Advertisement

ವಾರ್ತಾ ಇಲಾಖೆ ನಿರ್ಮಾಣದ ಸಾಕ್ಷ್ಯಚಿತ್ರಕ್ಕೆ ರಜತ ಕಮಲ: ಮುಖ್ಯಮಂತ್ರಿಗಳಿಂದ ಅಭಿನಂದನೆ

06:59 PM Oct 01, 2022 | Team Udayavani |

ಬೆಂಗಳೂರು: ಭಾರತ ಸರ್ಕಾರವು 2020ರ ಕ್ಯಾಲೆಂಡರ್ ವರ್ಷಕ್ಕೆ ಅನ್ವಯಿಸಿದಂತೆ ನೀಡುವ 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಪೈಕಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ಮಿಸಿದ್ದ ‘ನಾದದ ನವನೀತ ಡಾ. ಪಂಡಿತ್ ವೆಂಕಟೇಶ್ ಕುಮಾರ್ʼ ಸಾಕ್ಷ್ಯಚಿತ್ರವು ರಜತ ಕಮಲ ಪ್ರಶಸ್ತಿ ಸ್ವೀಕರಿಸಿರುವುದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಲಾಖೆಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement

ಧಾರವಾಡದ ಅದ್ವಿತೀಯ ಹಿಂದುಸ್ತಾನಿ ಗಾಯಕರಾದ ಪಂಡಿತ್ ಎಂ ವೆಂಕಟೇಶ್ ಕುಮಾರ್ ಅವರ ಬಗ್ಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು 2020ರಲ್ಲಿ ಸಾಕ್ಷ್ಯಚಿತ್ರವನ್ನು ನಿರ್ಮಿಸಿತ್ತು. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ ಅವರು ಈ ಸಾಕ್ಷ್ಯಚಿತ್ರವನ್ನು ನಿರ್ದೇಶಿಸಿದ್ದರು. ಇದು 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯ ಚಲನಚಿತ್ರೇತರ ವಿಭಾಗದ ಕಲೆ ಮತ್ತು ಸಂಸ್ಕೃತಿ ವಿಭಾಗದಲ್ಲಿ ರಜತ ಕಮಲ ಪ್ರಶಸ್ತಿಗೆ ಭಾಜನವಾಗಿದೆ. ಶುಕ್ರವಾರ (ಸೆ. 30) ಸಂಜೆ ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಘನತೆವೆತ್ತ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ರಜತ ಕಮಲ ಪ್ರಶಸ್ತಿ ಪ್ರದಾನ ಮಾಡಿದರು.

68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಪೈಕಿ ಕನ್ನಡದ ‘ಡೊಳ್ಳುʼ ಅತ್ಯುತ್ತಮ ಕನ್ನಡ ಚಲನಚಿತ್ರ ಮತ್ತು ಪರಿಸರ ಸಂರಕ್ಷಣೆ ವಿಭಾಗದಲ್ಲಿ ‘ತಲೆದಂಡʼ ಚಲನಚಿತ್ರವು ಅತ್ಯುತ್ತಮ ಪ್ರಶಸ್ತಿಯನ್ನು ಸೆ.30 ರಂದು ನಡೆದ ಸಮಾರಂಭದಲ್ಲಿ ಸ್ವೀಕರಿಸಿದವು. ಅದೇ ರೀತಿ ವಾರ್ತಾ ಇಲಾಖೆಯು ಸಹ ನಾದದ ನವನೀತ ಸಾಕ್ಷ್ಯಚಿತ್ರವು ರಜತ ಕಮಲ ಪ್ರಶಸ್ತಿಯನ್ನು ಸ್ವೀಕರಿಸಿದೆ. ಈ ಎಲ್ಲಾ ಚಲನಚಿತ್ರ ಮತ್ತು ಸಾಕ್ಷ್ಯಚಿತ್ರಗಳ ನಿರ್ಮಾಣ ತಂಡಗಳ ಸಾಧನೆಯನ್ನು ಮುಖ್ಯಮಂತ್ರಿಗಳು ಮುಕ್ತಕಂಠದಿಂದ ಅಭಿನಂದಿಸಿದ್ದಾರೆ.

