ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಅಣ್ಣಾತ್ತೆ’ ಚಿತ್ರ ಇಂದು ಗುರುವಾರ ದೀಪಾವಳಿಯ ಸುಸಂದರ್ಭದಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗಿದೆ.
ತಿರುಚ್ಚಿಯಲ್ಲಿ ರಜನಿಕಾಂತ್ ಕಟ್ಟಾ ಅಭಿಮಾನಿಯಾಗಿರುವ ಹೊಟೇಲ್ ಮಾಲೀಕ ಕರ್ಣನ್ ಎನ್ನುವವರು ಪ್ರಾರ್ಥನೆಯ ಸಂಕೇತವಾಗಿ 1 ರೂ.ಗೆ ದೋಸೆ ಮಾರುತ್ತಿದ್ದಾರೆ. “ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿ ಮತ್ತು ಚಲನಚಿತ್ರವು ದೊಡ್ಡ ಹಿಟ್ ಆಗಲಿ ಎಂದು ನಾನು ಬಯಸುತ್ತೇನೆ ಮತ್ತು ಪ್ರಾರ್ಥಿಸುತ್ತೇನೆ” ಎಂದು ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಅಣ್ಣಾತ್ತೆ ತಮಿಳು ಭಾಷೆಯ ಆಕ್ಷನ್ ಡ್ರಾಮಾ ಚಿತ್ರವಾಗಿದ್ದು, ಶಿವ ಅವರು ನಿರ್ದೇಶಿಸಿದ್ದಾರೆ. ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಕಲಾನಿಧಿ ಮಾರನ್ ನಿರ್ಮಿಸಿದ್ದಾರೆ. ಚಿತ್ರದಲ್ಲಿ ರಜನಿಕಾಂತ್ ಅವರೊಂದಿಗೆ ಮೀನಾ, ಖುಷ್ಬು, ನಯನತಾರಾ ಮತ್ತು ಕೀರ್ತಿ ಸುರೇಶ್ ಅವರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಅಣ್ಣಾತ್ತೆ ಯುಎಸ್‌ನಲ್ಲಿ 677 ಸ್ಕ್ರೀನ್‌ಗಳಲ್ಲಿ,ಯುಎಇ ಯಲ್ಲಿ 117, ಮಲೇಷ್ಯಾದಲ್ಲಿ 110, ಶ್ರೀಲಂಕಾದಲ್ಲಿ 86, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ 85, ಯುರೋಪ್‌ನಾದ್ಯಂತ 43, ಯುಕೆಯಲ್ಲಿ 35 ಸ್ಕ್ರೀನ್‌ಗಳಲ್ಲಿ ಪ್ರೀಮಿಯರ್ ಆಗಲಿದೆ. ಸಿಂಗಾಪುರದಲ್ಲಿ 23 ಮತ್ತು ಕೆನಡಾದಲ್ಲಿ 17 ಸ್ಕ್ರೀನ್ ಗಳಲ್ಲಿ ಪ್ರದರ್ಶನಗೊಳ್ಳಲಿದೆ.
ತೆಲುಗಿನಲ್ಲೂ ‘ಪೆದ್ದಣ್ಣ’ ಎಂಬ ಶೀರ್ಷಿಕೆಯೊಂದಿಗೆ ಚಿತ್ರ ಬಿಡುಗಡೆಯಾಗಲಿದೆ.