ಮಂಗಳೂರು: ಸೂಪರ್ ಸ್ಟಾರ್ ರಜಿನಿಕಾಂತ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕಡಲ ನಗರಿ ಮಂಗಳೂರಿಗೆ ಆಗಮಿಸಿದ್ದಾರೆ. ಎರಡು ದಿನಗಳ ಕಾಲ ಚಿತ್ರೀಕರಣದಲ್ಲಿ ಭಾಗಿಯಾಗಲು ಮಂಗಳೂರಿಗೆ ಆಗಮಿಸಿದ ವಿಡಿಯೋ ವೈರಲ್ ಆಗಿದೆ.
ವಿಮಾನ ನಿಲ್ದಾಣಕ್ಕೆ ಬಂದಿಳಿದ ರಜಿನಿಕಾಂತ್ ಅವರನ್ನು ನೋಡಲು ಹತ್ತಾರು ಅಭಿಮಾನಿಗಳಿದ್ದರು. ಅಭಿಮಾನಿಗಳತ್ತ ಕೈಬೀಸಿ ನಗುತ್ತಾ ಕಾರಿನಲ್ಲಿ ರಜಿನಿ ತೆರಳಿದ್ದಾರೆ.
ನೆಲ್ಸನ್ ದಿಲೀಪ್ ಕುಮಾರ್ ಅವರ ʼಜೈಲರ್ʼ ಸಿನಿಮಾದ ಶೂಟಿಂಗ್ ಗಾಗಿ ರಜಿನಿಕಾಂತ್ ಆಗಮಿಸಿದ್ದು, ಪಿಲಿಕುಳ ಗುತ್ತು ಮನೆಯಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ತಿಳಿದು ಬಂದಿದೆ.
ಮುತ್ತುವೇಲ್ ಪಾಂಡಿಯನ್ ಎಂಬ ಪಾತ್ರದಲ್ಲಿ ರಜಿನಿ ಕಾಣಿಸಿಕೊಳ್ಳಲಿದ್ದು, ಇತ್ತೀಚೆಗೆ ರಿಲೀಸ್ ಆದ ಸಿನಿಮಾದ ಟೀಸರ್ ವೈರಲ್ ಆಗಿದೆ. ತಲೈವಾ ರಜಿನಿಕಾಂತ್ ಅವರ 169ನೇ ಸಿನಿಮಾ ಇದಾಗಿದ್ದು, ಈ ಸಿನಿಮಾದಲ್ಲಿ ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ವಿಶೇಷ ಪಾತ್ರದಲ್ಲಿ ನಟಿಸಲಿದ್ದಾರೆ. ಇದರೊಂದಿಗೆ, ಮಲಯಾಳಂ ನಟ ಮೋಹನ್ ಲಾಲ್, ಹಿಂದಿಯ ಜಾಕಿ ಶ್ರಾಫ್, ರಮ್ಯಾ ಕೃಷ್ಣನ್, ಯೋಗಿ ಬಾಬು, ವಸಂತ್ ರವಿ ಮುಂತಾದ ದೊಡ್ಡ ತಾರಾಗಣವೇ ಇದೆ.
ಸನ್ ಪಿಕ್ಚರ್ಸ್ ನಿರ್ಮಾಣದ ಸಿನಿಮಾಕ್ಕೆ ಮಾಸ್ಟರ್ ಅನಿರುದ್ಧ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಇದೇ ವರ್ಷದ ಬೇಸಿಗೆಯಲ್ಲಿ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ.