Advertisement

ನಿತ್ಯ ಸಾವಿರಾರು ಮಂದಿಯಿಂದ ರಾಜಭವನ ವೀಕ್ಷಣೆ

12:14 PM Sep 03, 2018 | |

ಬೆಂಗಳೂರು: ರಾಜ್ಯದ ಪ್ರಥಮ ಪ್ರಜೆ ರಾಜ್ಯಪಾಲರು ನೆಲೆಸಿರುವ ರಾಜಭವನದ ಕೆಲ ಕೊಠಡಿಗಳ ಮುಕ್ತ ವೀಕ್ಷಣೆಗೆ ಇದೇ ಮೊದಲ ಬಾರಿಗೆ ಅವಕಾಶ ಕಲ್ಪಿಸಿರುವುದರಿಂದ ನಿತ್ಯ ಸಾವಿರಾರು ಮಂದಿ ಐತಿಹಾಸಿಕ ಕಟ್ಟಡದ ಸೌಂದರ್ಯ ಕಣ್ತುಂಬಿಕೊಳ್ಳುತ್ತಿದ್ದಾರೆ.

Advertisement

ಅ.23ರಿಂದ ಸೆ.6ರವರೆಗೆ 15 ದಿನಗಳ ಕಾಲ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದ್ದು, ನಗರ ಮಾತ್ರವಲ್ಲದೇ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ ಪ್ರವಾಸಿಗರು ಸಹ ಅಪರೂಪಕ್ಕೆ ಕಲ್ಪಿಸಿರುವ ಅವಕಾಶ ಬಳಸಿಕೊಂಡು ಪುಳಕಿತರಾಗುತ್ತಿದ್ದಾರೆ.

ರಾಜಭವನದ ಸೊಬಗನ್ನು ಕಣ್ತುಂಬಿಕೊಳ್ಳಲು ಅವಕಾಶ ನೀಡಿರುವ ಜತೆಗೆ ಉಚಿತವಾಗಿ ಕಾಫಿ, ಟೀ, ಹಾಲು ವಿತರಣೆಯ ಔತಣ ನೀಡುತ್ತಿರುವುದು ವೀಕ್ಷರಲ್ಲಿ ಸಂತಸ ಮೂಡಿಸಿದೆ. ಭದ್ರತೆಯ ದೃಷ್ಟಿಯಿಂದ ರಾಜಭವನಕ್ಕೆ ಸಾರ್ವಜನಿಕರ ಪ್ರವೇಶ ಹಾಗೂ ಭೇಟಿ ನಿಷೇಧವಿರುತ್ತದೆ.

ಆದರೆ, ಸಾಮಾನ್ಯ ಜನರಲ್ಲಿ ರಾಜಭವನದ ಕುರಿತು ಇರುವ ಕುತೂಹಲ ತಣಿಸಲು, ಶತಮಾನಕ್ಕೂ ಹೆಚ್ಚು ಇತಿಹಾಸವಿರುವ ಪಾರಂಪರಿಕ ಕಟ್ಟಡದ ವೈಭವ, ಇತಿಹಾಸ ಪರಿಚಯಿಸಲು ರಾಜ್ಯಪಾಲ ವಜುಭಾಯಿ ವಾಲಾ ಅವಕಾಶ ಕಲ್ಪಿಸಿದ್ದಾರೆ.

ಈ ಹಿಂದೆ 2002ರಲ್ಲಿ ವಿ.ಎಸ್‌.ರಮಾದೇವಿ ಅವರು ರಾಜಪಾಲರಾಗಿದ್ದಾಗ ಸಾರ್ವಜನಿಕರು ರಾಜಭವನದ ಆವರಣ ವೀಕ್ಷಿಸಲು ಅವಕಾಶ ನೀಡಿದ್ದರು. ಆದರೆ, ಈ ಬಾರಿ ರಾಜಭವನದ ಬ್ಯಾಂಕ್ವೆಟ್‌ ಹಾಲ್‌, ಮೂರು ವಿಶೇಷ ಕೊಠಡಿಗಳ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.

