Advertisement

ಆನ್‌ಲೈನ್‌ನಲ್ಲೇ ಸಿಗಲಿದೆ ಆರೋಗ್ಯ ವಿವಿ ಅಂಕಪಟ್ಟಿ

08:50 AM Sep 19, 2017 | Team Udayavani |

ಬೆಂಗಳೂರು: ಮುದ್ರಿತ ಅಂಕಪಟ್ಟಿಗಾಗಿ ವಿದ್ಯಾರ್ಥಿಗಳು ಇನ್ಮುಂದೆ ವಿಶ್ವವಿದ್ಯಾಲಯಕ್ಕೆ ಅಲೆದಾಡಬೇಕಾಗಿಲ್ಲ. ತಾವಿದ್ದಲ್ಲಿಂದಲೇ ಎಷ್ಟು ಪ್ರತಿ ಬೇಕಾದರೂ ಡೌನ್‌ಲೋಡ್‌ ಮಾಡಿ ಕೊಳ್ಳಬಹುದು! ವಿದ್ಯಾರ್ಥಿಗಳಿಗೆ ಮುದ್ರಿತ ಅಂಕಪಟ್ಟಿ ನೀಡುವ ಬದಲಿಗೆ ಆಧಾರ್‌ ಕಾರ್ಡ್‌ ಮಾದರಿಯಲ್ಲಿ ಅಂಕಪಟ್ಟಿಯ ಪ್ರತಿಯನ್ನು ಆನ್‌ಲೈನ್‌ ಮೂಲಕ ಫ‌ಲಿತಾಂಶದ ಸಂದರ್ಭದಲ್ಲಿಯೇ ಡೌನ್‌ಲೋಡ್‌ ಮಾಡಿಕೊಳ್ಳಬಹುದಾದ ವ್ಯವಸ್ಥೆ ಜಾರಿಗೆ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ (ಆರ್‌ಜಿಯುಎಚ್‌ಎಸ್‌) ಮುಂದಾಗಿದೆ.

Advertisement

ನಕಲಿ ಅಂಕಪಟ್ಟಿಗೆ ಕಡಿವಾಣ ಹಾಕುವುದು ಇದರ ಹಿಂದಿನ ಉದ್ದೇಶಗಳಲ್ಲೊಂದಾಗಿದೆ. ನಕಲಿ ಅಂಕಪಟ್ಟಿಯ ಜಾಲ ದೇಶವ್ಯಾಪಿ ಹರಡಿದ್ದು,  ಇದಕ್ಕೆ ಕಡಿವಾಣ ಹಾಕಲು ಪೂರ್ಣ ಪ್ರಮಾಣದಲ್ಲಿ ಸಾಧ್ಯವಾಗಿಲ್ಲ. ಹೀಗಾಗಿ ಆರ್‌ಜಿಯುಎಚ್‌ಎಸ್‌ ಬಂದಿದೆ. ಹಾಗೆಯೇ ಅಂಕಪಟ್ಟಿಯನ್ನು ಕಳೆದುಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಿದ್ದು ವಿವಿಗೆ ಅಲೆಯುತ್ತಾರೆ. ದುಬಾರಿ ಶುಲ್ಕ ನೀಡಿದರೂ, ಡೂಪ್ಲಿಕೇಟ್‌ ಎಂದು ಸೀಲ್‌ ಹಾಕಿರುತ್ತಾರೆ.

