ಅಂಬರೀಶ್ ಅವರು “ಅಂಬಿ ನಿಂಗೆ ವಯಸ್ಸಾಯ್ತೋ’ ಸಿನಿಮಾದಲ್ಲಿ ನಟಿಸಲಿರುವ ಹಾಗೂ ಆ ಚಿತ್ರವನ್ನು ಸುದೀಪ್ ನಿರ್ಮಿಸಲಿರುವ ವಿಷಯ ನಿಮಗೆ ಗೊತ್ತೇ ಇದೆ. ಇದು ತಮಿಳಿನ “ಪವರ್ ಪಾಂಡಿ’ ಚಿತ್ರದ ರೀಮೇಕ್. ಅಂಬರೀಶ್ ಈ ಚಿತ್ರ ಮಾಡಲು ಕಾರಣ ರಜನಿಕಾಂತ್ ಎಂದರೆ ನೀವು ನಂಬಲೇಬೇಕು. ಈ ಮಾತನ್ನು ಸ್ವತಃ ಅಂಬರೀಶ್ ಹೇಳುತ್ತಾರೆ. “ನಾನು ಈ ಸಿನಿಮಾ ಮಾಡಲು ಕಾರಣ ರಜನಿಕಾಂತ್. ಸಿನಿಮಾ ನೋಡಿದ ರಜನಿಕಾಂತ್, “ಅಂಬಿ ಈ ಸಿನಿಮಾ ನಿಮಗೆ ಸೂಟ್ ಆಗುತ್ತೆ, ಮಾಡಿ’ ಎಂದರು.
ಹಾಗಾಗಿ ಮಾಡುತ್ತಿದ್ದೇನೆ. ತುಂಬಾ ವಿಭಿನ್ನವಾದ ಕಥೆಯದು. ಟೈಟಲ್ “ಅಂಬಿ ನಿಂಗೆ ವಯಸ್ಸಾಯ್ತೋ’ ಎಂದಿದೆ. ಆದರೆ, ಒಳಗಡೆ ಬಂದ ನಂತರ ನಿಮಗೆ ಬೇರೇನೇ ಸಿಗಲಿದೆ. ಮುಖ್ಯವಾಗಿ ಈ ಸಿನಿಮಾ ಇವತ್ತಿನ ಕಾಲಘಟ್ಟಕ್ಕೆ ತುಂಬಾ ಹೊಂದುತ್ತದೆ. ಬಿಝಿ ಲೈಫ್, ಮಕ್ಕಳು ತಂದೆ-ತಾಯಂದಿರನ್ನು ನೋಡಿಕೊಳ್ಳಲು ಹಿಂದೇಟು ಹಾಕುವ ಸ್ಥಿತಿ… ಇಂತಹ ಸಂದರ್ಭದಲ್ಲಿ ಈ ಕಥೆ ತುಂಬಾ ಸೂಟ್ ಆಗುತ್ತದೆ’ ಎನ್ನುವುದು ಅಂಬರೀಶ್ ಮಾತು.
ಭೀಷ್ಮನ ಮೇಕಪ್ಗೆ 12 ನಿಮಿಷ ಸಾಕು: ನಿಮಗೆ ಗೊತ್ತಿರುವಂತೆ “ಮುನಿರತ್ನ ಕುರುಕ್ಷೇತ್ರ’ ಚಿತ್ರದಲ್ಲಿ ಅಂಬರೀಶ್ ಅವರು ಭೀಷ್ಮನ ಪಾತ್ರ ಮಾಡುತ್ತಿರೋದು, ಈಗಾಗಲೇ ಅವರ ಗೆಟಪ್ನ ಫೋಟೋ ಕೂಡಾ ಓಡಾಡುತ್ತಿದೆ. ಮುಖ ತುಂಬಾ ಬಿಳಿಗಡ್ಡ, ಉದ್ದ ಕೂದಲು ಬಿಟ್ಟು ಕಾಣಿಸಿಕೊಂಡಿರುವ ಅಂಬರೀಶ್, ಇಷ್ಟೆಲ್ಲಾ ಮೇಕಪ್ ಅನ್ನು 12 ರಿಂದ 13 ನಿಮಿಷದಲ್ಲಿ ಹಾಕಿಕೊಳ್ಳುತ್ತಾರಂತೆ.
ಅಷ್ಟು ಸುಲಭ ಹೇಗೆ ಎಂದು ನೀವು ಕೇಳಬಹುದು. ಅದಕ್ಕೆ ಅಂಬರೀಶ್ ಅವರೇ ಉತ್ತರಿಸುತ್ತಾರೆ. “ಭೀಷ್ಮ ಗೆಟಪ್ನಲ್ಲಿ ಕಾಣೋದು ಕೇವಲ ನನ್ನ ಹಣೆ ಹಾಗೂ ಕಣ್ಣು ಅಷ್ಟೇ. ಉಳಿದಂತೆ ವಿಗ್ ಹಾಗೂ ಗಡ್ಡ ಸಿಕ್ಕಿಸಿಕೊಳ್ಳೋಕೆ ಎಷ್ಟು ಹೊತ್ತು ಬೇಕು. ಅದಕ್ಕೆ ನಾನು ಮುನಿರತ್ನನಿಗೆ ಹೇಳ್ತಾ ಇದ್ದೆ,
“ಸುಮ್ಮನೆ ನನಗೆ ದುಡ್ಡು ಕೊಡೋ ಬದಲು ವಿಗ್ ಹಾಕಿಕೊಂಡು ನೀನೇ ಆ್ಯಕ್ಟ್ ಮಾಡು. ಕ್ಲೋಸಪ್ನಲ್ಲಿ ಕಣ್ಣು ಬೇಕಾದರೆ ನನ್ನ ಕಣ್ಣು ಬಳಸಿಕೋ’ ಎನ್ನುತ್ತಿದ್ದೆ’ ಎಂದು ನಗುತ್ತಾರೆ ಅಂಬರೀಶ್. ಈಗಾಗಲೇ ಎಂಟು ದಿನಗಳ ಕಾಲ “ಕುರುಕ್ಷೇತ್ರ’ ಚಿತ್ರದಲ್ಲಿ ಅಂಬರೀಶ್ ನಟಿಸಿದ್ದಾರೆ. ಇನ್ನೂ ಅವರ ಭಾಗದ ಚಿತ್ರೀಕರಣ ಬಾಕಿ ಇದೆಯಂತೆ.
ಮಗನ ಕಥೆಯ ಅಂತಿಮ ಆಯ್ಕೆ ನಂದೇ: ಅಂಬರೀಶ್ ಪುತ್ರ ಅಭಿಷೇಕ್ ಸಿನಿಮಾ ರಂಗಕ್ಕೆ ಎಂಟ್ರಿಕೊಡುವ ಸುದ್ದಿ ನಿಮಗೆ ಗೊತ್ತೇ ಇದೆ. ಆದರೆ, ಯಾವತ್ತೂ ಎಂಬ ಪ್ರಶ್ನೆಗೆ ಉತ್ತರ ಇನ್ನೂ ಇಲ್ಲ. “ಒಂದಷ್ಟು ಕಥೆ ಕೇಳುತ್ತಿದ್ದಾನೆ. ಕಥೆ ಅಂತಿಮವಾಗಬೇಕು. ಮೊದಲು ಆತನಿಗೆ ಕಥೆ ಇಷ್ಟವಾಗಬೇಕು. ಆ ನಂತರ ನನ್ನಲ್ಲಿಗೆ ಬರುತ್ತದೆ. ಅಂತಿಮ ನಿರ್ಧಾರದ ನನ್ನದೇ’ ಎಂದು ಮಗನ ಸಿನಿಮಾ ಬಗ್ಗೆ ಮಾತನಾಡುತ್ತಾರೆ ಅಂಬಿ.
ಅಂಬರೀಶ್ ಅವರಿಗೆ ಪುತ್ರ ಅಭಿಷೇಕ್, ರಾಜಕೀಯಕ್ಕೆ ಬರೋದು ಇಷ್ಟವಿಲ್ಲವಂತೆ. “ಆತ ರಾಜಕೀಯಕ್ಕೆ ಬರೋದು ಬೇಡ. ಬೇರೆ ಯಾವ ಕ್ಷೇತ್ರವನ್ನಾದರೂ ಆಯ್ಕೆ ಮಾಡಲಿ. ಸದ್ಯ ಆತನಿಗೆ ಸಿನಿಮಾ ರಂಗದ ಮೇಲೆ ಆಸಕ್ತಿ ಬಂದಿದೆ. ಅದಕ್ಕೆ ಬೇಕಾದ ತಯಾರಿಯನ್ನು ಆತ ಮಾಡಿಕೊಳ್ಳುತ್ತಿದ್ದಾನೆ’ ಎನ್ನುತ್ತಾರೆ ಅಂಬರೀಶ್.