Advertisement

ಜತೆಗೆ ಉದ್ಯಾನವನ ವೀಕ್ಷಣೆ ನಂತರ ರಾಜಭವನದ ವ್ಯವಸ್ಥೆಗಳು, ಪ್ರಧಾನಿ ಸೇರಿದಂತೆ ವಿವಿಧ ಗಣ್ಯರು ಬಂದಾಗ ಅವರು ವಿಶ್ರಾಂತಿ ಪಡೆಯುವ ಸ್ಥಳ ಸೇರಿದಂತೆ ಇತರೆ ಮಾಹಿತಿ ಕುರಿತು ಕಿರುಚಿತ್ರವನ್ನು ಪ್ರದರ್ಶಿಸಲಾಗುತ್ತದೆ. ರಾಜಭವನವನ್ನು ಸಾರ್ವಜನಿಕರು ಈ ರೀತಿಯಲ್ಲಿ ಮುಕ್ತವಾಗಿ ವೀಕ್ಷಿಸಲು ಅವಕಾಶ ನೀಡಿರುವುದು ಇದೇ ಮೊದಲು ಎನ್ನಲಾಗಿದೆ.

ಯಾವುದೇ ಶುಲ್ಕ ವಿಧಿಸದೇ ಉಚಿತ ಪ್ರವೇಶವಿದ್ದು, ಪ್ರತಿನಿತ್ಯ ಸಂಜೆ 4ರಿಂದ ರಾತ್ರಿ 7ರವರೆಗೆ ಭೇಟಿಗೆ ಅವಕಾಶ ನೀಡಲಾಗಿದೆ. ಪ್ರತಿನಿತ್ಯ 1000 ಜನರಿಗೆ ಅವಕಾಶ ಮಾಡಿಕೊಡಲಾಗುತ್ತಿದ್ದು, ಆನ್‌ಲೈನ್‌ನಲ್ಲಿ ನೊಂದಾಯಿಸಿಕೊಂಡವರಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. 20 ಮಂದಿಯ ಒಂದೊಂದು ಗುಂಪು ರೂಪಿಸಿ ಮಾಡಿ ಮಾರ್ಗದರ್ಶಕರ (ಗೈಡ್‌) ಸಹಾಯದಿಂದ ರಾಜಭವನ ಸುತ್ತಾಡಿಸಲಾಗುತ್ತಿದೆ. ಆನಂತರ ಕಾಫಿ, ಟೀ, ಹಾಲು, ಬಿಸ್ಕೆಟ್‌ ವಿತರಣೆ ವ್ಯವಸ್ಥೆಯನ್ನೂ ಮಾಡಲಾಗಿದೆ.

15 ಸಾವಿರ ಮಂದಿ ಭೇಟಿ: ಪ್ರತಿನಿತ್ಯ ಸರಾಸರಿ ಒಂದು ಸಾವಿರ ಜನ ಭೇಟಿ ನೀಡುತ್ತಿದ್ದು, ಈವರೆಗೂ ಅಂದಾಜು 15 ಸಾವಿರ ಮಂದಿ ಭೇಟಿ ನೀಡಿದ್ದಾರೆ. ವಾರಾಂತ್ಯದ ಶನಿವಾರ 1,400 ಮಂದಿ ಹಾಗೂ ಭಾನುವಾರ (ಸೆ. 2) 1,600 ಮಂದಿ ಭೇಟಿಕೊಟ್ಟಿದ್ದಾರೆ.

ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಂಡವರಿಗೆ ಪ್ರವೇಶಕ್ಕೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಪ್ರಸ್ತುತ ಆನ್‌ಲೈನ್‌ ನೋಂದಣಿ ಮುಕ್ತಾಯವಾಗಿದ್ದು, ಆಧಾರ್‌ ಕಾರ್ಡ್‌ ಪ್ರದರ್ಶಿಸಿದವರ ಹೆಸರನ್ನು ಸ್ಥಳದಲ್ಲೇ ನೋಂದಣಿ ಮಾಡಿಕೊಂಡು ಪ್ರವೇಶ ನೀಡಲಾಗುತ್ತಿದೆ ಎಂದು ರಾಜಭವನದ ಮೂಲಗಳು ತಿಳಿಸಿವೆ. ಸೆ.6ರವರೆಗೆ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.

16 ವರ್ಷಗಳ ನಂತರ ರಾಜಭವನ ವೀಕ್ಷಣೆಗೆ ಸಾರ್ವಜನಿಕರಿಗೆ ಮತ್ತೆ ಅವಕಾಶ ನೀಡಿರುವುದು ಖುಷಿ ವಿಚಾರ. ಇಂತಹ ಒಂದು ಅವಕಾಶವನ್ನು ಕಳೆದುಕೊಳ್ಳಬಾರದು ಎಂದು ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಂಡು ಕುಟುಂಬ ಸಮೇತವಾಗಿ ಬಂದು ನೋಡಿದೆವು. ವಿಶೇಷ ಅಲಂಕಾರ ಗಮನ ಸೆಳೆದಿದ್ದು, ಐತಿಹಾಸಿಕ ಕಟ್ಟಡವನು ಕಣ್ಮುಂಬಿ ಕೊಂಡ ಖುಷಿ ಇದೆ..
-ಎಸ್‌.ಆರ್‌.ನಾಗರಾಜ್‌,  ವಿದ್ಯಾರಣ್ಯಪುರ ನಿವಾಸಿ