ಪ್ರತಿವರ್ಷ ಲಕ್ಷಾಂತರ ಅಂಕಪಟ್ಟಿ ಮುದ್ರಣಕ್ಕಾಗಿ ವಿಶ್ವವಿದ್ಯಾಲಯಗಳು ಕೋಟ್ಯಂತರ ರೂಪಾಯಿ ವ್ಯಯಿಸುತ್ತವೆ. ಇಷ್ಟಾದರೂ ಸೂಕ್ತ ಸಮಯದಲ್ಲಿ ಅಂಕಪಟ್ಟಿಯನ್ನು ವಿದ್ಯಾರ್ಥಿಗಳಿಗೆ ಒದಗಿಸಲು ಸಾಧ್ಯವಾಗುತ್ತಿಲ್ಲ. ಇದನ್ನೆಲ್ಲ ಅರಿತ ಆರೋಗ್ಯ ವಿವಿ ಆಡಳಿತ ಮಂಡಳಿ, ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಅಂಕಪಟ್ಟಿಯನ್ನೂ ಒದಗಿಸಲು ಬೇಕಾದ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಪ್ರಸ್ತುತ, ಮಾನ್ಯತೆ ಪಡೆದಿರುವ ಎಲ್ಲಾ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜಿಗೆ ಅಂಕಪಟ್ಟಿಯನ್ನು ಆರೋಗ್ಯ ವಿವಿಯಿಂದಲೇ ವಿತರಿಸಲಾಗುತ್ತದೆ. ಅಂಕಪಟ್ಟಿಗಳಲ್ಲಿ ಲೋಪಗಳೂಹೀಗಾಗಿ ವಿವಿಯಿಂದ ಪ್ರತಿ ವರ್ಷ ಸಾವಿರಾರು ಅಂಕಪಟ್ಟಿಯನ್ನು ಸಿದ್ಧಮಾಡ ಬೇಕಾಗುತ್ತದೆ. ಈ ಸಂದರ್ಭದಲ್ಲಿ ಚಿಕ್ಕಪುಟ್ಟ ತಪ್ಪುಗಳು, ಹೆಸರು, ಫೋಟೋ ಬದಲಾಗುವುದು ಮತ್ತಿತರ ಲೋಪಗಳು ನಡೆಯುತ್ತವೆ. ಇದನ್ನೆಲ್ಲ ತಪ್ಪಿಸಲು ಆನ್‌ಲೈನ್‌ ಮೂಲಕವೇ ಒದಗಿಸಲು ವಿವಿ ಆಡಳಿತ ಮಂಡಳಿ ಸಜ್ಜಾಗುತ್ತಿದೆ.

ವಿದ್ಯಾರ್ಥಿಗಳಿಗೆ ಪಾಸ್‌ವರ್ಡ್‌: ಅಂಕಪಟ್ಟಿ ಯನ್ನು ಆನ್‌ಲೈನ್‌ ಮೂಲಕ ಪಡೆಯಲು ಬೇಕಾದ ಪಾಸ್‌ವರ್ಡ್‌ ಅನ್ನು ವಿಶ್ವವಿದ್ಯಾಲಯದಿಂದ ಎಲ್ಲಾ ವಿದ್ಯಾರ್ಥಿಗಳಿಗೂ ನೀಡಲಾಗುತ್ತದೆ. ಫ‌ಲಿತಾಂಶ ಪ್ರಕಟಿಸುವ ದಿನದಿಂದ ಲಾಗಿನ್‌ ಐಡಿ ಮತ್ತು ಆನ್‌ಲೈನ್‌ ಪಾಸ್‌ವರ್ಡ್‌ ಬಳಿಸಿ, ಅಂಕಪಟ್ಟಿಯನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಮೂಲ ಪ್ರತಿ ಅಗತ್ಯ ಇಲ್ಲ. ಉದ್ಯೋಗ ಸೇರಿದಂತೆ ಉನ್ನತ ಅಧ್ಯಯನಕ್ಕೂ ಇದೇ ಪ್ರತಿಯನ್ನು ಬಳಸಬಹುದು ಮತ್ತು ಬೇಕೆಂದಾಗೆಲ್ಲಾ ಡೌನ್‌ಲೋಡ್‌ ಮಾಡಿಕೊಳ್ಳಬಹುದು ಎಂದು ವಿವಿಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

Advertisement

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next