Advertisement

ಆರ್‌ಜಿಐಸಿಡಿಯಲ್ಲಿ ರೋಗಿ ಪಾಲಕರಿಗೆ ವ್ಯವಸ್ಥೆ 

12:02 PM Nov 15, 2022 | Team Udayavani |

ಬೆಂಗಳೂರು: ಇಲ್ಲಿನ ರಾಜೀವ್‌ಗಾಂಧಿ ಎದೆ ರೋಗಗಳ ಸಂಸ್ಥೆ (ಆರ್‌ಜಿಐಸಿಡಿ )ಆವರಣದಲ್ಲಿ 230 ಮಂದಿ ಉಳಿದುಕೊಳ್ಳಬಹುದಾದ ನೂತನ ಸುಸಜ್ಜಿತ ಕಟ್ಟಡವೊಂದು 3 ತಿಂಗಳಲ್ಲಿ ಪ್ರಾರಂಭಗೊಳ್ಳಲಿದೆ.

Advertisement

ಬೆಂಗಳೂರಿನಲ್ಲಿ ಮೊದಲ ಬಾರಿಗೆ ರೋಗಿಗಳ ಕುಟುಂಬ ಸದಸ್ಯರಿಗಾಗಿ ಇಷ್ಟೊಂದು ಸವಲತ್ತುಗಳಿರುವ ಸುಸಜ್ಜಿತ ವ್ಯವಸ್ಥೆಯ ಕಟ್ಟಡ ನಿರ್ಮಿಸ ಲಾಗುತ್ತಿದೆ. ಇಲ್ಲಿ ಪ್ರತ್ಯೇಕ ಬೆಡ್‌ಗಳು, ಸ್ನಾನಗೃಹ, ಶೌಚಾಲಯ ಸೌಲಭ್ಯ, ಕ್ಯಾಂಟೀನ್‌ ಇನ್ನಿತರ ಮನರಂಜನೆ ಸೌಲಭ್ಯ ಒದಗಿಸಲಾಗುತ್ತಿದೆ. ನೆಲ ಮಹಡಿಯಲ್ಲಿ ವಾಹನಗಳ ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸಲಾಗಿದೆ. ಆರ್‌ಜಿಐಸಿಡಿ ಆಸ್ಪತ್ರೆಯ ಆವರಣದಲ್ಲಿರುವ 1 ಎಕರೆ ಪ್ರದೇಶದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ 3 ಮಹಡಿಯ ಕಟ್ಟಡದ ಕಾಮಗಾರಿ ಭರದಿಂದ ಸಾಗುತಿದ್ದು, 2023 ಹೊಸ ವರ್ಷದ ಮೊದಲ ತಿಂಗಳಿನಲ್ಲಿ ಉದ್ಘಾಟನೆಗೊಳ್ಳಲು ಸಿದ್ಧತೆಗಳು ನಡೆಯುತ್ತಿವೆ ಎಂದು ಸಂಸ್ಥೆಯ ನಿರ್ದೇಶಕ ಡಾ.ಸಿ.ನಾಗರಾಜ್‌ ಉದಯವಾಣಿಗೆ ತಿಳಿಸಿದ್ದಾರೆ.