ರಾಜಭವನ ನಮ್ಮಂತಹ ಸಾರ್ವಜನಿಕರ ಆಸ್ತಿ. ಭದ್ರತೆ ಕಾರಣದಿಂದ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧವಿರಲಿದೆ. ಇಲ್ಲಿಗೆ ಒಮ್ಮೆ ಭೇಟಿ ನೀಡಬೇಕು ಎಂಬ ಆಸೆ ಸಾಕಾರವಾಗಿದೆ. ರಾಜಭವನ ಅತ್ಯಂತ ಸುಂದರವಾಗಿದ್ದು, ಒಳವಿನ್ಯಾಸ, ಚಿತ್ರಕಲೆ ನಿಜಕ್ಕೂ ಆಕರ್ಷಣೀಯವಾಗಿವೆ. ಹಿನ್ನೆಲೆ ಸಂಗೀತ ಆಹ್ಲಾದಕರ ವಾತಾವರಣ ಸೃಷ್ಟಿಸಿತ್ತು.
-ಕೃಷ್ಣ, ಮೈಸೂರು ನಿವಾಸಿ 

ಕಲಬುರಗಿಯಿಂದ ಬಂದ ನಮಗೆ ರಾಜಭವನ ನೋಡಲು ಅವಕಾಶ ಸಿಕ್ಕಿರುವುದು ಸಂತಸ ತಂದಿದೆ. ವಿಶಾಲ ಉದ್ಯಾನವನ, ಅಪರೂಪದ ಔಷಧಿ ಸಸ್ಯಗಳು, ಬೋನ್ಸಾಯ್‌ ಗಿಡ, ಪೈನ್‌ ಹಾಗೂ ಸೂಚಿಪತ್ರ ಮರಗಳು ಕಣ್ತುಂಬಿಕೊಂಡೆವು. ನಿಜವಾಗಲೂ ರಾಜರ ಭವನ. ನಮ್ಮನ್ನು ಅತಿಥಿಗಳಂತೆ ಕರೆತಂದು ಎಲ್ಲರದ ಪರಿಚಯ ನೀಡಿ ಟೀ-ಕಾಫಿ ಲಘು ಉಪಹಾರ ನೀಡಿ ಉಪಚರಿಸಿದ್ದು ಅಮೋಘ. ಭೇಟಿ ನೀಡಿರುವುದಕ್ಕೆ ಒಂದು ಗುರುತಿನ ಚೀಟಿಯನ್ನು ನೀಡಿದ್ದು, ಶಾಶ್ವತವಾಗಿ ನೆನಪಿನಲ್ಲಿರುತ್ತದೆ.
-ಮಧು, ಕಲಬುರಗಿ ನಿವಾಸಿ 

ಖುದ್ದು ಗೈಡ್‌ಗಳೇ ಇತಿಹಾಸದ ಮಾಹಿತಿ ನೀಡುತ್ತಾ ರಾಜಭವನವನ್ನು ತೋರಿಸಿದರು. ಇತಿಹಾಸದ ಜತೆಗೆ ಭೇಟಿ ನೀಡದ ಜಾಗಗಳ ಕುರಿತ ವಿಡಿಯೋ ಕೂಡ ತೋರಿಸಲಾಯಿತು. ಗಾಜಿನ ಮನೆಯನ್ನು ದೀಪಗಳಿಂದ ಶೃಂಗರಿಸಿದ್ದು ಅರಮನೆಯಂತೆ ಭಾಸವಾಗುತ್ತಿತ್ತು.
-ಪ್ರಶಾಂತ, ಬೆಂಗಳೂರು ನಿವಾಸಿ

ಶಾಲೆಯಲ್ಲಿ ಪಾಠ ಮಾಡುವಾಗ ರಾಜಭವನ ಎಂದು ಕೇಳಿದ್ದೆ ಅಷ್ಟೇ. ಈಗ ನೋಡಿ ಸಂತೋಷವಾಯಿತು. ಹೊರಗೆ ಬರಲು ಇಷ್ಟವೇ ಇರಲಿಲ್ಲ. ಉದ್ಯಾನ ಹಾಗೂ ಗಾಜಿನ ಮನೆ ತುಂಬಾ ಚೆನ್ನಾಗಿದೆ.
-ಪರಿಣಿತ, ವಿದ್ಯಾರ್ಥಿನಿ, ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next