ಕೊಟ್ಟಿಗೆಹಾರ : ಮೂಲಕೃತಿಗೆ ಚ್ಯುತಿ ಬಾರದಂತೆ ಕೃತಿಯೊಂದನ್ನು ನಾಟಕ ರೂಪಕ್ಕೆ ತಂದು ಅಭಿನಯಿಸುವುದು ಸವಾಲಿನ ಕೆಲಸವಾಗಿದೆ ಎಂದು ಲೇಖಕಿ ರಾಜೇಶ್ವರಿ ತೇಜಸ್ವಿ ಹೇಳಿದರು.
ಸೋಮವಾರ ರಾತ್ರಿ ಕೊಟ್ಟಿಗೆಹಾರದ ತೇಜಸ್ವಿ ಪ್ರತಿಷ್ಠಾನದಲ್ಲಿ ನಡೆದ ನುಡಿನಮನ ಹಾಗೂ ಎಂಕ್ಟನ ಪುಂಗಿ ನಾಟಕ ಪ್ರದರ್ಶನದಲ್ಲಿ ಅವರು ಮಾತನಾಡಿದರು. ತೇಜಸ್ವಿಯವರ ಕಥೆಯನ್ನು ಕಲಾವಿದರು ನಾಟಕದಲ್ಲಿ ನಟಿಸಿ ಎಲ್ಲಿಯೂ ಕಥೆಗೆ ಚ್ಯುತಿ ಬಾರದಂತೆ ನಟಿಸಿರುವುದು ಶ್ಲಾಘನೀಯ. ನಿರ್ದೇಶಕರು ಎಲ್ಲಿಯೂ ಕಥೆಯನ್ನು ತಿರುವುಗೊಳಿಸದೆ ನಾಟಕವನ್ನು ದೃಶ್ಯರೂಪಕದಲ್ಲಿ ಕಟ್ಟಿಕೊಟ್ಟಿರುವುದು ಅರ್ಥಪೂರ್ಣ ಎಂದರು.
ಸಾಹಿತಿ ಡಾ| ಪ್ರದೀಪ್ ಕೆಂಜಿಗೆ ಮಾತನಾಡಿ, ಎಂಕ್ಟನ ಪುಂಗಿ ಕತೆಯ ಮೂಲಕ ತೇಜಸ್ವಿಯವರು ನಿರ್ಲಕ್ಷ್ಯಕೊಳ್ಳಗಾದ ಭಾರತದ ಸಮುದಾಯದ, ಮುಖ್ಯವಾಹಿನಿಯಲ್ಲಿರದ ಜನಾಂಗದ ಅಭಿವ್ಯಕ್ತಿಯಾಗಿ ಈ ಕತೆಯನ್ನು ಕಟ್ಟಿಕೊಟ್ಟಿದ್ದಾರೆ. ಜೊತೆಗೆ ಹಾವು ಹಿಡಿಯುವ ಕಲೆಯ ಹಿಂದಿನ ಜ್ಞಾನವನ್ನು ಕಲಾತ್ಮಕವಾಗಿ ಕಟ್ಟಿಕೊಟ್ಟಿದ್ದಾರೆ ಎಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ| ಸಿ.ರಮೇಶ್ ಮಾತನಾಡಿ, ತೇಜಸ್ವಿಯವರ ಆಶಯದಂತೆ ತೇಜಸ್ವಿ ಪ್ರತಿಷ್ಠಾನದ ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದ್ದು ತೇಜಸ್ವಿ ಓದು, ಫೋಟೋಗ್ರಫಿ ಶಿಬಿರ ಮುಂತಾದ ಕಾರ್ಯಕ್ರಮಗಳ ಮೂಲಕ ಪ್ರತಿಷ್ಠಾನದಲ್ಲಿ ನಿರಂತರ ಚಟುವಟಿಕೆಗಳ ತಾಣವಾಗಿದೆ ಎಂದರು.
ಎಂಕ್ಟನ ಪುಂಗಿ ನಾಟಕ ನಿರ್ದೇಶಕ ಎಸ್. ಪ್ರವೀಣ್ ಮಾತನಾಡಿ, ಮೂಲಕಥೆಗೆ ಚ್ಯುತಿ ಬಾರದಂತೆ ಸಿಕ್ಕಿದ ನಾಟಕವನ್ನು ರೂಪಿಸಲಾಗಿದ್ದು ದೃಶ್ಯ ಶಬ್ದ ಹಾಗೂ ಅಭಿನಯದ ವಿವಿಧ ಸಾಧ್ಯತೆಗಳನ್ನು ಬಳಸಿಕೊಂಡು ನಾಟಕವನ್ನು ಪರಿಣಾಮಕಾರಿ ಪ್ರದರ್ಶಿಸುವ ಪ್ರಯತ್ನ ಇದಾಗಿದೆ ಎಂದರು.
ಕೊಪ್ಪದ ರಂಗಬಿಂಬ ತಂಡದ ವತಿಯಿಂದ ತೇಜಸ್ವಿ ಕಥೆಯಾಧಾರಿತ ನಾಟಕ “ಎಂಕ್ಟನ ಪುಂಗಿ’ ಪ್ರದರ್ಶಿಸಲಾಯಿತು. ಚಿತ್ರ ಕಲಾವಿದರಾದ ಸುರೇಶ್‌ಚಂದ್ರ ದತ್ತ, ಬಾಪು ದಿನೇಶ್, ಪುಸ್ತಕ ಪ್ರಕಾಶನದ ರಾ‚ಘವೇಂದ್ರ, ಕ್ಷೇತ್ರ ಶಿಕ್ಷಣಾಧಿ ಕಾರಿ ಹೇಮಂತ್ ರಾಜ್, ಕಲಾವಿದರಾದ ಜಿನೇಶ್ ಇರ್ವತ್ತೂರು, ನಿರಂಜನ್, ಎಚ್.ಎಸ್. ಜಗದೀಶ್, ಎಚ್.ಎಂ. ಸುಬ್ಬಣ್ಣ, ಶಾಂತಾರಾಮ್, ರಾಘವೇಂದ್ರ ಹರಿಹರಪುರ, ರಮೇಶ್, ಬಿ. ಅಶೋಕ್, ಶ್ರೀಪಾದ್ ತೀರ್ಥಹಳ್ಳಿ, ನಾಗರಾಜ್ ಕೂವೆ, ಆಕರ್ಷ್, ಸತೀಶ್, ವಿಠಲ, ಪೂರ್ಣೇಶ್ ಮತ್ತಾವರ, ಮಗ್ಗಲಮಕ್ಕಿ ಗಣೇಶ್, ಎಸ್. ಪ್ರವೀಣ್, ನಾಗರಾಜ್, ಸಂಜಯ್ ಗೌಡ, ಎ.ಆರ್.ಅಭಿಲಾಷ್, ರೇಖಾ ಪೂರ್ಣೇಶ್, ಅನಿಲ್ ಮೊಂತೆರೊ, ನವೀನ್ ಆನೆದಿಬ್ಬ, ನಾಜೀಂ, ವಿಜಯಲಕ್ಷ್ಮಿ ಇದ್ದರು.