ಜೈಪುರ : ದೇವತಾ ಶ್ಲೋಕಗಳನ್ನು ಹಾಕಬೇಕಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರಕಾರದ ಜನಪ್ರಿಯ ಘೋಷಣೆಗಳನ್ನು ಹಾಕಿ ಪ್ರಕಟಿಸಲಾಗಿರುವ ರಾಜಸ್ಥಾನದ ಈ ವಿವಾಹ ಆಮಂತ್ರಣ ಪತ್ರಿಕೆಯು ಇಂಟರ್‌ನೆಟ್‌ನಲ್ಲೀಗ ವೈರಲ್ ಆಗಿದೆ.
ಕರೆಯೋಲೆಯಲ್ಲಿ ಕಂಡುಬರುವಂತೆ ಈ ಮದುವೆಯು ಇಂದು ಎ.29ರಂದು ರಾಜಸ್ಥಾನದ ಝಲವಾರ್ ಜಿಲ್ಲೆಯಲ್ಲಿ ಸಂಪನ್ನಗೊಳ್ಳುತ್ತಿದೆ.
ಮದುವೆ ಆಮಂತ್ರಣ ಪತ್ರಿಕೆಯಲ್ಲಿ ದೇವತಾ ಶ್ಲೋಕಗಳನ್ನು ಹಾಕಬೇಕಾದಲ್ಲಿ ಪ್ರಧಾನಿ ಮೋದಿ ಸರಕಾರದ ಜನಪ್ರಿಯ ಘೋಷಣೆಗಳನ್ನು ಪ್ರಕಟಿಸುವ ಆಲೋಚನೆಯು ವರನ ಚಿಕ್ಕಪ್ಪನದ್ದಾಗಿದೆ. ಆತನು ಪಂಚಾಯತ್ ಅಧಿಕಾರಿಯಾಗಿದ್ದಾನೆ.
ಆಮಂತ್ರಣ ಪತ್ರಿಕೆಯಲ್ಲಿ ಪ್ರಕಟಿಸಲಾಗಿರುವ ಮೋದಿ ಘೋಷಣೆಗಳ ಮೂಲಕ ಜನರಲ್ಲಿ ಪ್ರತೀ ಮನೆಗೆ ಶೌಚಾಲಯ ನಿರ್ಮಿಸುವ ಅಗತ್ಯದ ಬಗ್ಗೆ ಜಾಗೃತಿ ಮೂಡಿಸುವುದು ರಾಮ್‌ವಿಲಾಸ್ ಮೀಣ ಅವರ ಉದ್ದೇಶವಾಗಿದೆ.
ಈ ತಿಂಗಳ ಆದಿಯಲ್ಲಿ ಬೆಂಗಳೂರಿನ ಹುಡುಗ ಆಕಾಶ್ ಜೈನ್ ಪ್ರಧಾನಿ ಮೋದಿಗೆ ತನ್ನ ಸಹೋದರಿಯ ಮದುವೆ ಕರೆಯೋಲೆಯನ್ನು ಟ್ವೀಟ್ ಮಾಡಿ ಅದರಲ್ಲಿ ತಾನು ಸ್ವಚ್ಚ ಭಾರತ್ ಲೋಗೋ ಮುದ್ರಿಸಿರುವುದನ್ನು ಕಾಣಿಸಿದ್ದ.
ಎಲ್ಲರನ್ನೂ ಅಚ್ಚರಿಪಡಿಸುವಂತೆ ಪ್ರಧಾನಿ ಮೋದಿ ಅವರು ಆಕಾಶ್ ಜೈನ್ ನ ಪೋಸ್ಟ್ ಅನು ಮರು ಟ್ವೀಟ್ ಮಾಡಿದ್ದರಲ್ಲದೆ ಟ್ವಿಟರ್‌ನಲ್ಲಿ ಆತನ ಹಿಂಬಾಲಕರಾಗಿದ್ದರು !