ರಾಷ್ಟ್ರಮಟ್ಟದಲ್ಲಿ ರಜತ ಕಮಲ ಪ್ರಶಸ್ತಿಗಳ ಮೂಲಕ ಕನ್ನಡ ಚಿತ್ರರಂಗದ ಸಾಧನೆಯನ್ನು ಉನ್ನತ ಮಟ್ಟಕ್ಕೆ ಏರಿಸಿರುವ 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತ ಚಲನಚಿತ್ರಗಳ ಎಲ್ಲಾ ನಿರ್ಮಾಪಕರು, ನಿರ್ದೇಶಕರು ಹಾಗೂ ಚಿತ್ರತಂಡದ ಸಾಧನೆಯ ಶ್ಲಾಘನೀಯ. ಅದರಲ್ಲೂ ಸಾಕ್ಷ್ಯಚಿತ್ರ ನಿರ್ಮಾಣದಲ್ಲಿ ವಾರ್ತಾ ಇಲಾಖೆಯು ಸದಾ ಮುಂಚೂಣಿಯಲ್ಲಿದೆ. ಇಲಾಖೆಯ ಸಂಗ್ರಹಗಾರದಲ್ಲಿ ಅಪರೂಪದ ಸಾಕ್ಷ್ಯಚಿತ್ರಗಳಿವೆ. 2020ರ ಸಾಲಿನದ್ದು ಶ್ರೇಷ್ಠ ಸಾಧನೆಯಾಗಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂರ್ಪಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಅವರು ಬಣ್ಣಿಸಿದ್ದಾರೆ.

ಇದೇ ಮೊದಲ ಬಾರಿಗೆ ವಾರ್ತಾ ಮತ್ತು ಸಾರ್ವಜನಿಕ ಸಂರ್ಪಕ ಇಲಾಖೆಯು ನಿರ್ಮಿಸಿರುವ ಸಾಕ್ಷ್ಯಚಿತ್ರವು ರಾಷ್ಟ್ರೀಯ ಮಟ್ಟದಲ್ಲಿ ರಜತ ಕಮಲ ಪ್ರಶಸ್ತಿಗೆ ಭಾಜನವಾಗಿದೆ. ಹಾಗೆಯೇ, 2020ರಲ್ಲಿ ವಾರ್ತಾ ಇಲಾಖೆಯೊಂದೇ ದೇಶದಲ್ಲಿ ಈ ಬಗೆಯ ಸಾಧನೆಯನ್ನು ಮಾಡಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಡಾ. ಹರ್ಷ ಪಿ. ಎಸ್ ಅವರು ಇಲಾಖೆಯ ಮಾಧ್ಯಮಕೇಂದ್ರದಲ್ಲಿ ಶನಿವಾರ ಸಂಜೆ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

Advertisement

ಇಲಾಖೆಗೆ ಚಿತ್ರರಂಗದ ಅತ್ಯುನ್ನತ ಪ್ರಶಸ್ತಿಯಾದ ರಜತ ಕಮಲ ಪ್ರಶಸ್ತಿ ಸಂದಿರುವುದು ಇಲಾಖೆಯ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿದೆ. ಇದಕ್ಕಾಗಿ ಶ್ರಮಿಸಿದ ಇಲಾಖೆಯ ಎಲ್ಲಾ ಸಿಬ್ಬಂದಿಗಳನ್ನು ಮತ್ತು ವೈಯಕ್ತಿಕವಾಗಿ ಹಿರಿಯ ಹಾಗೂ ಖ್ಯಾತ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ ಅವರನ್ನು ವೈಯಕ್ತಿಕವಾಗಿ ಅಭಿನಂದಿಸುವುದಾಗಿ ಅವರು ಈ ಸಂದರ್ಭದಲ್ಲಿ ತಿಳಿಸಿದರು.

ಇಲಾಖೆಯು ಇನ್ಮುಂದೆಯೂ ಉತ್ತಮ ಸದಭಿರುಚಿಯ ಸಾಕ್ಷ್ಯಚಿತ್ರಗಳನ್ನು ನಿರ್ಮಿಸಲಿದೆ ಎಂದು ಅವರು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next