ಕ್ಷಯರೋಗ ಮತ್ತು ಎದೆ ರೋಗಕ್ಕೆ ಸಂಬಂಧಿಸಿದ ಚಿಕಿತ್ಸೆಗಾಗಿ ರಾಜ್ಯದ ವಿವಿಧ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಆರ್‌ಜಿಐಸಿಡಿಗೆ ಬರುವವರ ಸಂಖ್ಯೆ ಶೇ.70ರಷ್ಟಿದೆ. ಚಿಕಿತ್ಸೆಗಾಗಿ ಬರುವ ರೋಗಿ ಗಳನ್ನು ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳಲಾಗುತ್ತದೆ. ಇನ್ನು ರೋಗಿಯ ಜತೆಗೆ ಕುಟುಂಬದ ಓರ್ವ ಸದಸ್ಯರಿಗೆ ಆಸ್ಪತ್ರೆಯಲ್ಲಿ ಇರಲು ಅವಕಾಶಗಳಿವೆ. ಆದರೆ, ದೂರದ ಊರುಗಳಿಂದ ರೋಗಿಗಳನ್ನು ನೋಡಿಕೊಳ್ಳಲು ಬರುವ 2ಕ್ಕಿಂತ ಅಧಿಕ ಕುಟುಂಬ ಸ್ಥರು, ಸಂಬಂಧಿಕರು ಹಾಗೂ ಕೆಲ ಚಿಕಿತ್ಸೆಗಳ ವರದಿಗಾಗಿ ಕಾಯುವ ಬಡ ರೋಗಿಗಳಿಗೆ ಉಳಿದುಕೊಳ್ಳಲು ಸಮಸ್ಯೆಯಾಗುತ್ತಿದ್ದು, ಇನ್ನು 3 ತಿಂಗಳಿನಲ್ಲಿ ಈ ಸಮಸ್ಯೆಗೆ ಮುಕ್ತಿ ಸಿಗಲಿದೆ ಎಂದು ಹೇಳಿದ್ದಾರೆ.

ಸದ್ಯ 50 ಮಂದಿಗೆ ಒಂದೇ ಕೋಣೆ: ಪ್ರಸ್ತುತ ಆಸ್ಪತ್ರೆಯ ಕೋಣೆಯೊಂದರಲ್ಲಿ 50 ಮಂದಿಗೆ ತಾತ್ಕಾಲಿಕವಾಗಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿ ಕೊಡಲಾಗಿದೆ. ಆದರೆ, ಇಲ್ಲಿ ಒಂದೇ ಕೋಣೆಯಲ್ಲಿ ಅಷ್ಟೊಂದು ಜನರಿಗೆ ಉಳಿದುಕೊಳ್ಳುವುದು ಕಷ್ಟಸಾಧ್ಯವಾಗಿದೆ. ಈ ಪ್ರದೇಶಗಳಲ್ಲಿ ನಿತ್ಯ ರೋಗಿಗಳ ಸಂಬಂಧಿಕರು ಉಳಿದುಕೊಳ್ಳುವ ಹಿನ್ನೆಲೆಯಲ್ಲಿ ಈ ಪ್ರದೇಶಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡುವುದು ಆಸ್ಪತ್ರೆ ಸಿಬ್ಬಂದಿಗೆ ಕಷ್ಟವಾಗುತ್ತಿದೆ. ನಿತ್ಯ 150ಕ್ಕೂ ಹೆಚ್ಚು ಹೊರರೋ ಗಿಗಳು ಚಿಕಿತ್ಸೆಗಾಗಿ ಬರುತ್ತಾರೆ. 200ಕ್ಕೂ ಅಧಿಕ ಒಳರೋಗಿಗಳು ಚಿಕಿತ್ಸೆ ಪಡೆಯುತ್ತಿರುತ್ತಾರೆ ಎಂದು ಇಲ್ಲಿನ ವೈದ್ಯರು ತಿಳಿಸಿದ್ದಾರೆ.

ರೋಗಿಯು ಆಸ್ಪತ್ರೆಯಿಂದ ಬಿಡುಗಡೆ ಹೊಂದುವವರೆಗೂ ಕುಟುಂಬದ ಸದಸ್ಯರು ಇಲ್ಲಿ ಆಶ್ರಯ ಪಡೆಯಲು ಅವಕಾಶ ಕಲ್ಪಿಸಲಾಗುವುದು.ಇದರಿಂದ ಸಾಕಷ್ಟು ಜನ ರೋಗಿಗಳ ಕುಟುಂಬ ಸದಸ್ಯರಿಗೆ ಅನುಕೂಲವಾಗಲಿವೆ.-ಡಾ. ಸಿ.ನಾಗರಾಜ್‌ ನಿರ್ದೇಶಕ, ಆರ್‌ಜಿಐಸಿಡಿ

Advertisement

 

-ಅವಿನಾಶ್‌ ಮೂಡಂಬಿಕಾನ 

Advertisement

Udayavani is now on Telegram. Click here to join our channel and stay updated with the latest news.

Next