ಚೆನ್ನೈ:ತಮಿಳು ರಾಜಕೀಯ ಹಾಗೂ ವಿವಿಧ ಸಂಘಟನೆಗಳ ಒತ್ತಡಕ್ಕೆ ಮಣಿದ ಸೂಪರ್ ಸ್ಟಾರ್ ರಜನಿಕಾಂತ್ ಶ್ರೀಲಂಕಾ ಭೇಟಿಯನ್ನು ಕೊನೆಗೂ ರದ್ದುಪಡಿಸಿರುವುದಾಗಿ ಶನಿವಾರ ತಿಳಿಸಿದ್ದಾರೆ. ನಿಗದಿಯಂತೆ ಏ.9ಕ್ಕೆ ರಜನಿಕಾಂತ್ ಶ್ರೀಲಂಕಾದ ಜಾಫ್ನಾಕ್ಕೆ ತೆರಳುವ ಕಾರ್ಯಕ್ರಮವಿತ್ತು.
ಆದರೆ ತಮಿಳರನ್ನು ಕಡೆಗಣಿಸುವ ಶ್ರೀಲಂಕಾಕ್ಕೆ ನಟ ರಜನಿಕಾಂತ್ ಅವರು ಭೇಟಿ ನೀಡಬಾರದು ಎಂದು ತಿರುಮಾವಲಾವನ್ ನೇತೃತ್ವದ ವಿಸಿಕೆ ಮತ್ತು ವೈಕೋ ನೇತೃತ್ವದ ಎಂಡಿಎಂಕೆ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದವು.
ಈ ಹಿನ್ನೆಲೆಯಲ್ಲಿ ತಾನು ಏ.9ರಂದು ಜಾಫ್ನಾಕ್ಕೆ ಭೇಟಿ ನೀಡುವ ಕಾರ್ಯಕ್ರಮವನ್ನು ರದ್ದುಪಡಿಸಿರುವುದಾಗಿ ನಟ ರಜನಿಕಾಂತ್ ಬರೆದಿರುವ ಪತ್ರವನ್ನು ರಮೇಶ್ ಬಾಲಾ ಅವರು ಟ್ವೀಟರ್ ನಲ್ಲಿ ಶೇರ್ ಮಾಡಿದ್ದಾರೆ.
ನಾನು ಶ್ರೀಲಂಕಾಕ್ಕೆ ಭೇಟಿ ನೀಡುವುದನ್ನು ರದ್ದುಪಡಿಸಿದ್ದೇನೆ. ಅದೇ ರೀತಿ ತಿರುಮಾವಲಾವನ್ ಮತ್ತು ವೈಕೋ ಅವರ ಕಾರಣವನ್ನು ನಾನು ಒಪ್ಪೋದಿಲ್ಲ ಎಂದು ರಜನಿ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.
ಶ್ರೀಲಂಕಾದಲ್ಲಿ ತಮಿಳರು ಯಾವ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ ಎಂಬುದನ್ನು ನೋಡಬೇಕೆಂದು ಇಚ್ಛಿಸಿದ್ದೆ. ಅಷ್ಟೇ ಅಲ್ಲ ಮೀನುಗಾರರ ಸಮಸ್ಯೆಗೊಂದು ಪರಿಹಾರ ಕಂಡುಹಿಡಿಯುವ ನೆಲೆಯಲ್ಲಿ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲಾ ಸಿರಿಸೇನಾ ಅವರನ್ನು ಭೇಟಿಯಾಗಿ ಚರ್ಚಿಸಬೇಕೆಂದಿದ್ದೆ ಎಂದು ಪತ್ರದಲ್ಲಿ ಉಲ್ಲೇಖಿಸಿರುವ ರಜನಿಕಾಂತ್, ನಾನು ರಾಜಕಾರಣಿಯಲ್ಲ, ಆದರೆ ನಾನೊಬ್ಬ ನಟ ಎಂದು ತಮ್ಮ ಭೇಟಿ ವಿರುದ್ಧದ ರಾಜಕೀಯಕ್ಕೆ ತಿರುಗೇಟು ನೀಡಿದ್ದಾರೆ.
ಜ್ಞಾನಂ ಫೌಂಡೇಶನ್ ಜಾಫ್ನಾದಲ್ಲಿ ತಮಿಳಿರಿಗಾಗಿ 22 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ 150 ಮನೆಗಳ ಕೀ ಹಸ್ತಾಂತರ ಕಾರ್ಯಕ್ರಮಕ್ಕಾಗಿ ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು(ಏ.9) ಜಾಫ್ನಾಕ್ಕೆ ಆಹ್ವಾನಿಸಿತ್ತು.