Advertisement

12ರ ಹರೆಯದಲ್ಲಿನ ಮದುವೆಗೆ ಪತಿಯ FB ಸಾಕ್ಷ್ಯ: ಮದುವೆ ರದ್ದು

06:49 PM Oct 13, 2017 | Team Udayavani |

ಹೊಸದಿಲ್ಲಿ : ಪತಿಯ ಫೇಸ್‌ ಬುಕ್‌ನಲ್ಲಿ ದಾಖಲಾಗಿದ್ದ ತನ್ನ ವಿವಾಹ ದಿನಾಂಕವನ್ನೇ ಸಾಕ್ಷ್ಯವಾಗಿ ಬಳಸಿಕೊಂಡ ರಾಜಸ್ಥಾನದ 19ರ ಹರೆಯದ ಸುಶೀಲಾ ಬಿಷ್ಣೋಯಿ, ತಾನು ಆಪ್ರಾಪ್ತ ವಯಸ್ಸಿನವಳಿದ್ದಾಗ ನಡೆದಿದ್ದ ತನ್ನ ಮದುವೆಯನ್ನು ನ್ಯಾಯಾಲಯದ ಮೂಲಕ ರದ್ದು ಪಡಿಸಿಕೊಂಡಿರುವ ಕುತೂಹಲಕಾರಿ ಘಟನೆ ವರದಿಯಾಗಿದೆ.

Advertisement

“ನಮ್ಮ ಮದುವೆಯ ನಿಶ್ಚತಾರ್ಥ ನಡೆದದ್ದೇ ಇಲ್ಲ’ ಎಂದಿದ್ದ ಸುಶೀಲಾ ಳ ಪತಿ, ಆಕೆಯ ಕೇಸನ್ನು ವಿಫ‌ಲಗೊಳಿಸುವ ಸರ್ವ ಯತ್ನ ಮಾಡಿದ್ದ. ಕೇಸು ಹಿಂಪಡೆಯುವಂತೆ ಸುಶೀಲಾಗೆ ಧಮ್‌ಕಿಯನ್ನೂ ಹಾಕಿದ್ದ, ಆದರೆ ಅದ್ಯಾವುದೂ ಫ‌ಲಿಸಲಿಲ್ಲ. 

ಸುಶೀಲಾ ಳ ಅಕ್ರಮ ಮದುವೆಯನ್ನು ರದ್ದುಪಡಿಸುವಲ್ಲಿ ಆಕೆಗೆ ನೆರವಾದವಳು ರಾಜಸ್ಥಾನದಲ್ಲಿ ಬಾಲ್ಯ ವಿವಾಹಗಳ ವಿರುದ್ಧ ಹೋರಾಡುವ ಸಾರಥಿ ಟ್ರಸ್ಟ್‌ ಎಂಬ ಸೇವಾ ಸಂಘಟನೆಯ ಕಾರ್ಯಕರ್ತೆ ಕೃತಿ ಭಾರತಿ.

ಸುಶೀಲಾ ಬಿಷ್ಣೋಯಿ ಮದುವೆ ನಡೆದದ್ದು ಆಕೆ 12 ವರ್ಷ ಪ್ರಾಯದವಳಿದ್ದಾಗ, 2010ರಲ್ಲಿ ರಾಜಸ್ಥಾನದ ಬಾರ್‌ವೆುರ್‌ ಜಿಲ್ಲೆಯಲ್ಲಿ ನಡೆದಿದ್ದ ರಹಸ್ಯ ವಿವಾಹ ಸಮಾರಂಭದಲ್ಲಿ.

ರಾಜಸ್ಥಾನದಲ್ಲಿ  ಹುಡುಗಿಯರನ್ನು ಚಿಕ್ಕವರಿರುವಾಗಲೇ ಮದುವೆ ಮಾಡಿಕೊಡುವುದು ಸಾಮಾನ್ಯ. ಹೀಗೆ ಮನೆಯವರ ಬಲವಂತದಿಂದ ವಿವಾಹ ಬಂಧನಕ್ಕೆ ಒಳಗಾಗುವ  ಹೆಣ್ಣು ಮಕ್ಕಳು 18ರ ಹರೆಯ ತುಂಬುವ ತನಕ ಹೆತ್ತವರ ಮನೆಯಲ್ಲೇ ಇರುತ್ತಾರೆ. ಅನಂತರ ಅವರನ್ನು ಗಂಡನ ಮನೆಗೆ ಕಳುಹಿಸಿಕೊಟ್ಟು ಪ್ರಸ್ತ ನೆರವೇರುವಂತೆ ಮಾಡುತ್ತಾರೆ. 

