ವಲ್ಸಾದ್: ಮುಂಬೈ-ದೆಹಲಿ ರಾಜಧಾನಿ ಎಕ್ಸ್ ಪ್ರೆಸ್ ರೈಲು ದಕ್ಷಿಣ ಗುಜರಾತ್‌ನ ವಲ್ಸಾದ್ ಬಳಿ ಸಿಮೆಂಟ್ ಪಿಲ್ಲರ್ ಗೆ ಢಿಕ್ಕಿ ಹೊಡೆದಿದೆ. ಸಿಮೆಂಟ್ ಪಿಲ್ಲರನ್ನು ಕೆಲವರು ರೈಲ್ವೆ ಹಳಿ ಮೇಲೆ ಹಾಕಿದ್ದಾರೆ ಎನ್ನಲಾಗಿದೆ. ಯಾರಿಗೂ ಗಾಯಗಳಾಗಿಲ್ಲ ಎಂದು ಪೊಲೀಸರು ಇಂದು ತಿಳಿಸಿದ್ದಾರೆ.
ಶುಕ್ರವಾರ ರಾತ್ರಿ 7.10ರ ಸುಮಾರಿಗೆ ಈ ಘಟನೆ ನಡೆದಿದ್ದು, ದೆಹಲಿಗೆ ತೆರಳುತ್ತಿದ್ದ ರೈಲನ್ನು ಹಳಿತಪ್ಪಿಸುವ ಪ್ರಯತ್ನ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
“ಮುಂಬೈ-ಹಜರತ್ ನಿಜಾಮುದ್ದೀನ್ ಆಗಸ್ಟ್ ಕ್ರಾಂತಿ ರಾಜಧಾನಿ ಎಕ್ಸ್‌ಪ್ರೆಸ್ ರೈಲು ವಲ್ಸಾದ್ ಬಳಿಯ ಅತುಲ್ ನಿಲ್ದಾಣದ ಸಮೀಪವಿರುವ ರೈಲ್ವೆ ಹಳಿಯಲ್ಲಿ ಹಾಕಲಾದ ಸಿಮೆಂಟ್ ಪಿಲ್ಲರ್‌ಗೆ ಢಿಕ್ಕಿ ಹೊಡೆದಿದೆ. ರೈಲಿಗೆ ಡಿಕ್ಕಿ ಹೊಡೆದ ನಂತರ ಪಿಲ್ಲರ್ ಹಳಿಯಿಂದ ಹೊರಕ್ಕೆ ತಳ್ಳಲ್ಪಟ್ಟಿತು. ಘಟನೆಯಿಂದ ರೈಲಿನ ಮೇಲೆ ಪರಿಣಾಮ ಬೀರಲಿಲ್ಲ. ಯಾವುದೇ ಪ್ರಯಾಣಿಕರಿಗೆ ಗಾಯವಾಗಿಲ್ಲ. ಲೊಕೊ ಪೈಲಟ್ ತಕ್ಷಣ ಅತುಲ್ ರೈಲ್ವೆ ನಿಲ್ದಾಣದ ಸಿಬ್ಬಂದಿಗೆ ಅದರ ಬಗ್ಗೆ ಮಾಹಿತಿ ನೀಡಿದರು, ”ಎಂದು ವಲ್ಸಾದ್ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ:ಮುಂಬಯಿ: ರೈಲ್ವೇಯಲ್ಲಿ ಅಪರಾಧ ಸಂಖ್ಯೆ ಹೆಚ್ಚಳ
“ಕೆಲವು ಅಪರಿಚಿತರು ಸಿಮೆಂಟ್ ಪಿಲ್ಲರನ್ನು ಹಳಿ ಮೇಲೆ ಹಾಕಿದ್ದರು. ರೈಲು ಪಿಲ್ಲರ್ ಗೆ ಢಿಕ್ಕಿ ಹೊಡೆದಿದೆ, ನಂತರ ರೈಲು ವ್ಯವಸ್ಥಾಪಕರು ತಕ್ಷಣ ಸ್ಥಳೀಯ ಸ್ಟೇಷನ್ ಮಾಸ್ಟರ್‌ಗೆ ಮಾಹಿತಿ ನೀಡಿದ್ದಾರೆ” ಎಂದು ಸೂರತ್ ನ ಐಜಿ ರೇಂಜ್ ರಾಜ್‌ಕುಮಾರ್ ಪಾಂಡಿಯನ್ ಸುದ್ದಿಗಾರರಿಗೆ ತಿಳಿಸಿದರು.