಿರುವ ಆಪ್, ಬಿಜೆಪಿಯ ಬಿ ಟೀಮ್ ಆಗಿದೆ. ಆಪ್ ನ ನೈಜ ಬಣ್ಣ ಈಗ ಬಯಲಾಗಿದೆ. ಆಮ್ ಆದ್ಮಿ ಪಕ್ಷ ಗೋವಾ, ಪಂಜಾಬ್, ಮಧ್ಯ ಪ್ರದೇಶ, ರಾಜಸ್ಥಾನ, ಗುಜರಾತ್ ಮತ್ತು ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಮತಗಳನ್ನು ಒಡೆಯಲು ಮತ್ತು ಆ ಮೂಲಕ ಬಿಜೆಪಿಗೆ ಅನುಕೂಲಿಸಲು ಅಲ್ಲೆಲ್ಲ ತನ್ನ ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಿಸಿತ್ತು ಎಂದು ಮಾಕನ್ ಆರೋಪಿಸಿದರು.