Advertisement

12ರ ಹರೆಯದಲ್ಲೇ ಹೆತ್ತವರಿಂದ ಮದುವೆ ಮಾಡಿಸಲ್ಪಟ್ಟಿದ್ದ  ಸುಶೀಲಾ ಬಿಷ್ಣೋಯಿ ಹದಿನೆಂಟರ ಹರೆಯದ ವರೆಗೂ ಹೆತ್ತವರ ಮನೆಯಲ್ಲಿದ್ದುಕೊಂಡು ಶಿಕ್ಷಣ ನಡೆಸಿದಳು. ಆಗ ಆಕೆಯನ್ನು ಗಂಡನ ಮನೆಗೆ ಕಳುಹಿಸಲು ಹೆತ್ತವರು ಸಿದ್ಧತೆ ನಡೆಸಿದರು.

ಆದರೆ ಸುಶೀಲಾಗೆ ತನ್ನನ್ನು ವರಿಸಿದಾತನು ಕುಡುಕನೆಂಬ ವಿಷಯ ಗೊತ್ತಾಯಿತು. ಉನ್ನತ ಶಿಕ್ಷಣ ನಡೆಸುವಾಸೆ ಆಕೆಯಲ್ಲಿ ತೀವ್ರವಾಗಿತ್ತು. ಆದರೆ ಹೆತ್ತವರ ಒತ್ತಡ ತಾಳಲಾರದೆ ಸುಶೀಲಾ ಒಂದು ದಿನ ಮನೆ ಬಿಟ್ಟು ಓಡಿ ಹೋದಳು. 

ಆಗ ಆಕೆಯ ಅದೃಷ್ಟಕ್ಕೆ ಆಕೆಗೆ ಸಾರಥಿ ಟ್ರಸ್ಟ್‌ ನ ಕಾರ್ಯಕರ್ತೆ ಕೃತಿ ಭಾರತಿ ಅವರ ಪರಿಚಯವಾಯಿತು. ಕೃತಿ ಅವರು ಸುಶೀಲಾಳ ಗೋಳನ್ನು ಅರ್ಥ ಮಾಡಿಕೊಂಡು ಆಕೆಯ ಕಾನೂನು ಬಾಹಿರ ಮದುವೆಯನ್ನು ಸಾಬೀತುಪಡಿಸುವ ಸಾಕ್ಷ್ಯವನ್ನು ಸಂಗ್ರಹಿಸಲು ಮುಂದಾದರು.

ಆಗ ಸುಶೀಲಾ ತನ್ನ ಪತಿಯ ಫೇಸ್‌ ಬುಕ್‌ನಲ್ಲಿ ದಾಖಲಾಗಿದ್ದ ತನ್ನ ಮದುವೆ ದಿನಾಂಕವನ್ನು ಸಾಕ್ಷ್ಯವಾಗಿ ಕಾಣಿಸಿದಳು. ಪ್ರತೀ ವರ್ಷ ಮದುವೆ ದಿನಾಂಕದಂದು ಪತಿಯ ಅನೇಕ ಗೆಳೆಯರು, ಬಂಧುಗಳು ಆತನಿಗೆ ವೈವಾಹಿಕ ಶುಭಾಶಯ ಕೋರುವುದನ್ನು ಸಾಕ್ಷ್ಯವಾಗಿ ಬಳಸಲು ಅನುಕೂಲವಾಯಿತು. 

ಈ ಸಾಕ್ಷ್ಯವನ್ನು ಸ್ವೀಕರಿಸಿದ ನ್ಯಾಯಾಲಯ ಸುಶೀಲಾ ಬಿಷ್ಣೋಯಿ ಮದುವೆ ಆಕೆ ಅಪ್ರಾಪ್ತ ವಯಸ್ಸಿನವಳಿದ್ದಾಗ, 12ರ ಹರೆಯದಲ್ಲೇ ನಡೆದಿತ್ತು ಎನ್ನುವುದನ್ನು ಒಪ್ಪಿಕೊಂಡು ಕಳೆದ ಸೋಮವಾರ ಆಕೆಯ ಈ ಅಕ್ರಮ ವಿವಾಹವನ್ನು ರದ್ದುಪಡಿಸಿತು.

ಕೆಲ ದಿನಗಳ ಹಿಂದಷ್ಟೇ ಸುಪ್ರೀಂ ಕೋರ್ಟ್‌ ಅಪ್ತಾಪ್ತ ವಯಸ್ಸಿನ ಪತ್ನಿಯ ಜತೆಗೆ ಪತಿಯು ನಡೆಸುವ ಸೆಕ್ಸ್‌ ರೇಪ್‌ ಎನಿಸಿಕೊಳ್ಳುತ್ತದೆ ಎಂದು ತೀರ್ಪು ನೀಡಿರುವುದು ಉಲ್ಲೇಖನೀಯವಾಗಿದೆ.  

Advertisement

Udayavani is now on Telegram. Click here to join our channel and stay updated with the latest news.

Next